ADVERTISEMENT

ಚುನಾವಣೆ ಹೊಸ್ತಿಲಿನಲ್ಲಿ ಅಭಿವೃದ್ಧಿ ಪರ್ವ

ಸ್ವಚ್ಛತೆ ಮರೀಚಿಕೆ; ಕುಡಿಯುವ ನೀರಿಗೆ ಸಮಸ್ಯೆ; ಅವೈಜ್ಞಾನಿಕ ಪಾದಚಾರಿ ಮಾರ್ಗ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 22 ಜನವರಿ 2019, 19:46 IST
Last Updated 22 ಜನವರಿ 2019, 19:46 IST
ಹೊಸಪೇಟೆಯ ಪಟೇಲ್‌ ನಗರದಲ್ಲಿ ರಸ್ತೆಗೆ ಸಮನಾಗಿ ಪಾದಚಾರಿ ಮಾರ್ಗ ನಿರ್ಮಿಸಿರುವುದು–ಪ್ರಜಾವಾಣಿ ಚಿತ್ರ
ಹೊಸಪೇಟೆಯ ಪಟೇಲ್‌ ನಗರದಲ್ಲಿ ರಸ್ತೆಗೆ ಸಮನಾಗಿ ಪಾದಚಾರಿ ಮಾರ್ಗ ನಿರ್ಮಿಸಿರುವುದು–ಪ್ರಜಾವಾಣಿ ಚಿತ್ರ   

ಹೊಸಪೇಟೆ: ಚುನಾವಣೆಯ ಹೊಸ್ತಿಲಿನಲ್ಲಿ ಭರದಿಂದ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳು, ಸ್ವಚ್ಛತೆ ಮರೀಚಿಕೆ, ಕುಡಿಯುವ ನೀರಿಗೆ ಸಮಸ್ಯೆ, ಅವೈಜ್ಞಾನಿಕ ಪಾದಚಾರಿ ಮಾರ್ಗ ನಿರ್ಮಾಣ.

ಇದು ನಗರಸಭೆಯ ಮೂರನೇ ವಾರ್ಡ್‌ನಲ್ಲಿ ಕಂಡು ಬರುವದೃಶ್ಯಗಳಿವು. ಈ ವಾರ್ಡ್‌ ವ್ಯಾಪ್ತಿಗೆ ಪಟೇಲ್‌ ನಗರ ಬರುತ್ತದೆ. ನ್ಯಾಯಾಲಯ ಸಂಕೀರ್ಣ, ತಾಲ್ಲೂಕು ಕಚೇರಿ, ಕಾಲೇಜು ಮುಖ್ಯರಸ್ತೆ, ವೇಣುಗೋಪಾಲ್‌ ದೇವಸ್ಥಾನ ಪ್ರಮುಖ ಹೆಗ್ಗುರುತು. ರೈಲು ನಿಲ್ದಾಣ, ಬಸ್‌ ನಿಲ್ದಾಣ ಸನಿಹದಲ್ಲಿವೆ. ಸದಾ ಜನದಟ್ಟಣೆ ಇರುತ್ತದೆ.

ನಗರದ ಮಧ್ಯ ಭಾಗದಲ್ಲಿ ಇರುವುದರಿಂದ ಇಲ್ಲಿನ ಬಡಾವಣೆಗಳಲ್ಲಿ ಮನೆ ಬಾಡಿಗೆ ದುಬಾರಿ. ಎಲ್ಲ ಬಡಾವಣೆಗಳು ಸಿ.ಸಿ.ರಸ್ತೆಯಿಂದ ಕಂಗೊಳಿಸುತ್ತಿವೆ. ಅಂದಹಾಗೆ, ವರ್ಷಕ್ಕೂ ಮೊದಲು ಈ ಪರಿಸ್ಥಿತಿ ಇರಲಿಲ್ಲ. ಯಾವ ರಸ್ತೆಯೂ ಸರಿಯಾಗಿ ಇರಲಿಲ್ಲ. ದೂಳು, ತಗ್ಗು ದಿಣ್ಣೆಗಳಿಂದ ಕೂಡಿದ್ದವು. ವಿಧಾನಸಭೆ ಚುನಾವಣೆಗೂ ಮುನ್ನ ಎಲ್ಲ ರಸ್ತೆಗಳು ಅಭಿವೃದ್ಧಿ ಕಂಡವು.

