ADVERTISEMENT

ನೆರೆ ರಾಜ್ಯಗಳಂತೆ ಪಕ್ಷಾಂತರಿಗಳ ಸೋಲಿಸಿ

ಜಂಟಿ ಸುದ್ದಿಗೋಷ್ಠಿಯಲ್ಲಿ ಪ್ರಗತಿಪರ ಸಾಹಿತಿಗಳಿಂದ ಮತದಾರರಲ್ಲಿ ಮನವಿ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2019, 12:56 IST
Last Updated 2 ಡಿಸೆಂಬರ್ 2019, 12:56 IST

ಹೊಸಪೇಟೆ: ‘ಪಕ್ಷಾಂತರ ಮಾಡಿದವರಿಗೆ ನೆರೆಯ ರಾಜ್ಯಗಳಲ್ಲಿ ಜನ ಸೋಲಿಸಿ ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿದಿದ್ದಾರೆ. ಆ ಕೆಲಸ ರಾಜ್ಯದ ಜನ ಉಪಚುನಾವಣೆಯಲ್ಲಿ ಮಾಡಿ ರಾಜ್ಯದ ಗೌರವ ಕಾಪಾಡಬೇಕು’

ಹೀಗೆ ಮನವಿ ಮಾಡಿದವರು ಪ್ರಗತಿಪರ ಸಾಹಿತಿಗಳು. ಸೋಮವಾರ ನಗರದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ‘ಮುಖ್ಯಮಂತ್ರಿ’ ಚಂದ್ರು, ಎಸ್‌.ಜಿ. ಸಿದ್ದರಾಮಯ್ಯ, ವಸುಂಧರಾ ಭೂಪತಿ, ಬಿ.ಟಿ. ಲಲಿತಾ ನಾಯ್ಕ ಹಾಗೂ ಕೆ. ಷರೀಫಾ ಮತದಾರರಲ್ಲಿ ಮನವಿ ಮಾಡಿದರು.

‘ಇತ್ತೀಚೆಗೆ ಪಶ್ಚಿಮ ಬಂಗಾಳ, ಗುಜರಾತಿನಲ್ಲಿ ನಡೆದ ಉಪಚುನಾವಣೆಯಲ್ಲಿ ಅಲ್ಲಿನ ಜನ ಪಕ್ಷಾಂತರಿಗಳನ್ನು ಸೋಲಿಸಿದ್ದಾರೆ. ರಾಜ್ಯದಲ್ಲಿ ರಾಜೀನಾಮೆ ನೀಡಿರುವ 17 ಶಾಸಕರಲ್ಲಿ ಯಾರೊಬ್ಬರೂ ಕೂಡ ಕ್ಷೇತ್ರದ ಅಭಿವೃದ್ಧಿ, ಜನರ ಹಿತಕ್ಕಾಗಿ ರಾಜೀನಾಮೆ ನೀಡಿಲ್ಲ. ಅವರ ವೈಯಕ್ತಿಕ ಸ್ವಾರ್ಥಕ್ಕಾಗಿ ಈ ಕೆಲಸ ಮಾಡಿದ್ದಾರೆ. ಮೊದಲು ಅವರು ಅತೃಪ್ತರಾಗಿದ್ದರು. ನಂತರ ಅನರ್ಹರಾದರು. ತದನಂತರ ಅತಂತ್ರರಾದ ಅವರನ್ನು ಅಧಿಕೃತ ಶಾಸಕರಾಗಿ ಮಾಡಲು ಬಿಜೆಪಿ ಹೊರಟಿದೆ. ಇದು ಆ ಪಕ್ಷದ ಅನೈತಿಕ, ನೀಚ ರಾಜಕಾರಣಕ್ಕೆ ಸಾಕ್ಷಿ’ ಎಂದು ಟೀಕಿಸಿದರು.

