ADVERTISEMENT

ಐ.ಎಸ್‌.ಆರ್‌. ಕಾರ್ಖಾನೆ ಆರಂಭಕ್ಕೆ ಆಗ್ರಹ

ಕಬ್ಬು ಬೆಳೆಗಾರರ ಸಭೆಯಲ್ಲಿ ಒಮ್ಮತದ ಹಕ್ಕೊತ್ತಾಯ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2019, 13:00 IST
Last Updated 11 ಏಪ್ರಿಲ್ 2019, 13:00 IST
ಹೊಸಪೇಟೆಯಲ್ಲಿ ಗುರುವಾರ ನಡೆದ ಕಬ್ಬು ಬೆಳೆಗಾರರ ಸಭೆಯಲ್ಲಿ ರೈತ ಮುಖಂಡ ರಾಮಚಂದ್ರಗೌಡ ಮಾತನಾಡಿದರು–ಪ್ರಜಾವಾಣಿ ಚಿತ್ರ
ಹೊಸಪೇಟೆಯಲ್ಲಿ ಗುರುವಾರ ನಡೆದ ಕಬ್ಬು ಬೆಳೆಗಾರರ ಸಭೆಯಲ್ಲಿ ರೈತ ಮುಖಂಡ ರಾಮಚಂದ್ರಗೌಡ ಮಾತನಾಡಿದರು–ಪ್ರಜಾವಾಣಿ ಚಿತ್ರ   

ಹೊಸಪೇಟೆ: 2019–20ನೇ ಸಾಲಿನಲ್ಲಿ ಇಂಡಿಯನ್‌ ಶುಗರ್‌ ರಿಫೈನರಿ (ಐ.ಎಸ್‌.ಆರ್‌.) ಸಕ್ಕರೆ ಕಾರ್ಖಾನೆ ಕಬ್ಬು ನುರಿಸುವ ಕೆಲಸ ಆರಂಭಿಸಬೇಕು ಎಂದು ಗುರುವಾರ ಇಲ್ಲಿನಚಿತ್ತವಾಡ್ಗೆಪ್ಪ ದೇಗುಲದಲ್ಲಿ ನಡೆದ ಕಬ್ಬು ಬೆಳೆಗಾರರ ಸಭೆಯಲ್ಲಿ ಹಕ್ಕೊತ್ತಾಯ ಮಾಡಲಾಯಿತು.

ರೈತ ಮುಖಂಡ ವೈ. ಯಮುನೇಶ ಮಾತನಾಡಿ, ‘ಕಾರ್ಖಾನೆ ಆರಂಭವಾದರೆ ನೂರಾರು ಕೋಟಿ ರೂಪಾಯಿ ಹಣ ಮಾರುಕಟ್ಟೆಯಲ್ಲಿ ಚಲಾವಣೆಯಾಗಿ ವ್ಯಾಪಾರ ವಹಿವಾಟು ವೃದ್ದಿಯಾಗುತ್ತದೆ. ಅಸಂಘಟಿತ ವಲಯದಲ್ಲಿ ಉದ್ಯೋಗಾವಕಾಶಗಳು ಹೆಚ್ಚಾಗುತ್ತವೆ. ರೈತರಿಗೂ ಸ್ಥಳೀಯವಾಗಿ ಕಬ್ಬಿಗೆ ಉತ್ತಮ ಬೆಲೆ ದೊರೆಯುತ್ತದೆ’ ಎಂದು ಹೇಳಿದರು.

‘ತುಂಗಭದ್ರಾ ಜಲಾಶಯ ವ್ಯಾಪ್ತಿಯ ತಾಲ್ಲೂಕು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಾರ್ಷಿಕ 4 ಲಕ್ಷ ಟನ್ ಕಬ್ಬನ್ನು ಬೆಳೆಯಲಾಗುತ್ತದೆ. ಸ್ಥಳಿಯ ಐ.ಎಸ್.ಆರ್. ಸಕ್ಕರೆ ಕಾರ್ಖಾನೆಗೆ ಮೊದಲಿನಿಂದಲೂ ಕಬ್ಬು ಪೂರೈಸಲಾಗುತ್ತದೆ.ಕಾರ್ಖಾನೆಯಿಂದ ರೈತರಿಗೆ ಪಾವತಿಯಾಗಬೇಕಿದ್ದ ಕಬ್ಬಿನ ಹಳೆ ಬಾಕಿಗೆ ಸಂಬಂಧಿಸಿದಂತೆ ರೈತರು ಮತ್ತು ಕಾರ್ಖಾನೆಯವರ ಮಧ್ಯೆ ವಿವಾದದಿಂದಾಗಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಕಾರ್ಖಾನೆ ಕಬ್ಬು ಅರೆಯುವುದನ್ನು ಸ್ಥಗಿತಗೊಳಿಸಿದೆ’ ಎಂದರು.

