ADVERTISEMENT

ಅಲ್ಪ ಜಮೀನಲ್ಲಿಯೇ ಹಲವು ಬೆಳೆ

ಸಂಡೂರು ತಾಲ್ಲೂಕಿನ ಜಿಗೇನಹಳ್ಳಿ ಗ್ರಾಮದ ಜಮೀನಿನಲ್ಲಿ ಹನಿ ನೀರಾವರಿ ವ್ಯವಸ್ಥೆ

ಎ.ಎಂ.ಸೋಮಶೇಖರಯ್ಯ
Published 20 ಅಕ್ಟೋಬರ್ 2023, 6:02 IST
Last Updated 20 ಅಕ್ಟೋಬರ್ 2023, 6:02 IST
ಸಂಡೂರು ತಾಲ್ಲೂಕಿನ ಜಿಗೇನಗಳ್ಳಿ ಗ್ರಾಮದ ವೆಂಕಟೇಶ್ ತಮ್ಮ ಜಮೀನಿನಲ್ಲಿ ನೆಟ್ಟಿರುವ ವಿವಿಧ ಮರ, ಗಿಡಗಳ ಮಧ್ಯ ಬೆಳೆದಿರುವ ರೆಷ್ಮೆ
ಸಂಡೂರು ತಾಲ್ಲೂಕಿನ ಜಿಗೇನಗಳ್ಳಿ ಗ್ರಾಮದ ವೆಂಕಟೇಶ್ ತಮ್ಮ ಜಮೀನಿನಲ್ಲಿ ನೆಟ್ಟಿರುವ ವಿವಿಧ ಮರ, ಗಿಡಗಳ ಮಧ್ಯ ಬೆಳೆದಿರುವ ರೆಷ್ಮೆ   

ಕೂಡ್ಲಿಗಿ: ಸಂಡೂರು ತಾಲ್ಲೂಕಿನ ಜಿಗೇನಹಳ್ಳಿ ಗ್ರಾಮದ ಯುವ ರೈತ ಎ. ವೆಂಕಟೇಶ್ ತನ್ನ ಜಮೀನಿನಲ್ಲಿ ವಿವಿಧ ಬೆಳಗಳನ್ನು ಬೆಳೆಯುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ವೆಂಕಟೇಶ್ ತನ್ನ ತಂದೆ ಎ. ನಾಗಪ್ಪ ಅವರಿಗಿದ್ದ 2.5ಎಕರೆ ಜಮೀನಿನಲ್ಲಿ 9 ವರ್ಷ ದಾಳಿಂಬೆ ಬೆಳೆದಿದ್ದರು. ಇದರಲ್ಲಿ ಬಂದಿದ್ದ ಆದಾಯದಲ್ಲಿ ಮತ್ತೆ 5 ಎಕರೆ ಜಮೀನು ಖರೀದಿ ಮಾಡಿದ್ದರು. ಈ ಜಮೀನು ಸಂಪೂರ್ಣ ಕಲ್ಲುಗಳಿಂದ ಕೂಡಿತ್ತು. ಇದನ್ನು ಖರೀದಿ ಮಾಡಿದ್ದನ್ನು ನೋಡಿದ ಜನರು ಕಲ್ಲಿನಲ್ಲಿ ಏನು ಮಾಡುತ್ತೀಯ ಎಂದಿದ್ದರು. ಆದರೆ ಎದೆಗುಂದದ ಸ್ವತಃ ಜೆಸಿಬಿ ಚಾಲಕರಾಗಿದ್ದ ವೆಂಕಟೇಶ್ ಬಾಡಿಗೆ ಜೆಸಿಬಿಯಿಂದ ಇಡೀ ಕಲ್ಲಿನ ಗುಡ್ಡವನ್ನು ಸಮತಟ್ಟು ಮಾಡಿದರು.

ನಂತರ ಅಲ್ಲಿ ಅಡಿಕೆ, ರಕ್ತ ಚಂದನ, ಶ್ರೀಗಂಧ, ತೆಂಗು, ತ್ಯಾಗ, ಸಿಲ್ವರ್, ಹೆಬ್ಬೇವು, ಮಹಘನಿ, ನಿಂಬೆ ಸೇರಿದಂತೆ ನೂರಾರು ಗಿಡಗಳನ್ನು ಹಾಕಿದ್ದಾರೆ. ಇವುಗಳ ಮಧ್ಯದಲ್ಲಿ ರೇಷ್ಮೆ ನಾಟಿ ಮಾಡಿದ್ದು, ಇದರಲ್ಲಿ ಪ್ರತಿ ತಿಂಗಳು 250 ಮೊಟ್ಟೆ ರೇಷ್ಮೆ ಹುಳು ಸಾಕಾಣಿಕೆಯಿಂದ ಎರಡು ಕ್ವಿಂಟಲ್ ಗೂಡು ಇಳುವರಿ ಪಡೆಯುತ್ತಿದ್ದಾರೆ. ಹೊಲದಲ್ಲಿಯೇ ರೇಷ್ಮೆ ಸಾಕಾಣಿಗೆ ಮನೆ ಕಟ್ಟಿಕೊಂಡಿದ್ದಾರೆ. ಕೃಷಿ ಜೊತೆಗೆ ಎಮ್ಮೆ, ಹಸು, ಎತ್ತುಗಳನ್ನು ಸಾಕಿದ್ದು, ಅವುಗಳ ಸಗಣಿಯಿಂದ ಸಾವಯವ ಗೊಬ್ಬರ ಉತ್ಪಾದಿಸಿ ತಮ್ಮ ಬೆಳೆಗಳಿಗೆ ಬಳಸಿಕೊಳ್ಳುತ್ತಿದ್ದಾರೆ.

