ADVERTISEMENT

‘ಅಮಾಯಕರ ಜೀವಕ್ಕೆ ಬೆಲೆ ಇಲ್ಲವೇ?’: ಸದಸ್ಯ ಸಿ.ಡಿ. ಮಹಾದೇವ ಪ್ರಶ್ನೆ

ಸತತ ಚಿರತೆ ದಾಳಿಗೆ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಕಳವಳ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2018, 11:40 IST
Last Updated 13 ಡಿಸೆಂಬರ್ 2018, 11:40 IST
ಹೊಸಪೇಟೆಯಲ್ಲಿ ಗುರುವಾರ ನಡೆದ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯ ಗಾದಿಲಿಂಗಪ್ಪ ಮಾತನಾಡಿದರು–ಪ್ರಜಾವಾಣಿ ಚಿತ್ರ
ಹೊಸಪೇಟೆಯಲ್ಲಿ ಗುರುವಾರ ನಡೆದ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯ ಗಾದಿಲಿಂಗಪ್ಪ ಮಾತನಾಡಿದರು–ಪ್ರಜಾವಾಣಿ ಚಿತ್ರ   

ಹೊಸಪೇಟೆ: ‘ಹಿಂದಿನ ಘಟನೆಗಳಿಂದ ಎಚ್ಚರ ವಹಿಸಿ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಂಡಿದ್ದರೆ ಮೂರು ವರ್ಷದ ಬಾಲಕ ಚಿರತೆಗೆ ಆಹಾರವಾಗುತ್ತಿರಲಿಲ್ಲ. ಮೇಲಿಂದ ಮೇಲೆ ಚಿರತೆ ದಾಳಿಗಳು ನಡೆಯುತ್ತಿದ್ದು, ಅಮಾಯಕರು ಸಾವನ್ನಪ್ಪುತ್ತಿದ್ದಾರೆ. ಅವರ ಜೀವಕ್ಕೆ ಬೆಲೆಯಿಲ್ಲವೇ?’

ಗುರುವಾರ ಇಲ್ಲಿ ನಡೆದ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಹೀಗೆ ಪ್ರಶ್ನಿಸಿದ್ದು ಸದಸ್ಯ ಸಿ.ಡಿ. ಮಹಾದೇವ.

‘ಕಂಪ್ಲಿ ಸಮೀಪದ ಸೋಮಲಾಪುರ, ದೇವಲಾಪುರ, ಮೆಟ್ರಿಯಲ್ಲಿ ಚಿರತೆಗಳ ಹಾವಳಿ ಹೆಚ್ಚಿದೆ. ಜನವಸತಿ ಪ್ರದೇಶಗಳಿಗೆ ಚಿರತೆಗಳು ಬರದಂತೆ ಬೇಲಿ ಹಾಕಬೇಕೆಂದು ಈ ಹಿಂದೆ ಮನವಿ ಸಲ್ಲಿಸಿದ್ದೆವು. ಆದರೆ, ಅರಣ್ಯ ಅಧಿಕಾರಿಗಳು ತಲೆಗೆ ಹಾಕಿಕೊಂಡಿಲ್ಲ. ಇದರ ಪರಿಣಾಮ ಸೋಮಲಾಪುರದಲ್ಲಿ ಮನೆ ಅಂಗಳದಲ್ಲಿ ಆಡುತ್ತಿದ್ದ ಏನು ಅರಿಯದ ಪುಟ್ಟ ಕಂದಮ್ಮನನ್ನು ಚಿರತೆ ಹೊತ್ತುಕೊಂಡು ಹೋಗಿ ಸಾಯಿಸಿದೆ. ಬಾಲಕ ಬಹಳ ಜಾಣನಾಗಿದ್ದ. ಜಿಲ್ಲಾ ಆಡಳಿತ ಪರಿಹಾರ ಕೊಟ್ಟಿದೆ. ಆದರೆ, ಅದರಿಂದ ಜೀವ ಬರುತ್ತದೆಯೇ? ನಿರ್ಲಕ್ಷ್ಯದಿಂದ ಜೀವ ಹೋಯಿತು. ಮಗುವನ್ನು ಸಾಯಿಸಿದ ಕೆಲವೇ ಗಂಟೆಗಳ ಬಳಿಕ ಚಿರತೆ ಮತ್ತೆ ಆ ಗ್ರಾಮದ ಕುರಿಯೊಂದನ್ನು ಸಾಯಿಸಿದೆ’ ಎಂದು ಹೇಳಿದರು.

