ADVERTISEMENT

ಶ್ರಾವಣ ಸೋಮವಾರಕ್ಕೆ ಹಂಪಿಗೆ ಭಕ್ತರು

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2019, 14:52 IST
Last Updated 19 ಆಗಸ್ಟ್ 2019, 14:52 IST
ಶ್ರಾವಣ ಸೋಮವಾರದಂದು ಅಪಾರ ಸಂಖ್ಯೆಯ ಭಕ್ತರು ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು
ಶ್ರಾವಣ ಸೋಮವಾರದಂದು ಅಪಾರ ಸಂಖ್ಯೆಯ ಭಕ್ತರು ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು   

ಹೊಸಪೇಟೆ: ಶ್ರಾವಣ ಮಾಸದ ಮೂರನೇ ಸೋಮವಾರ ತಾಲ್ಲೂಕಿನ ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ಭಕ್ತರ ದಂಡು ಕಂಡು ಬಂತು.

ಬೆಳಿಗ್ಗೆ ದೇಗುಲದ ಅರ್ಚಕರು ವಿರೂಪಾಕ್ಷ ಸ್ವಾಮಿಗೆ ವಿಶೇಷ ರೀತಿಯಲ್ಲಿ ಅಲಂಕರಿಸಿ, ಪೂಜೆ ಸಲ್ಲಿಸಿದರು. ಬಳಿಕ ವಿವಿಧ ಕಡೆಗಳಿಂದ ಬಂದಿದ್ದ ನೂರಾರು ಭಕ್ತರು, ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.

ತುಂಗಭದ್ರಾ ನದಿ ಮೈದುಂಬಿಕೊಂಡು ಹರಿಯುತ್ತಿರುವುದರಿಂದ ಜಿಲ್ಲೆ ಸೇರಿದಂತೆ ನೆರೆಯ ಜಿಲ್ಲೆಗಳಿಂದ ಜನ ಬಂದು ಹೋಗುತ್ತಿದ್ದಾರೆ. ನದಿಯಲ್ಲಿ ಮಿಂದೆದ್ದು, ಅದರ ಸೌಂದರ್ಯ ಕಣ್ತುಂಬಿಕೊಂಡು ದೇವರ ದರ್ಶನ ಪಡೆದುಕೊಳ್ಳುತ್ತಿದ್ದಾರೆ. ವಾತಾವರಣ ಸಂಪೂರ್ಣ ತಂಪಾಗಿರುವ ಕಾರಣ ಎಲ್ಲೆಡೆ ಕಾಲ್ನಡಿಗೆಯಲ್ಲಿ ಓಡಾಡಿಕೊಂಡೇ ಸ್ಮಾರಕಗಳನ್ನು ನೋಡುತ್ತಿದ್ದಾರೆ.

ADVERTISEMENT

ವಾರದ ಹಿಂದೆ ನದಿಗೆ ಮೂರು ಲಕ್ಷ ಕ್ಯುಸೆಕ್‌ ನೀರು ಬಿಟ್ಟಿದ್ದರಿಂದ ನದಿ ತಟದ ಗ್ರಾಮಗಳಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಹಂಪಿ, ತಳವಾರಘಟ್ಟ ರಸ್ತೆಯಲ್ಲಿ ನೀರು ಉಕ್ಕಿ ಹರಿದಿತ್ತು. ವಿಜಯ ವಿಠಲ ದೇವಸ್ಥಾನಕ್ಕೆ ಹೋಗಲು ಪ್ರವಾಸಿಗರು ತೀವ್ರ ತೊಂದರೆ ಅನುಭವಿಸುತ್ತಿದ್ದರು. ಕೆಲ ಪ್ರವಾಸಿಗರನ್ನು ತೆಪ್ಪದ ಸಹಾಯದಿಂದ ಅಲ್ಲಿಂದ ಸುರಕ್ಷಿತವಾಗಿ ಕಳುಹಿಸಿಕೊಡಲಾಗಿತ್ತು. ಈಗ ಅಂತಹ ಪರಿಸ್ಥಿತಿ ಇಲ್ಲ. ಎಲ್ಲವೂ ಮೊದಲಿನಂತೆ ಸಹಜ ಸ್ಥಿತಿಗೆ ಬಂದಿದ್ದು, ಪ್ರವಾಸಿಗರು ಎಲ್ಲೆಡೆ ಮುಕ್ತವಾಗಿ ಓಡಾಡುವಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.