ಬಳ್ಳಾರಿ: ಕೇವಲ 20 ದಿನ ಕಳೆಯುವುದರ ಒಳಗಾಗಿ ಬಳ್ಳಾರಿ ನಗರದಲ್ಲಿ ಎರಡು ಡಿಜಿಟಲ್ ಅರೆಸ್ಟ್ ಘಟನೆಗಳು ನಡೆದಿದ್ದು, ಇಬ್ಬರು ಸಂತ್ರಸ್ತರಿಂದ ಒಟ್ಟು ₹2.25 ಕೋಟಿ (₹2,25,70,098) ಹಣ ಸುಲಿಗೆ ಮಾಡಲಾಗಿದೆ. ಎರಡೂ ಪ್ರಕರಣಗಳಲ್ಲಿ ದುಷ್ಕರ್ಮಿಗಳು ನಿವೃತ್ತರು ಅಥವಾ ಹಿರಿಯ ನಾಗರಿಕರನ್ನೇ ಗುರಿಯಾಗಿರಿಸಿಕೊಂಡು ವಂಚಿಸಿದ್ದಾರೆ.
ಇನ್ನೂ ಒಂದು ಕೌತುಕದ ವಿಷಯವೆಂದರೆ, ಎರಡೂ ಪ್ರಕರಣಗಳಿಗೂ ಸಾಮ್ಯತೆ ಇದ್ದು, ಒಂದೇ ತಂಡ ಕೃತ್ಯವೆಸಗಿರುವ ಶಂಕೆ ವ್ಯಕ್ತವಾಗಿದೆ. ಜುಲೈ 24ರಂದು ದಾಖಲಾಗಿದ್ದ ಪ್ರಕರಣದಲ್ಲಿ ಬಳ್ಳಾರಿ ನಗರದ 71 ವರ್ಷದ ವ್ಯಕ್ತಿಗೆ ₹88ಲಕ್ಷ (₹88,20,098) ವಂಚನೆ ಮಾಡಲಾಗಿತ್ತು. ಸದ್ಯ ಆ. 11ರಂದು ದಾಖಲಾಗಿರುವ ಪ್ರಕರಣದಲ್ಲಿ 85 ವರ್ಷದ ವ್ಯಕ್ತಿಗೆ ₹1.37 ಕೋಟಿ (₹1,37,50,000) ವಂಚಿಸಲಾಗಿದೆ.
ಪ್ರಕರಣದ ವಿವರ: ಆದಾಯ ತೆರಿಗೆ ಇಲಾಖೆಯ ನಿವೃತ್ತ ಅಧಿಕಾರಿಯಾದ 85 ವರ್ಷದ ವ್ಯಕ್ತಿಗೆ ಜುಲೈ 18ರಂದು ಕರೆ ಮಾಡಿದ್ದ ಸಂದೀಪ್ ಜಾಧವ ಎಂಬಾತ, ‘ಜೆಟ್ ಏರ್‌ವೇಸ್‌ನ ಮಾಲೀಕ ನರೇಶ ಗೋಯಲ್ ಎಂಬ ವ್ಯಕ್ತಿ ಬಳಿ ನೀವು ಹಣ ಹೂಡಿಕೆ ಮಾಡಿದ್ದೀರಿ. ಹಣ ಹೇಗೆ ಬಂತು’ ಎಂದು ಪ್ರಶ್ನಿಸಿದ್ದಾರೆ. ಆಗ ವ್ಯಕ್ತಿ ನಿರಾಕರಿಸಿದ್ದಾರೆ. ಮಾತನಾಡುತ್ತಾ, ಸಂತ್ರಸ್ತ ವ್ಯಕ್ತಿಯು ಷೇರು ಮಾರುಕಟ್ಟೆಯಲ್ಲಿ ತಾವು ಹೂಡಿಕೆ ಮಾಡಿರುವುದನ್ನು ವಂಚಕರಿಗೆ ತಿಳಿಸಿದ್ದಾರೆ. ಅಷ್ಟು ಹೇಳಿದ್ದೇ ತಡ ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಬಂಧಿಸುತ್ತಿರುವುದಾಗಿ ವ್ಯಕ್ತಿಗೆ ಹೇಳಿದ ದುಷ್ಕರ್ಮಿಗಳು, ವಿಚಾರಣೆ ಪೂರ್ಣಗೊಳ್ಳುವವರೆಗೆ ಷೇರು ಮಾರುಕಟ್ಟೆಯಲ್ಲಿನ ಒಟ್ಟು ಹಣದ ಶೇ 85ರಷ್ಟನ್ನು ತಮಗೆ ವರ್ಗಾಯಿಸುವಂತೆ ಹೇಳಿದ್ದಾರೆ. ಅವರು ಹೇಳಿದಂತೆ ಸಂತ್ರಸ್ತ ವ್ಯಕ್ತಿ ಎರಡು ಹಂತಗಳಲ್ಲಿ ಒಟ್ಟು ₹1.37 ಕೋಟಿ ಸಂದಾಯ ಮಾಡಿದ್ದಾರೆ. ಬಳಿಕ ತಾವು ವಂಚನಗೊಳಗಾಗಿರುವುದು ತಿಳಿದು ಪೊಲೀಸರಿಗೆ ದೂರಿದ್ದಾರೆ.
ಷೇರು ಮಾರುಕಟ್ಟೆಯಿಂದ ಭಾರಿ ಪ್ರಮಾಣದ ಹಣ ಡ್ರಾ ಮಾಡಿರುವುದರಿಂದ ಸಂತ್ರಸ್ತ ವ್ಯಕ್ತಿಗೆ ಈಗ ಭಾರಿ ಪ್ರಮಾಣದ ತೆರಿಗೆಯೂ ಬಂದಿದ್ದು ಅದನ್ನು ಪಾವತಿಸುವುದಾದರೂ ಹೇಗೆ ಎಂಬ ಆಘಾತಕ್ಕೆ ಒಳಗಾಗಿದ್ದಾರೆ.
ಎರಡೂ ಪ್ರಕರಣಗಳಿಗೆ ಸಾಮ್ಯತೆ: ಜುಲೈ 24ರಂದು ದಾಖಲಾಗಿದ್ದ ಪ್ರಕರಣದಲ್ಲಿ ಹಣ ಕಳೆದುಕೊಂಡಿದ್ದ ವ್ಯಕ್ತಿಯ ಬಳಿಯೂ ವಂಚಕರು ಜೆಟ್ ಏರ್‌ವೇಸ್ ಮತ್ತು ನರೇಶ್ ಗೊಯೆಲ್ ಎಂಬುವವರ ಹೆಸರುಗಳನ್ನು ಪ್ರಸ್ತಾಪಿಸಿದ್ದರು. ಸದ್ಯ ಆ. 11ರಂದು ದಾಖಲಾಗಿರುವ ಪ್ರಕರಣದಲ್ಲೂ ಹಾಗೇ ಆಗಿದೆ.
12 ದಿನ ಗೃಹ ಬಂಧನ: ಜುಲೈ 24ರ ಪ್ರಕರಣದಲ್ಲಿ ವ್ಯಕ್ತಿಯನ್ನು ಸೈಬರ್ ವಂಚಕರು ಡಿಜಿಟಲ್ ಅರೆಸ್ಟ್ ಹೆಸರಲ್ಲಿ 12 ದಿನ ಮನೆಯಲ್ಲೇ ಇರುವಂತೆ ಮಾಡಿದ್ದರು. ವಿಷಯ ಯಾರಿಗೂ ತಿಳಿಸಲಾಗದೇ ಸಂತ್ರಸ್ತ ವೇದನೆ ಅನುಭವಿಸಿದ್ದರು.
