ADVERTISEMENT

‘ಸಂಶೋಧನೆ ಪ್ರಾಮಾಣಿಕತೆಯಿಂದ ಕೂಡಿರಲಿ’

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2019, 12:14 IST
Last Updated 4 ಏಪ್ರಿಲ್ 2019, 12:14 IST
ಕಾರ್ಯಕ್ರಮದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸ.ಚಿ. ರಮೇಶ ಮಾತನಾಡಿದರು
ಕಾರ್ಯಕ್ರಮದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸ.ಚಿ. ರಮೇಶ ಮಾತನಾಡಿದರು   

ಹೊಸಪೇಟೆ: ‘ವಿದ್ಯಾರ್ಥಿಗಳು ಸಂಶೋಧನೆಗೆ ಉತ್ತಮವಾದ ವಿಷಯವನ್ನು ಆಯ್ಕೆ ಮಾಡಿಕೊಂಡು ಪ್ರಾಮಾಣಿಕವಾಗಿ, ಪ್ರಾಂಜಲ ಮನಸ್ಸಿನಿಂದ ಸಂಶೋಧನೆ ಕೈಗೊಳ್ಳಬೇಕು’ ಎಂದು ಕುಲಪತಿ ಪ್ರೊ. ಸ.ಚಿ. ರಮೇಶ ಸಲಹೆ ಮಾಡಿದರು.

ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದಯು.ಜಿ.ಸಿ. ಪಿಎಚ್.ಡಿ. ಕೋರ್ಸ್‍ವರ್ಕ್ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

‘ಎಲ್ಲ ವಿದ್ಯಾರ್ಥಿಗಳು ಕಾಲಮಿತಿಯಲ್ಲಿ ಸಂಶೋಧನೆ ಮಾಡಬೇಕು. ಕನ್ನಡ ವಿಶ್ವವಿದ್ಯಾಲಯದಿಂದ ಪದವಿ ಪಡೆದ ವಿದ್ಯಾರ್ಥಿಗಳು ಎಲ್ಲೇ ಹೋದರೂ ಒಳ್ಳೆಯ ಗೌರವಕ್ಕೆ ಪಾತ್ರರಾಗುತ್ತಾರೆ. ವಿದ್ಯಾರ್ಥಿಗಳು ಕೂಡ ವಿ.ವಿ. ಯನ್ನು ಗೌರವ, ಆದರದಿಂದ ಕಾಣಬೇಕು’ ಎಂದು ಹೇಳಿದರು.

ADVERTISEMENT

‘ವಿ.ವಿ. ಮೊದಲ ಕುಲಪತಿ ಚಂದ್ರಶೇಖರ ಕಂಬಾರರು ಎಲ್ಲ ಪುಸ್ತಕಗಳು ದೊರೆಯುವಂತಹ ಗ್ರಂಥಾಲಯ ಸ್ಥಾಪಿಸಿದರು. ನಂತರದ ಕುಲಪತಿ ಎಂ.ಎಂ. ಕಲಬುರ್ಗಿ ಅವರು ದೇಸಿ ಮತ್ತು ಮಾರ್ಗವನ್ನು ಸಮನ್ವಯಗೊಳಿಸಿದರು. ಎಚ್‌.ಜೆ. ಲಕ್ಕಪ್ಪಗೌಡ ಅವರು ಕುಲಪತಿಯಾಗಿದ್ದ ಕಾಲದಲ್ಲಿ ಕನ್ನಡ ಜ್ಞಾನವನ್ನು ವಿಶ್ವಜ್ಞಾನದ ದೃಷ್ಟಿಕೋನದಲ್ಲಿ ಹೇಳಿದರು. ಅನಂತರದ ಕುಲಪತಿಗಳು ಆ ಪರಂಪರೆಯನ್ನು ಮುಂದುವರಿಸಿಕೊಂಡು ಬಂದರು’ ಎಂದು ವಿವರಿಸಿದರು.

ಸಮಾಜ ವಿಜ್ಞಾನ ನಿಕಾಯದ ಡೀನ್‌ ಕೆ.ಕೇಶವನ್ ಪ್ರಸಾದ್ ಮಾತನಾಡಿ, ‘ಕನ್ನಡ ವಿಶ್ವವಿದ್ಯಾಲಯ ದೇಶದ ಪ್ರಥಮ ಸಂಶೋಧನ ವಿಶ್ವವಿದ್ಯಾಲಯವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಂದಿನ ಕಾಲದಲ್ಲ್ಲಿ ಶಂಬಾ ಜೋಶಿ, ಎಂ.ಎಂ. ಕಲಬುರ್ಗಿ, ಚಿದಾನಂದಮೂರ್ತಿ ಅಂತಹ ಹಿರಿಯ ಸಂಶೋಧಕರು ತಮ್ಮನ್ನು ತಾವು ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದರು. ಈ ದಿನಗಳಲ್ಲಿ ಕನ್ನಡ ವಿಶ್ವವಿದ್ಯಾಲಯ ನಾಡಿನ ಎಲ್ಲ ಸಮರ್ಥ ವಿದ್ವಾಂಸರನ್ನು ಕರೆಯಿಸಿ ಸಂಶೋಧನೆ ಮಾಡಿಸುವ ಮೂಲಕ ಜಗತ್ತಿನಲ್ಲಿಯೇ ಇದೊಂದು ವಿಶಿಷ್ಟ ವಿಶ್ವವಿದ್ಯಾಲಯವಾಗಿ ರೂಪುಗೊಂಡಿದೆ’ ಎಂದು ಹೇಳಿದರು.

ಯುಜಿಸಿ ಕೋರ್ಸ್‍ವರ್ಕ್‍ ಸಂಚಾಲಕ ಅಮರೇಶ ನುಗಡೋಣಿ, ವಿಜ್ಞಾನ ನಿಕಾಯದ ಡೀನ್‌ ಸಿ. ಮಹದೇವ, ಅಧ್ಯಯನಾಂಗದ ನಿರ್ದೇಶಕ ಶಿವಾನಂದ ವಿರಕ್ತಮಠ, ಶೈಕ್ಷಣಿಕ ಉಪಕುಲಸಚಿವ ಎಸ್.ವೈ.ಸೋಮಶೇಖರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.