ADVERTISEMENT

ಸಮಕಾಲೀನ ರಂಗಭೂಮಿಯ ಕುರಿತು ಚರ್ಚೆ

ಸಂಗಂ ಸಾಹಿತ್ಯ ಪುರಸ್ಕಾರ ಕಾರ್ಯಕ್ರಮದಲ್ಲಿ ಕವಿಗೋಷ್ಠಿ

​ಪ್ರಜಾವಾಣಿ ವಾರ್ತೆ
Published 11 ಮೇ 2025, 16:28 IST
Last Updated 11 ಮೇ 2025, 16:28 IST
ಸಂಗಂ ಸಾಹಿತ್ಯ ಪುರಸ್ಕಾರ ಸಮಾರಂಭದ ಕವಿಗೋಷ್ಠಿಯಲ್ಲಿ ಲೇಖಕ ಅರುಣ್‌ ಜೋಳದ ಕೂಡ್ಲಿಗಿ ಮಾತನಾಡಿದರು. 
ಸಂಗಂ ಸಾಹಿತ್ಯ ಪುರಸ್ಕಾರ ಸಮಾರಂಭದ ಕವಿಗೋಷ್ಠಿಯಲ್ಲಿ ಲೇಖಕ ಅರುಣ್‌ ಜೋಳದ ಕೂಡ್ಲಿಗಿ ಮಾತನಾಡಿದರು.    

ಬಳ್ಳಾರಿ: ‌‘ಸಮಕಾಲೀನ ರಂಗಭೂಮಿಗೆ ಹೊಸ ಹೊಸ ವಿಚಾರ, ನಟರ ವೇದಿಕೆಗೆ ಬಂದರೂ ಅಲ್ಲಿ ವಿಜೃಂಭಿಸುವುದು ರಂಗಕಲೆಯೇ ಆಗಿರುತ್ತದೆ’ ಎಂದು ‘ತಿಂಡಿಗೆ ಬಂದ ತುಂಡೆರಾಯ’ ನಾಟಕದ ನಿರ್ದೇಶಕ ಶಕೀಲ್ ಅಹ್ಮದ್ ಅಭಿಪ್ರಾಯಪಟ್ಟರು. 

‘ಸಂಗಂ’ ಸಾಹಿತ್ಯ ಪುರಸ್ಕಾರ ಸಮಾರಂಭದ ಕವಿಗೋಷ್ಠಿಯಲ್ಲಿ ‘ಅಸ್ಸಲಾಮ್‌ ಅಲೈಕುಂ’ ಎನ್ನುತ್ತಲೇ ಶಕೀಲ್‌ ಅಹ್ಮದ್‌ ಮಾತು ಆರಂಭಿಸಿದರು.  

‘ಸಮಕಾಲೀನ ಕನ್ನಡ ರಂಗಭೂಮಿ ಮತ್ತು ನಾನು' ಗೋಷ್ಠಿಯಲ್ಲಿ ಪ್ರವೀಣ್‌ ರೆಡ್ಡಿ ಗುಂಜಳ್ಳಿ ರಂಗಭೂಮಿ ಕಲಾವಿದರೊಂದಿಗೆ ಸಂವಾದ ನಡೆಸಿಕೊಟ್ಟರು.

ADVERTISEMENT

‘ರಂಗ ಕಲಾವಿದನ ಭಾವನೆಗಳನ್ನು ಗೌರವಿಸಬೇಕೇ ಹೊರತು ಇದನ್ನು ಮಾಡಬಾರದು ಎಂದು ವಿರೋಧಿಸಬಾರದು. ನಾಟಕ, ಅದು ಆಡುವುದು, ಮಾಡುವುದು ಮತ್ತು ನೋಡುವುದು. ಆದರೆ ಇದು ಓದುವುದು ಬರೆಯುವುದಲ್ಲ’ ಎಂದು ಸಮಕಾಲೀನ ರಂಗಭೂಮಿ ಕುರಿತು ವಿವರಿಸಿದರು.

ಸಿರಿಗೇರಿಯ ರಂಗಧಾತ್ರಿ ಸಂಸ್ಥೆಯ ‘ತಿರುಗಾಟ’ ತಂಡದ ಮಂಜು ಸಿರಿಗೇರಿ, ರಂಗಭೂಮಿಯ ಕಲಾವಿದರ ಸಂಕಟ, ನೋವು ಹಾಗೂ ಸಮಾಜದ ದೃಷ್ಟಿಕೋನ ಕುರಿತು ವಿವರಿಸಿದರು.