ADVERTISEMENT

ಇದೇ ರೀತಿ ಪ್ರತಿ ವರ್ಷ ಕೃಷಿಯಿಂದ ಬಂದ ಆದಾಯದಿಂದ ಈಗ ಒಟ್ಟು 18 ಎಕರೆ ಜಮೀನು ಮಾಡಿಕೊಂಡಿದ್ದಾರೆ. ಉಳಿದ ಜಮೀನಿನಲ್ಲಿ ಮೆಕ್ಕೆಜೋಳ, ಹಸಿಮೆಣಸಿನ ಕಾಯಿ ಬೆಳೆದಿದ್ದಾರೆ. ಎಲ್ಲ ಕಡೆ ಹನಿ ನೀರಾವರಿ ವ್ಯವಸ್ಥೆ ಅಳವಡಿಸಿದ್ದಾರೆ. ಇವರ ಸಾಧನೆಯನ್ನು ಗುರುತಿಸಿದ ಬಳ್ಳಾರಿ ಜಿಲ್ಲಾಡಳಿತ 2021-22ನೇ ಸಾಲಿನಲ್ಲಿ ಜಿಲ್ಲಾ ಶ್ರೇಷ್ಟ ಕೃಷಿಕ ಪ್ರಶಸ್ತಿ ನೀಡಿ ಗೌರವಿಸಿದೆ.

ಎರಡು ಎಕರೆ ಜಮೀನಿನಲ್ಲಿ 35 ಕೊಳವೆ ಬಾವಿಗಳನ್ನು ಕೊರೆಸಿ ಕೈ ಸುಟ್ಟುಕೊಂಡಿದ್ದರು. ಆದರೂ 80 ತೆಂಗಿನ ಗಿಡಗಳನ್ನು ನಾಟಿ ಮಾಡಿ ಅವುಗಳಿಗೆ ಕೊಡದಿಂದ ನೀರು ಹಾಕಿ ಬೆಳಿಸಿದ್ದಾರೆ ಎಂದು ವೆಂಕಟೇಶ್ ಅವರು ತಮ್ಮ ತಂದೆ ನಾಗಪ್ಪ, ತಾಯಿ ಮಾರಕ್ಕ ಮಾಡಿದ್ದ ಕೆಲಸವನ್ನು ನೆನೆಯುತ್ತಾರೆ. ತಮ್ಮ ಎ. ಮಂಜುನಾಥ ಎಂಜನಿಯರ್ ಕೆಲಸ ಮಾಡುತ್ತಿದ್ದಾರೆ.

ಸದ್ಯ ತಂದೆ, ತಾಯಿ ಸೇರಿದಂತೆ ತಮ್ಮ ಕುಟುಂಬದೊಂದಿಗೆ ಹೊಲದಲ್ಲಿಯೇ ವಾಸವಾಗಿರುವ ವೆಂಕಟೇಶ್, ಕೂಲಿ ಅಳುಗಳೊಂದಿಗೆ ತಮ್ಮ ತಂಗಿ ಹಾಗೂ ತಂಗಿಯ ಪತಿ ಸಹಾಯದಿಂದ ಕೃಷಿ ಕೆಲಸಗಳನ್ನು ಮುಂದುವರಿಸಿದ್ದಾರೆ.

ಜಮೀನಿನಲ್ಲಿ ಹಾಕಿರುವ ಗಿಡ ಮರಗಳು ಮುಂದೊಂದು ದಿನ ಉತ್ತಮ ಅದಾಯ ತಂದು ಕೊಡುತ್ತವೆ. ಅವುಗಳ ಮಧ್ಯದಲ್ಲಿ ಬೆಳೆಯುತ್ತಿರುವ ರೇಷ್ಮೆ ಜೀವನಕ್ಕೆ ದಾರಿಯಾಗಿದೆ.

-ಎ. ವೆಂಕಟೇಶ್ ರೈತ ಜಿಗೇನಗಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.