ADVERTISEMENT

‘ರೈತರು ಕಬ್ಬನ್ನು ಕಡಿಮೆ ಬೆಲೆಗೆ ಆಲೆಮನೆ ಹಾಗೂ ದೂರದ ಸಕ್ಕರೆ ಕಾರ್ಖಾನೆಗಳಿಗೆ ಸಾಗಿಸುತ್ತ ನಷ್ಟ ಅನುಭವಿಸುತ್ತಿದ್ದಾರೆ. ಅಲ್ಲಿ ಕೆಲಸ ಮಾಡುತ್ತಿದ್ದ ನೂರಾರು ಕುಟುಂಬಗಳು ಬೀದಿ ಪಾಲಾಗಿವೆ. ಕಾರ್ಖಾನೆಯ ಆಡಳಿತ ವರ್ಗವು, ಕಾರ್ಮಿಕರ ಹಾಗೂ ಕಬ್ಬು ಬೆಳೆಗಾರರ ಹಿತದೃಷ್ಟಿಯಿಂದ ಕಬ್ಬು ನುರಿಸಬೇಕು’ ಎಂದು ಒತ್ತಾಯಿಸಿದರು.

ಗುದ್ಲಿ ಪರಶುರಾಮ ಮಾತನಾಡಿ, ‘ರಾಜ್ಯದ ಬಹುತೇಕ ಸಕ್ಕರೆ ಕಾರ್ಖಾನೆಗಳಲ್ಲಿ ಅಲ್ಲಿನ ರೈತರಿಗೆ ಹಳೆ ಬಾಕಿ ಪಾವತಿಯ ವಿವಾದವಿದ್ದರೂ ಕಾರ್ಖಾನೆಯ ಮಾಲೀಕರು ಮತ್ತು ರೈತರ ನಡುವೆ ಸೌಹಾರ್ದಯುತ ಒಪ್ಪಂದ ಮಾತುಕತೆಯ ಫಲವಾಗಿ ಕಾರ್ಖಾನೆಗಳು ಕಬ್ಬು ಅರೆಯುವುದನ್ನು ನಿಲ್ಲಿಸಿಲ್ಲ. ಈ ಭಾಗದ ಆರ್ಥಿಕ ಚಟುವಟಿಕೆಗಳ ಜೀವನಾಡಿಯಂತಿರುವ ಸಕ್ಕರೆ ಕಾರ್ಖಾನೆ ಪುನರಾರಂಭಕ್ಕೆ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

‘ಹೊಸಪೇಟೆ ರೈತರ ಸಂಘ’ದ ಅಧ್ಯಕ್ಷ ಜಿ.ಕೆ. ಹನುಮಂತಪ್ಪ, ‘ಈ ಹಿಂದೆ ನಡೆದ ಎಲ್ಲಾ ಕಹಿ ಘಟನೆಗಳನ್ನು ಮರೆತು ಕಾರ್ಖಾನೆಯ ಮಾಲೀಕರ ಜೊತೆ ಸೌಹಾರ್ದಯುತವಾಗಿ ಮಾತನಾಡಿ ಕಾರ್ಖಾನೆ ಆರಂಭಿಸಬೇಕಿದೆ. ಮಾಲೀಕರು, ಕಬ್ಬು ಬೆಳೆಗಾರರು ಹಾಗೂ ಕಾರ್ಖಾನೆ ನೌಕರರ ಬಗ್ಗೆ ಅಪಾರ ಕಾಳಜಿ ಹೊಂದಿದ್ದಾರೆ. ಈ ಪ್ರದೇಶದ ಕಬ್ಬು ಬೆಳೆಗಾರರು ನಷ್ಟಕ್ಕೀಡಾಗುವುದನ್ನು ತಪ್ಪಿಸಲು ಸ್ಥಳಿಯ ಕಾರ್ಖಾನೆ ಆರಂಭವಾಗುವುದು ಅತ್ಯಂತ ಅಗತ್ಯ’ ಎಂದು ಪ್ರತಿಪಾದಿಸಿದರು.

ರೈತ ಮುಖಂಡರಾದ ಖಾಜಾ ಹುಸೇನಿ ನಿಯಾಜಿ, ಜಂಬಾನಹಳ್ಳಿ ವಸಂತ ಕುಮಾರ, ಸತ್ಯನಾರಾಯಣ, ಗುಜ್ಜಲ ರಾಮಣ್ಣ, ಎಸ್.ಗಾಳೆಪ್ಪ, ಕೊರಡ್ಡಿ ವಾಸಪ್ಪ, ಎಂ. ಗುರುದಪ್ಪ, ರಾಮಣ್ಣ, ವೆಂಕಪ್ಪ ಕನಮೆಹಳ್ಳಿ, ನಾರಾಯಣಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.