ಅಪರಾಧಿಗಳು ಇನ್ನೂ ಪತ್ತೆಯಾಗಿಲ್ಲ. ತನಿಖೆ ನಡೆಯುತ್ತಿದೆ. ಆದರೆ ಜನರಲ್ಲಿ ಈ ಬಗ್ಗೆ ಜಾಗೃತಿ ಅಗತ್ಯ. ಸೈಬರ್ ಮೂಲದ ವಂಚನೆಗಳ ಬಗ್ಗೆ ಜನರು ಮಾಹಿತಿ ಹೊಂದಬೇಕು. ಇಂಥದ್ದರಿಂದ ದೂರವಿರಬೇಕು.ಡಾ. ಶೋಭಾರಾಣಿ ವಿ.ಜೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಡಿಜಿಟಲ್ ಅರೆಸ್ಟ್ ಬಗ್ಗೆ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿವೆ. ಜನ ಎಚ್ಚರಿಕೆಯಿಂದ ಜಾಗೃತೆಯಿಂದ ಇರುವುದೇ ಇದಕ್ಕೆ ಮದ್ದು. ಇಂಥ ಸನ್ನಿವೇಶಗಳಲ್ಲಿ ಸ್ಥಿತ ಪ್ರಜ್ಞರಾಗಿರುವುದು ಮುಖ್ಯ.– ಸಂತೋಷ್ ಚೌಹಾಣ್ ಡಿಎಸ್‌ಪಿ ಸಿಇಎನ್
ಪ್ರಜಾವಾಣಿ ವರದಿ ಓದಿ ಜಾಗೃತ
ಜುಲೈ 24ರಂದು ದಾಖಲಾಗಿದ್ದ ಡಿಜಿಟ್ ಅರೆಸ್ಟ್ ಸುದ್ದಿಯನ್ನು ‘ಪ್ರಜಾವಾಣಿ’ಯಲ್ಲಿ ಜುಲೈ 27ರಂದು ಪ್ರಕಟಿಸಲಾಗಿತ್ತು. ಇದನ್ನು ಓದಿದ ವ್ಯಕ್ತಿ ತಾವೂ ಮೋಸ ಹೋಗಿರುವುದನ್ನು ಮನದಟ್ಟು ಮಾಡಿಕೊಂಡಿದ್ದಾರೆ. ಕಡೆಗೆ ಆ. 11ರಂದು ಠಾಣೆಗೆ ಹಾಜರಾಗಿ ಪ್ರಕರಣ ದಾಖಲಿಸಿದ್ದಾರೆ.
ಎರಡು ವರ್ಷಗಳಲ್ಲಿ 8 ಪ್ರಕರಣ
ಬಳ್ಳಾರಿ ಜಿಲ್ಲೆಯಲ್ಲಿ 2024 ಮತ್ತು 2025ರಲ್ಲಿ ಈ ವರೆಗೆ ಒಟ್ಟು 8 ಡಿಜಿಟಲ್ ಅರೆಸ್ಟ್ ಪ್ರಕರಣಗಳು ದಾಖಲಾಗಿದ್ದು ಒಟ್ಟಾರೆ ₹2.44 ಕೋಟಿ (₹24495838) ವಂಚನೆಯಾಗಿದೆ. ಈ ಪೈಕಿ ₹662260 ಹಣ ಹಿಂದಕ್ಕೆ ಬಂದಿದೆ ಎನ್ನಲಾಗಿದೆ. 8 ಪ್ರಕರಣಗಳ ಪೈಕಿ 2 ಪ್ರಕರಣಗಳಲ್ಲಿ ಸಂಪೂರ್ಣ ಹಣ ಹಿಂದಕ್ಕೆ ಬಂದಿದೆ. ಇನ್ನುಳಿದ ಎರಡು ಪ್ರಕರಣಗಳಲ್ಲಿ ಭಾಗಶಃ ಹಿಂದಕ್ಕೆ ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.