ಭಾವೈಕ್ಯತಾ ವೇದಿಕೆಯ ಹೊಸಪೇಟೆಯ ಸಹನಾ ಪಿಂಜಾರ್, ‘ಹೆಣ್ಣುಮಕ್ಕಳು ರಂಗಭೂಮಿಗೆ ಬರಲು ಹಿಂಜರಿಯುವ ಕಾಲ ಇದೆ. ಬೀದಿ ನಾಟಕಗಳಲ್ಲಿ ಪಾಲ್ಗೊಂಡ ಮಹಿಳೆಯರನ್ನು ನೋಡುವ ದೃಷ್ಟಿಕೋನ ಬದಲಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಉತ್ತರ ಕರ್ನಾಟಕ ರಂಗಭೂಮಿಯ ಗಂಡು ಮೆಟ್ಟಿನ ನಾಡು. ರಾಜ್ಯ ಸರ್ಕಾರ ರಂಗಭೂಮಿಗೆ ಬಹಳ ಉತ್ತೇಜನ ನೀಡುತ್ತಿದೆ’ ಎಂದು ಮೆಚ್ಚುಗೆ ಸೂಚಿಸಿದರು.

‘ವಿಷಯ ಮತ್ತು ವಸ್ತುವಿನ ಆಧಾರದ ಮೇಲೆ ಸಮಕಾಲೀನ ರಂಗಭೂಮಿ ಸ್ಪಂದಿಸುತ್ತದೆ. ಆದರೆ ಕಲಾವಿದರಿಗೆ ವೇದಿಕೆ ಸಿಗುವುದೆ ದುರ್ಲಭವಾಗಿದೆ’ ಎಂದು ನಟ, ನಿರ್ದೇಶಕ ರಂಗಭೂಮಿ ಕಲಾವಿದೆ ಮಹಾದೇವ ಹಡಪದ್ ಬೇಸರಿಸಿದರು.

ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಂಗಕಲಾವಿದರೊಂದಿಗೆ ಬೆರೆತು ಪ್ರಶ್ನೆ ಕೇಳುವ ಮೂಲಕ ಮಾತುಕತೆಗೆ ಮೆರಗು ನೀಡಿದರು.

ಅಲೆದಾಟವೇ ಸಂಶೋಧನೆ: ಅರುಣ್‌ 

ಬಳ್ಳಾರಿ:
ಸಮಕಾಲೀನ ಕನ್ನಡ ಸಂಶೋಧನೆ ಮತ್ತು ನಾನು ಕುರಿತ ಗೋಷ್ಠಿಯಲ್ಲಿ ಸಮನ್ವಯಕಾರರಾಗಿ ಅರುಣ್ ಜೋಳದ ಕೂಡ್ಲಿಗಿ ಮಾತನಾಡಿದರು.

‘ಕನ್ನಡ ಸಾಹಿತ್ಯ ಸಂಶೋಧನೆ ಎಂದರೆ ಕೇವಲ ಶಾಸನ, ವೀರಗಲ್ಲು ನಾಣ್ಯಗಳ ಅಧ್ಯಯನ ಮಾತ್ರವಲ್ಲ ಜೀವನಾನುಭವ ನೀಡುವ ಬೆಟ್ಟ, ಗುಡ್ಡ, ಊರು, ಕೇರಿ ಅಲೆದಾಡಿ ಕೈಗೊಳ್ಳುವುದು ಸಂಶೋಧನೆ’ ಎಂದು ತಿಳಿಸಿದರು.

ಸಂಶೋಧನಾ ಲೇಖಕ ಚಂದ್ರಶೇಖರ ಮಂಡೆಕೋಲು ತಮ್ಮ ಸಂಶೋಧನೆ ಸಾಗಿಬಂದ ಹಾದಿ, ಎದುರಿಸಿದ ಸಮಸ್ಯೆ ಹಾಗೂ ಸಂಶೋಧನಾಕಾರನಿಗೆ ಇರಬೇಕಾದ ತುಡಿತ ಕುರಿತು ವಿವರಿಸಿದರು.

‘ಪಿಯುಸಿಯಲ್ಲಿ ವಿಜ್ಞಾನ ವಿಭಾಗದಿಂದ ಕಲಾವಿಭಾಗಕ್ಕೆ ಬದಲಾಯಿಸಿಕೊಂಡದ್ದು ಜೀವನದ ಮೊದಲ ಸಂಶೋಧನೆ’ ಎಂದು ಹಾಸ್ಯಾತ್ಮಕವಾಗಿ ಸಂಶೋಧಕ ರಾಜೇಂದ್ರ ಬಡಿಗೇರ್ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.