ADVERTISEMENT

‘ಅರಣ್ಯದಂಚಿನ ಪಟ್ಟಾ ಭೂಮಿಯಲ್ಲಿ ಉಳುಮೆ ಮಾಡುವವರು ಭಯದ ವಾತಾವರಣದಲ್ಲಿ ಕೆಲಸ ಮಾಡುತ್ತಿದ್ದಾರೆ. ಅಗತ್ಯ ಇರುವ ಕಡೆಗಳಲ್ಲಿ ಬೇಲಿ ನಿರ್ಮಿಸಬೇಕು. ಉಪಟಳ ಹೆಚ್ಚಾಗಿರುವ ಚಿರತೆಯನ್ನು ಸೆರೆ ಹಿಡಿದು ಬೇರೆ ಅರಣ್ಯದಲ್ಲಿ ಬಿಡಬೇಕು. ಅಲ್ಲೇ ಸಮೀಪ ಬಿಟ್ಟರೆ ಮತ್ತೆ ಲಗ್ಗೆ ಇಡುವ ಸಾಧ್ಯತೆಗಳು ಹೆಚ್ಚು’ ಎಂದು ಆತಂಕ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ವಲಯ ಅರಣ್ಯ ಸಂರಕ್ಷಣಾಧಿಕಾರಿ ಟಿ. ಭಾಸ್ಕರ್‌, ‘ಸೋಮಲಾಪುರಕ್ಕೆ ಹೊಂದಿಕೊಂಡಂತೆ ದರೋಜಿ ಕರಡಿಧಾಮ ಇದೆ. ಜತೆಗೆ ಗ್ರಾಮದ ಬಳಿ ನಾಲ್ಕು ಎಕರೆ ಪ್ರದೇಶದಲ್ಲಿ ದಟ್ಟ ಪೊದೆ ಬೆಳೆದಿದೆ. ಅದರಲ್ಲಿ ಚಿರತೆಗಳು ಆಶ್ರಯ ಪಡೆದುಕೊಳ್ಳುತ್ತಿವೆ. ಅದನ್ನು ತೆರವುಗೊಳಿಸುತ್ತಿದ್ದೇವೆ. ಅಷ್ಟೇ ಅಲ್ಲ, ಮೂರು ಕಡೆಗಳಲ್ಲಿ ಬೋನ್‌ ಇಟ್ಟಿದ್ದೇವೆ. ಚಿರತೆಯನ್ನು ಸೆರೆ ಹಿಡಿದು ಪ್ರಾಣಿ ಸಂಗ್ರಹಾಲಯಕ್ಕೆ ಕಳಿಸುತ್ತೇವೆ’ ಎಂದು ಭರವಸೆ ನೀಡಿದರು.

‘ಅರಣ್ಯಕ್ಕೆ ಹೊಂದಿಕೊಂಡಿರುವ ಗ್ರಾಮಗಳಲ್ಲಿ ಬೀದಿ ದೀಪಗಳ ವ್ಯವಸ್ಥೆ ಇಲ್ಲ. ಶೌಚಾಲಯ ವ್ಯವಸ್ಥೆ ಇಲ್ಲ. ಬಹಿರ್ದೆಸೆಗೆ ಜನ ಪೊದೆ ಹತ್ತಿರ ಹೋದಾಗ ಚಿರತೆ ದಾಳಿ ನಡೆಸುತ್ತಿವೆ. ಸುತ್ತಮುತ್ತಲಿನ ಎಲ್ಲ ಗ್ರಾಮ ಪಂಚಾಯಿತಿಗಳವರು ಒಂದೊಂದು ಬೋನಿನ ವ್ಯವಸ್ಥೆ ಮಾಡಿಕೊಂಡರೆ ಉತ್ತಮ. ಅರಣ್ಯ ಇಲಾಖೆಯ ಬಳಿ ಬೋನಿನ ಕೊರತೆ ಇದೆ’ ಎಂದರು.