ADVERTISEMENT

ಈಗ ಸ್ಥಳೀಯ ಸಂಸ್ಥೆಗಳ ಚುನಾವಣೆ ಹೊಸ್ತಿಲಿನಲ್ಲಿ ಇರುವುದರಿಂದ ಅಭಿವೃದ್ಧಿ ಕಾಮಗಾರಿಗಳು ಮತ್ತಷ್ಟು ಚುರುಕು ಪಡೆದಿವೆ. ಎಲ್ಲ ಕಡೆ ಪಾದಚಾರಿ ಮಾರ್ಗ ನಿರ್ಮಾಣ ಕೆಲಸ ಭರದಿಂದ ನಡೆಯುತ್ತಿದೆ. ಆದರೆ, ವೈಜ್ಞಾನಿಕವಾಗಿ ಪಾದಚಾರಿ ಮಾರ್ಗ ನಿರ್ಮಾಣ ಮಾಡದಿರುವುದಕ್ಕೆ ಸ್ಥಳೀಯರು ಅಸಮಾಧಾನ ಹೊರ ಹಾಕಿದ್ದಾರೆ.

‘ಪಾದಚಾರಿ ಮಾರ್ಗ ರಸ್ತೆಗಿಂತ ಎತ್ತರದಲ್ಲಿ ನಿರ್ಮಿಸಬೇಕು. ಆದರೆ, ಪಟೇಲ್‌ ನಗರದಲ್ಲಿ ರಸ್ತೆಗೆ ಸಮನಾಗಿ ನಿರ್ಮಿಸಿದ್ದಾರೆ. ಇದರಿಂದ ಜನ ವಾಹನಗಳನ್ನು ನಿಲ್ಲಿಸುತ್ತಾರೆ. ಜನ ಅನಿವಾರ್ಯವಾಗಿ ರಸ್ತೆ ಮೇಲೆ ಓಡಾಡುವಂತಹ ಪರಿಸ್ಥಿತಿ ಇದೆ. ಪಾದಚಾರಿ ಮಾರ್ಗ ನಿರ್ಮಿಸಿದರೂ ಪ್ರಯೋಜನವಾಗಿಲ್ಲ’ ಎನ್ನುತ್ತಾರೆ ಪಟೇಲ್‌ ನಗರದ ನಿವಾಸಿ ಲಕ್ಷ್ಮಿದೇವಿ, ಕಾಳಮ್ಮ, ಕಲ್ಪನಾ.

‘ಎತ್ತರದಲ್ಲಿ ಪಾದಚಾರಿ ಮಾರ್ಗ ನಿರ್ಮಿಸಬೇಕೆಂದು ಅನೇಕ ಸಲ ಹೇಳಿದ್ದೇವೆ. ಆದರೆ, ಯಾರು ಕಿವಿಗೆ ಹಾಕಿಕೊಂಡಿಲ್ಲ. ಸರ್ಕಾರದ ದುಡ್ಡು ವ್ಯರ್ಥ ಮಾಡಿದಂತಾಗಿದೆ. ಕೌನ್ಸಲರ್‌ ಏನೇ ಸಮಸ್ಯೆ ಹೇಳಿದರೂ ತಕ್ಷಣವೇ ಬರುತ್ತಾರೆ. ಆದರೆ, ಈ ವಿಷಯದಲ್ಲಿ ಗುತ್ತಿಗೆದಾರರು ಸಹ ಅವರ ಮಾತು ಕೇಳುತ್ತಿಲ್ಲ ಅನಿಸುತ್ತಿದೆ’ ಎಂದರು.

‘ಕುಡಿಯುವ ನೀರು, ಸ್ವಚ್ಛತೆ ಇಲ್ಲ. ಸಿಹಿ ನೀರು ಹತ್ತು ನಿಮಿಷ ಬಂದರೆ ಹೆಚ್ಚು. ಅನಿವಾರ್ಯವಾಗಿ ಬೋರ್‌ ನೀರು ಉಪಯೋಗಿಸಬೇಕಾದ ಸ್ಥಿತಿ ಇದೆ. ನಿತ್ಯ ಕಸ ಕೂಡ ಗುಡಿಸುವುದಿಲ್ಲ. ಎಲ್ಲೆಡೆ ಹೊಲಸು ಹರಡಿಕೊಂಡಿರುತ್ತದೆ. ಜನ ಅದರಲ್ಲೇ ಓಡಾಡುವಂತಹ ಪರಿಸ್ಥಿತಿ ಇದೆ’ ಎಂದು ಸ್ಥಳೀಯ ನಿವಾಸಿ ಅಂಜಿನಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.