ADVERTISEMENT

ಒಣಮೆಣಸಿನಕಾಯಿಗೆ ಬೆಂಬಲ ಬೆಲೆ ಘೋಷಣೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2025, 16:03 IST
Last Updated 6 ಮಾರ್ಚ್ 2025, 16:03 IST
ಬಳ್ಳಾರಿಯಲ್ಲಿ ಗುರುವಾರ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಪ್ರತಿಭಟನೆ ನಡೆಯಿತು
ಬಳ್ಳಾರಿಯಲ್ಲಿ ಗುರುವಾರ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಪ್ರತಿಭಟನೆ ನಡೆಯಿತು   

ಬಳ್ಳಾರಿ: ಒಣಮೆಣಸಿನಕಾಯಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದಡಿ ಬೆಂಬಲ ಬೆಲೆ ಘೋಷಿಸಬೇಕು. ಬಳ್ಳಾರಿಯಲ್ಲಿ ಒಣಮೆಣಸಿನಕಾಯಿ ಮಾರುಕಟ್ಟೆ ಸ್ಥಾಪಿಸಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸಂಘಟನೆಯ ಸದಸ್ಯರು ನಗರದಲ್ಲಿ ಗುರುವಾರ ಬೃಹತ್‌ ಪ್ರತಿಭಟನೆ ನಡೆಸಿದರು. 

ಇಲ್ಲಿನ ಅವ್ವಮ್ಮನಭಾವಿಯಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ರೈತರು, ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಧರಣಿ ನಡೆಸಿದರು. 

ಸಂಘಟನೆಯ ಅಧ್ಯಕ್ಷ ಕರೂರು ಮಾಧವ ರೆಡ್ಡಿ ಮಾತನಾಡಿ, ‘ಬಳ್ಳಾರಿ ಸೇರಿ 10 ಜಿಲ್ಲೆಗಳಲ್ಲಿ ಮೆಣಸಿನಕಾಯಿ ಬೆಳೆಯಲಾಗುತ್ತಿದೆ. ಬಳ್ಳಾರಿ ಒಂದರಲ್ಲೇ ಒಂದೂವರೆ ಲಕ್ಷ ಟನ್‌ಗೂ ಹೆಚ್ಚು ಉತ್ಪಾದನೆ ಆಗುತ್ತದೆ. ಬೆಂಬಲ ಬೆಲೆ ನೀಡಲು ಕೋರಿ ಜಿಲ್ಲೆಯ ಐವರು ಶಾಸಕರು ಮತ್ತು ಸಂಸದರಿಗೂ ಮನವಿ ಪತ್ರ ಕೊಟ್ಟಿದ್ದೇವೆ. ಅವರಿಂದ ಭರವಸೆ ಹೊರತುಪಡಿಸಿ ಮತ್ತೇನೂ ಸಿಕ್ಕಿಲ್ಲ. ಎಲ್ಲರೂ ಸೇರಿ, ರೈತರನ್ನು ಬೀದಿಗೆ ತಂದಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಸಂಘಟನೆಯ ಗೌರವಾಧ್ಯಕ್ಷ ಸಾ. ರಘುನಾಥ ಮಾತನಾಡಿ, ‘ಮಾರುಕಟ್ಟೆಯಲ್ಲಿ ಕಾರ್ಪೊರೇಟ್‌ ದೌರ್ಜನ್ಯ ಸ್ಥಗಿತಗೊಳ್ಳಬೇಕು. ರೈತರು ತಮ್ಮ ಬೆಳೆಗೆ ತಾವೇ ಬೆಲೆ ನಿಗದಿಪಡಿಸಬೇಕು’ ಎಂದು ಆಗ್ರಹಿಸಿದರು.

ತೊಗರಿ ಬೆಳೆ ಹಾನಿಗೆ ಪರಿಹಾರ ನೀಡಲು ಆಗ್ರಹಿಸಿ ಕಲಬುರಗಿಯ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಯುತ್ತಿರುವ ಪ್ರತಿಭಟನೆಯ ಎರಡನೇ ದಿನವಾದ ಗುರುವಾರ ರೈತರೊಬ್ಬರು ಎತ್ತುಗಳ ನಡುವೆ ಕಂಡಿದ್ದು ಹೀಗೆ   –ಪ್ರಜಾವಾಣಿ ಚಿತ್ರ
ಕೇಂದ್ರ ಮತ್ತು ರಾಜ್ಯ ಸರ್ಕಾರ ತಕ್ಷಣವೇ ಆಂಧ್ರಪ್ರದೇಶದ ಮಾದರಿಯಲ್ಲಿ ಒಣಮೆಣಸಿನಕಾಯಿ ಖರೀದಿ ಪ್ರಕ್ರಿಯೆ ಆರಂಭಿಸಬೇಕು. ರೈತರ ಹೋರಾಟಕ್ಕೆ ಸ್ಪಂದಿಸಬೇಕು
ಕರೂರು ಮಾಧವ ರೆಡ್ಡಿ ಅಧ್ಯಕ್ಷ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ
ಮುಂದುವರಿದ ತೊಗರಿ ಬೆಳೆಗಾರರ ಪ್ರತಿಭಟನೆ
ಕಲಬುರಗಿ: ಅತಿವೃಷ್ಟಿ ಹಾಗೂ ನೆಟೆರೋಗದಿಂದ ಹಾನಿಯಾದ ತೊಗರಿ ಬೆಳೆಗೆ ಪರಿಹಾರ ನೀಡುವಂತೆ ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಜಿಲ್ಲಾ ರೈತ ಹೋರಾಟ ಸಮಿತಿ ನೇತೃತ್ವದಲ್ಲಿ ನಡೆಯುತ್ತಿರುವ ಅಹೋರಾತ್ರಿ ಪ್ರತಿಭಟನೆ ಗುರುವಾರವೂ ಮುಂದುವರಿಯಿತು. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ರೈತರು ಭಜನೆ ಮಾಡುತ್ತ ಬುಧವಾರ ರಾತ್ರಿ ಕಳೆದಿದ್ದರು. ಕಚೇರಿ ಆವರಣ ಮುಖ್ಯರಸ್ತೆ ಹಾಗೂ ಎತ್ತುಗಳ ಬಳಿ ರೈತರು ಮಲಗಿಕೊಂಡಿದ್ದರು. ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದ ರಸ್ತೆಗಳಲ್ಲಿ ಬಂಡಿಗಳನ್ನು ನಿಲ್ಲಿಸಿ ಎತ್ತುಗಳನ್ನು ಕಟ್ಟಿ ಹಾಕಿದ್ದಾರೆ. ಹೀಗಾಗಿ ಈ ರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣ ಬಂದ್‌ ಆಗಿದೆ. ರೈತರು ಮೇವನ್ನು ಎತ್ತುಗಳಿಗೆ ಹಾಕಿ ನೀರು ಕುಡಿಸಿದರು. ತಾವು ಸಹ ಅಲ್ಲಿಯೇ ಅಡುಗೆ ಮಾಡಿ ಉಪಾಹಾರ ಊಟ ಸೇವಿಸಿದರು. ಬಿಜೆಪಿ ಹಾಗೂ ಜೆಡಿಎಸ್‌ ನಾಯಕರು ಹಾಗೂ ಕೆಲ ಸ್ವಾಮೀಜಿಗಳು ಪ್ರತಿಭಟನಾ ಸ್ಥಳಕ್ಕೆ ಬಂದು ರೈತರ ಹೋರಾಟಕ್ಕೆ ಬೆಂಬಲ ಘೋಷಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.