ADVERTISEMENT

ಬಸ್‌ ಪಾಸ್‌ ನವೀಕರಣಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2019, 12:22 IST
Last Updated 11 ನವೆಂಬರ್ 2019, 12:22 IST
ಆಲ್‌ ಇಂಡಿಯಾ ಡೆಮೊಕ್ರಟಿಕ್‌ ಯುತ್‌ ಆರ್ಗನೈಜೇಶನ್‌ ಸದಸ್ಯರು ಸೋಮವಾರ ಹೊಸಪೇಟೆಯಲ್ಲಿ ಸಾರಿಗೆ ಸಂಸ್ಥೆ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು
ಆಲ್‌ ಇಂಡಿಯಾ ಡೆಮೊಕ್ರಟಿಕ್‌ ಯುತ್‌ ಆರ್ಗನೈಜೇಶನ್‌ ಸದಸ್ಯರು ಸೋಮವಾರ ಹೊಸಪೇಟೆಯಲ್ಲಿ ಸಾರಿಗೆ ಸಂಸ್ಥೆ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು   

ಹೊಸಪೇಟೆ: ಗ್ರಾಮೀಣ ಭಾಗದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಬಸ್‌ ಪಾಸ್‌ ನವೀಕರಿಸಲು ಸಾರಿಗೆ ಸಂಸ್ಥೆ ಕ್ರಮ ಕೈಗೊಳ್ಳಬೇಕೆಂದು ಆಲ್‌ ಇಂಡಿಯಾ ಡೆಮೊಕ್ರಟಿಕ್‌ ಯುತ್‌ ಆರ್ಗನೈಜೇಶನ್‌ ತಾಲ್ಲೂಕು ಘಟಕ ಆಗ್ರಹಿಸಿದೆ.

ಈ ಸಂಬಂಧ ಸೋಮವಾರ ಸಂಘಟನೆಯ ಮುಖಂಡರು ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಕಚೇರಿಯ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.

‘ಈ ಹಿಂದೆ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ನೀಡಿರುವ ಪಾಸ್‌ಗಳಲ್ಲಿ ಅವರ ಗ್ರಾಮದಿಂದ ನಗರದ ವಿಜಯನಗರ ಕಾಲೇಜಿನ ವರೆಗೆ ಎಂದು ನಮೂದಾಗಿದೆ. ಇತ್ತೀಚೆಗೆ ನಗರ ಹೊರವಲಯದ ಜಂಬುನಾಥಹಳ್ಳಿ ಬಳಿ ಸರ್ಕಾರಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ವಸತಿ ನಿಲಯ ಆರಂಭವಾಗಿದ್ದು, ಬಹುತೇಕರು ಅಲ್ಲಿ ಪ್ರವೇಶ ಪಡೆದಿದ್ದಾರೆ. ಈಗ ಹಾಸ್ಟೆಲ್‌ನಿಂದ ನೇರವಾಗಿ ಕಾಲೇಜಿಗೆ ಬರುತ್ತಿದ್ದು, ಅದಕ್ಕಾಗಿ ಹೆಚ್ಚಿನ ಹಣ ಪಾವತಿಸುತ್ತಿದ್ದಾರೆ. ಹಾಗಾಗಿ ಕೂಡಲೇ ಸ್ಥಳದ ವಿವರವನ್ನು ಬದಲಿಸಿ ಕೊಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಬಹುತೇಕರು ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳೇ ಇದ್ದಾರೆ. ನಿತ್ಯ ಹೋಗಿ ಬರಲು ಸ್ವಂತ ಜೇಬಿನಿಂದ ಹಣ ಖರ್ಚು ಮಾಡುತ್ತಿದ್ದಾರೆ. ಇದರಿಂದ ಹೆಚ್ಚಿನ ಆರ್ಥಿಕ ಹೊರೆ ಬೀಳುತ್ತಿದ್ದು, ಕೂಡಲೇ ಅವರ ನೆರವಿಗೆ ಧಾವಿಸಬೇಕು’ ಎಂದು ಆಗ್ರಹಿಸಿದರು.

ಸಂಘಟನೆಯ ಜಿಲ್ಲಾ ಸಂಚಾಲಕ ಎನ್‌. ಜಗದೀಶ್‌, ಅಕಿಕೇಶ್‌, ತಿರುಮಲ, ರಾಜು, ಮಲ್ಲಿಕಾರ್ಜುನ, ಉದಯ್‌, ನಾಗರಾಜ್‌, ಕೃಷ್ಣ, ಪವನ್‌, ಚೇತನ್‌, ಪ್ರಜ್ವಲ್‌, ರಮೇಶ್‌, ಮರಿಯಾ ನಾಯ್ಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.