ADVERTISEMENT

ಸಚಿವೆ ಶಶಿಕಲಾ ಭ್ರಷ್ಟಾಚಾರ ಆರೋಪನ್ಯಾಯಾಂಗ ತನಿಖೆಗೆ ಸಿಪಿಎಂ ಆಗ್ರಹ

​ಪ್ರಜಾವಾಣಿ ವಾರ್ತೆ
Published 26 ಜುಲೈ 2021, 15:33 IST
Last Updated 26 ಜುಲೈ 2021, 15:33 IST

ಹೊಸಪೇಟೆ(ವಿಜಯನಗರ): ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಮೇಲೆ ಹೊರಿಸಿರುವ ಭ್ರಷ್ಟಾಚಾರದ ಗಂಭೀರ ಆರೋಪವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಆರ್‌. ಭಾಸ್ಕರ್ ರೆಡ್ಡಿ ಆಗ್ರಹಿಸಿದರು.

ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಲ್ಯಾಣ ಕರ್ನಾಟಕ ಭಾಗದ ಆರು ಜಿಲ್ಲೆಗಳ ಅಪೌಷ್ಟಿಕ ಮಕ್ಕಳು, ಬಾಣಂತಿ ಹಾಗೂ ಗರ್ಭಿಣಿಯರಿಗೆ ವಿತರಿಸುವ ಮೊಟ್ಟೆಗಳ ಗುತ್ತಿಗೆ ಹಂಚಿಕೆ ವಿಚಾರದಲ್ಲಿ ಭ್ರಷ್ಟಾಚಾರ ನಡೆದಿರುವುದು ಮಾಧ್ಯಮಗಳ ಮೂಲಕ ಬಹಿರಂಗಗೊಂಡಿದೆ. ಗುತ್ತಿಗೆ ನೀಡಲು ಕಮಿಷನ್ ಪಡೆಯುತ್ತಿರುವ ಗಂಭೀರ ಆರೋಪದ ಬಗ್ಗೆ ಸ್ವತಂತ್ರ ತನಿಖೆಗೆ ಆದೇಶಿಸಬೇಕು. ಸಚಿವೆ ಶಶಿಕಲಾ ಜೊಲ್ಲೆ ಮತ್ತು ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಅವರು ರಾಜೀನಾಮೆ ನೀಡಬೇಕು. ಪ್ರಕರಣದ ತನಿಖೆ ನಡೆಸದಿದ್ದಲ್ಲಿ ಪಕ್ಷದಿಂದ ಬರುವ ದಿನಗಳಲ್ಲಿ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಸಿದರು.

ಮುಖಂಡ ಎಂ.ಜಂಬಯ್ಯ ನಾಯಕ ಮಾತನಾಡಿ, ‘ಅಪೌಷ್ಟಿಕತೆ ನಿವಾರಣೆಗಾಗಿ ಜಾರಿಗೆ ತಂದ ಯೋಜನೆಯಲ್ಲೂ ಭ್ರಷ್ಟಾಚಾರ ನಡೆದಿರುವುದು ಖಂಡನಾರ್ಹವಾಗಿದೆ. ಮೊಟ್ಟೆಗಳ ವಿತರಣೆಯ ಗುತ್ತಿಗೆ ಅವ್ಯವಹಾರ ಜೊತೆಗೆ ಅಂಗನವಾಡಿ ಕೇಂದ್ರ ಫಲಾನುಭವಿಗಳಿಗೆ ನೀಡುವ ಪೌಷ್ಟಿಕ ಆಹಾರ ಮತ್ತು ಮೊಟ್ಟೆ ವಿತರಣೆಯಲ್ಲಿ ತಾರತಮ್ಯ ಮಾಡುತ್ತಿರುವ ಆರೋಪವೂ ಕೇಳಿಬಂದಿದೆ. ಈ ಕೂಡಲೇ ಪರೀಶಿಲನೆ ನಡೆಸಿ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಎನ್‌. ಯಲ್ಲಾಲಿಂಗ, ಎಂ.ಕರುಣಾನಿಧಿ ಮತ್ತು ಎಂ.ಗೋಪಾಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.