‘ಅರಣ್ಯ ಇಲಾಖೆಯಲ್ಲಿ ಹಣ ಇಲ್ಲವೇ? ನಿಮ್ಮ ಇಲಾಖೆಯ ಅನುದಾನದಿಂದ ಬೋನುಗಳನ್ನು ಖರೀದಿಸಿ, ಗ್ರಾಮ ಪಂಚಾಯಿತಿಗಳ ಮೇಲೆ ಹೊಣೆ ಹಾಕಿದರೆ ಹೇಗೆ?’ ಎಂದು ಕಾರ್ಯನಿರ್ವಾಹಕ ಅಧಿಕಾರಿ ಟಿ. ವೆಂಕೋಬಪ್ಪ ಪ್ರಶ್ನಿಸಿದರು.

ಮಧ್ಯ ಪ್ರವೇಶಿಸಿ ಮಾತನಾಡಿದ ಸಿ.ಡಿ. ಮಹಾದೇವ, ‘ಚಿರತೆ, ಕರಡಿ ದಾಳಿ ತಪ್ಪಿಸಲು ಸಮಗ್ರ ಯೋಜನೆ ಸಿದ್ಧಪಡಿಸಬೇಕು. ನಂತರ ಸರ್ಕಾರದಿಂದ ಒಪ್ಪಿಗೆ ಪಡೆದು ಅದನ್ನು ಅನುಷ್ಠಾನಕ್ಕೆ ತರಬೇಕು. ಈ ವಿಚಾರದಲ್ಲಿ ಎಲ್ಲ ರೀತಿಯ ಸಹಕಾರ ಕೊಡಲು ಸಿದ್ಧ’ ಎಂದು ಹೇಳಿದರು.

‘ಆಯಾ ಗ್ರಾಮದಲ್ಲೇ ಮತಗಟ್ಟೆ ಸ್ಥಾಪಿಸಿ’:

‘ತಾಲ್ಲೂಕಿನ ಚಿಲಕನಹಟ್ಟಿಯ 400 ಮತದಾರರು ಆರೋಹಳ್ಳಿಗೆ ಹೋಗಿ ಮತ ಹಾಕುವ ಸ್ಥಿತಿಯಿದೆ. ಗ್ರಾಮದಲ್ಲಿಯೇ ಮತಗಟ್ಟೆ ಸ್ಥಾಪಿಸಿ ಜನರ ಸಮಸ್ಯೆ ದೂರ ಮಾಡಬೇಕು’ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್‌. ರಾಜಪ್ಪನವರು ಕಂದಾಯ ಅಧಿಕಾರಿಗೆ ಸೂಚಿಸಿದರು.

‘ತಾಲ್ಲೂಕಿನ ಚಿನ್ನಾಪುರ ಗ್ರಾಮಸ್ಥರು ಕೂಡ ಇದೇ ಸಮಸ್ಯೆ ಎದುರಿಸುತ್ತಿದ್ದಾರೆ. ಅವರು ಮೆಟ್ರಿಗೆ ಹೋಗಿ ಮತ ಹಾಕಬೇಕು. ಅವರ ಸ್ವಂತ ಗ್ರಾಮದಲ್ಲೇ ಮತಗಟ್ಟೆ ಸ್ಥಾಪಿಸಿದರೆ ಜನರಿಗೆ ಅನುಕೂಲವಾಗುತ್ತದೆ’ ಎಂದು ಸಿ.ಡಿ. ಮಹಾದೇವ ಸಲಹೆ ನೀಡಿದರು.

‘ಅರ್ಜಿ ಕೊಟ್ಟರೂ ರೇಷನ್‌ ಕಾರ್ಡುಗಳನ್ನು ಕೊಡುತ್ತಿಲ್ಲ. ಎಂಟು ತಿಂಗಳು ಕಳೆದಿವೆ. ಜನ ಇನ್ನೆಷ್ಟು ತಿಂಗಳು ಕಾಯಬೇಕು. ಆಧಾರ್‌ ವಿಷಯದಲ್ಲೂ ಇದೇ ರೀತಿ ಆಗುತ್ತಿದೆ’ ಎಂದು ಸದಸ್ಯೆ ನಾಗವೇಣಿ ಬಸವರಾಜ ಗಮನ ಸೆಳೆದರು.

ಅಧ್ಯಕ್ಷೆ ಜೋಗದ ನೀಲಮ್ಮ, ಉಪಾಧ್ಯಕ್ಷ ಬಿ.ಎಸ್‌. ಶಿವಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.