ADVERTISEMENT

ಮತಾಂತರ ನಿಷೇಧ ಕಾಯ್ದೆ ಜಾರಿಗೆ ಅಲೆಮಾರಿ ಬುಡ್ಗಜಂಗಮ ಸಂಘಟನೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2020, 11:24 IST
Last Updated 27 ನವೆಂಬರ್ 2020, 11:24 IST
ವಿವಿಧ ಸಂಘಟನೆಗಳ ಮುಖಂಡರು ಶುಕ್ರವಾರ ಹೊಸಪೇಟೆಯಲ್ಲಿ ಉಪವಿಭಾಗಾಧಿಕಾರಿ ಕಚೇರಿಯ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು
ವಿವಿಧ ಸಂಘಟನೆಗಳ ಮುಖಂಡರು ಶುಕ್ರವಾರ ಹೊಸಪೇಟೆಯಲ್ಲಿ ಉಪವಿಭಾಗಾಧಿಕಾರಿ ಕಚೇರಿಯ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು   

ಹೊಸಪೇಟೆ: ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಬೇಕೆಂದು ವಿಜಯನಗರ ನಾಗರಿಕ ವೇದಿಕೆ, ಹಿಂದುಳಿದ ವರ್ಗಗಳ ಒಕ್ಕೂಟ ಹಾಗೂ ಅಲೆಮಾರಿ ಬುಡ್ಗಜಂಗಮ ಸಂಘಟನೆ ಆಗ್ರಹಿಸಿದೆ.

ಈ ಸಂಬಂಧ ಸಂಘಟನೆಯ ಮುಖಂಡರು ಶುಕ್ರವಾರ ಇಲ್ಲಿ ಉಪವಿಭಾಗಾಧಿಕಾರಿ ಶೇಕ್‌ ತನ್ವೀರ್‌ ಆಸಿಫ್‌ ಮೂಲಕ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಒತ್ತಾಯಿಸಿದರು.

ವೇದಿಕೆ ಅಧ್ಯಕ್ಷ ವೈ.ಯಮುನೇಶ್‌ ಮಾತನಾಡಿ, ‘ರಾಜ್ಯ ಹಾಗೂ ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಮತಾಂತರ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ. ಇದರಿಂದ ವಿವಿಧ ಮತ ಧರ್ಮಗಳ ಜನರ ನಡುವೆ ಸಾಮಾಜಿಕ ಧಾರ್ಮಿಕ ಸಾಮರಸ್ಯಕ್ಕೆ ಅಪಾಯ ಎದುರಾಗಿದೆ. ಸಂವಿಧಾನದ 25(1)ನೇ ವಿಧಿಯು ತನಗಿಷ್ಟವಾದ ಧರ್ಮದಲ್ಲಿ ನಂಬಿಕೆ ಇಡಲು, ಧರ್ಮ ಪ್ರಚಾರ ಮಾಡಲು ಅವಕಾಶವಿದೆ. ಆದರೆ ಧರ್ಮ ಪ್ರಚಾರ ಮೂಲಭೂತ ಹಕ್ಕಾಗಿದ್ದರೂ ಆಮಿಷ, ಬಲತ್ಕಾರದ ಮತಾಂತರವು ಸಂವಿಧಾನಬಾಹಿರ ಎಂದು ಹಲವು ಬಾರಿ ಸುಪ್ರಿಂ ಕೋರ್ಟ್ ಹೇಳಿದೆ. ಹಾಗಾಗಿ ಕಾಯ್ದೆ ಜಾರಿಗೆ ತರಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಮತಾಂತರದಿಂದ ಸಾರ್ವಜನಿಕ ಶಾಂತಿ, ಶಿಸ್ತು, ಸುವ್ಯವಸ್ಥೆ ಮತ್ತು ನೆಮ್ಮದಿಗೆ ಭಂಗ ಉಂಟಾದರೆ ಸರ್ಕಾರ ಮಧ್ಯ ಪ್ರವೇಶಿಸಬಹುದೆಂದು ಕೋರ್ಟ್ ಹೇಳಿದೆ. ಧಾರ್ಮಿಕ ಸ್ವಾತಂತ್ರ್ಯ ಅನುಭವಿಸುವಾಗ ರಾಷ್ಟ್ರದ ಹಿತಾಸಕ್ತಿ, ನೀತಿ ಮತ್ತು ನೈರ್ಮಲ್ಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.
ಮತಾಂತರದಿಂದ ಜಾತ್ಯತೀತತೆ ಮತ್ತು ಬಹುಧರ್ಮಗಳ ಸಂಸ್ಕೃತಿಯ ಅಪಾಯ ಎದುರಾಗಬಹುದು’ ಎಂದರು.

ಅಲೆಮಾರಿ ಬುಡ್ಗಜಂಗಮ ಸಂಘಟನೆಯ ಅಧ್ಯಕ್ಷ ಸಣ್ಣ ಮಾರೆಪ್ಪ, ‘ ಧಾರ್ಮಿಕ ಸ್ವಾತಂತ್ರ್ಯಕ್ಕಿಂತ ದೇಶದ ಏಕತೆ, ಜಾತ್ಯತೀತತೆ ಮುಖ್ಯ. ಮತಾಂತರ ಚಟುವಟಿಕೆಗಳಿಂದ ವಿವಿಧ ಕೋಮುಗಳ ನಡುವೆ ಪರಸ್ಪರ ಸಂಶಯ, ಅಪನಂಬಿಕೆ ಉಂಟಾಗಿ ಸಾಮಾಜಿಕ ಸಾಮರಸ್ಯಕ್ಕೆ ಕಂಟಕ ಎದುರಾಗಿದೆ’ ಎಂದು ತಿಳಿಸಿದರು.

ಮುಖಂಡರಾದ ಪ್ರಹ್ಲಾದ ಸ್ವಾಮೀಜಿ, ಗೌಳಿ ರುದ್ರಪ್ಪ, ಅಶ್ವತಪ್ಪ, ಅಗಳಿ ಭಾಸ್ಕರ್, ಹನುಮಂತಪ್ಪ ಪೂಜಾರ್, ಸಣ್ಣಪ್ಪ, ಮೈಲಾರ ಲಿಂಗನಾಯ್ಕ, ತಿಪ್ಪೇಸ್ವಾಮಿ, ಮಲ್ಲಿಕಾರ್ಜುನ, ಗೌಳಿಯಲ್ಲಪ್ಪ, ಪಾಂಡುರಂಗ, ರಾಮು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.