ADVERTISEMENT

‘ಐದಾರೂ ವರ್ಷಗಳಿಂದ ಇಡೀ ಚುನಾವಣಾ ವ್ಯವಸ್ಥೆಯೇ ಕುಲಗೆಟ್ಟಿದೆ. ಜನಪ್ರತಿನಿಧಿಗಳು ಇಷ್ಟು ಕೆಟ್ಟ ರಾಜಕೀಯ ಎಂದೂ ಮಾಡಿರಲಿಲ್ಲ. ಜನರ ಸಮಸ್ಯೆಗಳ ಕುರಿತು ಒಬ್ಬರೂ ಮಾತನಾಡುತ್ತಿಲ್ಲ. ಪರಸ್ಪರ ಟೀಕೆ, ನಿಂದನೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಅಂತಹ ಜನಪ್ರತಿನಿಧಿಗಳಿಗೆ ಪಾಠ ಕಲಿಸಬೇಕಾದರೆ ಚುನಾವಣೆ ಬಿಟ್ಟರೆ ಜನರಿಗೆ ಬೇರೆ ಮಾರ್ಗವಿಲ್ಲ. ಅಂತಹ ಅವಕಾಶ ಈಗ ಬಂದಿದ್ದು, ಮತದಾರರು ಅನರ್ಹರನ್ನು ಬಿಟ್ಟು, ಉತ್ತಮರಾದವರನ್ನು ಗೆಲ್ಲಿಸಬೇಕು. ವಿಜಯನಗರದಲ್ಲಿ ಕಾಂಗ್ರೆಸ್‌ ವೆಂಕಟರಾವ್‌ ಘೋರ್ಪಡೆ ಅವರನ್ನು ನಿಲ್ಲಿಸಿದೆ. ಅವರೊಬ್ಬ ಸಜ್ಜನ ರಾಜಕಾರಣಿಯಾಗಿದ್ದು, ಅವರನ್ನು ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.

‘ವ್ಯವಸ್ಥಿತವಾಗಿ ಸಂವಿಧಾನ ತಿರುಚುವ, ಅದರ ಕಗ್ಗೊಲೆ ಮಾಡುವ, ಪ್ರಜಾಪ್ರಭುತ್ವಕ್ಕೆ ಅಪಚಾರ ಎಸಗುವಂತಹ ಕೆಲಸಗಳು ಕೇಂದ್ರ ಸರ್ಕಾರದಿಂದ ನಡೆಯುತ್ತಿದೆ. ಅಮಿತ್‌ ಶಾ ಅವರು ಗೃಹ ಸಚಿವರಾಗಲು ಅರ್ಹರೇ ಇಲ್ಲ. ಅವರು ಆ ಸ್ಥಾನದಲ್ಲಿ ಕುಳಿತು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ’ ಎಂದು ಆರೋಪಿಸಿದರು.

‘ಭಾರತ ಬಹುಸಂಸ್ಕೃತಿಯ ನೆಲೆಬೀಡು. ಆದರೆ, ಏಕಧರ್ಮ, ಏಕಸಂಸ್ಕೃತಿ, ಏಕಭಾಷೆ ಹೇರುವ ಹುನ್ನಾರ ನಡೆಯುತ್ತಿದೆ. ಅದಕ್ಕೆ ಜನ ಆಸ್ಪದ ಕೊಡಬಾರದು. ಹಿಂದಿ ಭಾಷೆ ಹೇರಿ, ಪ್ರಾದೇಶಿಕ ಭಾಷೆಗಳ ಕತ್ತು ಹಿಚುಕುವ ಕೆಲಸ ನಡೆಯುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಕೂಡ ಕುಲಗೆಡಿಸಲಾಗುತ್ತಿದೆ. ಈಗ ಜನ ಎಚ್ಚರಗೊಂಡು ಅದರ ವಿರುದ್ಧ ಧ್ವನಿ ಎತ್ತದಿದ್ದರೆ ಒಕ್ಕೂಟ ವ್ಯವಸ್ಥೆ ಉಳಿಯುವುದಿಲ್ಲ’ ಎಂದು ಆತಂಕ ವ್ಯಕ್ತಪಡಿಸಿದರು.

‘ಪ್ರಜಾಪ್ರಭುತ್ವ ಉಳಿವಿಗಾಗಿ ಸಂವಿಧಾನ ಬಚಾವ್‌’ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಸಿ.ಕೆ. ಜಗದೀಶ್‌, ಮುಖಂಡರಾದ ಜೆ.ಎನ್‌. ಕಾಳಿದಾಸ್‌, ಸೋಮಶೇಖರ್‌ ಬಣ್ಣದಮನೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.