ADVERTISEMENT

ಬರಗಾಲ ನೆಪ ಬೇಡ, ಹಂಪಿ ಉತ್ಸವ ಮಾಡಿ: ಕಲಾವಿದರ ಆಗ್ರಹ

ಸಂಭಾವನೆ ಕೊಡದಿದ್ದರೂ ಸರಳವಾಗಿ ಉತ್ಸವ ಆಚರಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2018, 11:17 IST
Last Updated 30 ನವೆಂಬರ್ 2018, 11:17 IST
ಹಂಪಿ ಉತ್ಸವವನ್ನು ನಡೆಸಬೇಕು ಎಂದು ಆಗ್ರಹಿಸಿ ಕಲಾವಿದರು ಬಳ್ಳಾರಿಯಲ್ಲಿ ಶುಕ್ರವಾರ ಧರಣಿ ನಡೆಸಿ ಜಿಲ್ಲಾಧಿಕಾರಿ ಡಾ.ವಿ.ರಾಮಪ್ರಸಾದ್‌ ಮನೋಹರ್ ಅವರಿಗೆ ಮನವಿ ಸಲ್ಲಿಸಿದರು.
ಹಂಪಿ ಉತ್ಸವವನ್ನು ನಡೆಸಬೇಕು ಎಂದು ಆಗ್ರಹಿಸಿ ಕಲಾವಿದರು ಬಳ್ಳಾರಿಯಲ್ಲಿ ಶುಕ್ರವಾರ ಧರಣಿ ನಡೆಸಿ ಜಿಲ್ಲಾಧಿಕಾರಿ ಡಾ.ವಿ.ರಾಮಪ್ರಸಾದ್‌ ಮನೋಹರ್ ಅವರಿಗೆ ಮನವಿ ಸಲ್ಲಿಸಿದರು.   

ಬಳ್ಳಾರಿ: ‘ಬರಗಾಲದ ನೆಪವೊಡ್ಡಿ ವಿಶ್ವ ವಿಖ್ಯಾತ ಹಂಪಿ ಉತ್ಸವವನ್ನು ರದ್ದುಗೊಳಿಸಿರುವುದು ಸರಿಯಲ್ಲ’ ಎಂದು ಪ್ರತಿಪಾದಿಸಿ ಜಿಲ್ಲೆಯ ಕಲಾವಿದರು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶುಕ್ರವಾರ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ನೇತೃತ್ವದಲ್ಲಿ ಧರಣಿ ನಡೆಸಿದರು.

‘ರಾಜ್ಯದಲ್ಲಿ ಬರಗಾಲವಿದ್ದಾಗಲೇ ಮೈಸೂರು ದಸರಾ ಉತ್ಸವವನ್ನು ಸರ್ಕಾರ ನಡೆಸಿದೆ. ಈಗ ಬರಗಾಲದ ನೆಪವೊಡ್ಡಿ ಹಂಪಿ ಉತ್ಸವವನ್ನು ರದ್ದು ಮಾಡಿರುವುದು ಸರಿಯಲ್ಲ. ಉತ್ಸವಕ್ಕಾಗಿನಮ್ಮ ಹೋರಾಟ ನಿಲ್ಲುವುದಿಲ್ಲ’ ಎಂದು ತೊಗಲುಗೊಂಬೆ ಕಲಾವಿದ ಬೆಳಗಲ್ಲು ವೀರಣ್ಣ ಪ್ರತಿಪಾದಿಸಿದರು.

‘ಸರಳವಾಗಿಯಾದರೂ ಉತ್ಸವವನ್ನು ಆಚರಿಸಲೇಬೇಕು, ಜಿಲ್ಲೆಯ ಶಾಸಕರು, ಜನಪ್ರತಿನಿಧಿಗಳು ಈ ಬಗ್ಗೆ ಮಾತನಾಡದಿರುವುದು ಖೇದಕರ. ಇನ್ನಾದರೂ ಮಾತಾಡಿ ಹಂಪಿ ಉತ್ಸವಕ್ಕೆ ಬೆಂಬಲ ನೀಡಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಉತ್ಸವವನ್ನು ರದ್ದು ಮಾಡಿರುವುದು ಹಂಪಿಯ ಸಾಂಸ್ಕೃತಿಕ ಪರಂಪರೆಗೆ ಮಾಡಿರುವ ಅವಮಾನವಾಗಿದೆ. ಕಲಾವಿದರು, ಲೇಖಕರಿಗೆ ದುಃಖವಾಗಿದೆ. ಕಲಾವಿದರಿಗೆ ಸಂಭಾವನೆ ಕೊಡದಿದ್ದರೂ ನಾವೆಲ್ಲರೂ ಸೇರಿ ಉತ್ಸವ ಮಾಡುತ್ತೇವೆ’ ಎಂದು ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಮ ಕಲ್ಮಠ ಹೇಳಿದರು.

‘ಕಲಾವಿದರೆಲ್ಲರೂ ಸೇರಿ ಹೊಸಪೇಟೆಯಿಂದ ಹಂಪಿಗೆ ಕಾಲ್ನಡಿಗೆ ಮೂಲಕ ತೆರಳಿ ಹೋರಾಟ ಮಾಡುತ್ತೇವೆ. ಈ ಭಾಗದ ಬಗ್ಗೆ ಮಲತಾಯಿ ಧೋರಣೆಯನ್ನು ಅನುಸರಿಸುತ್ತಿದ್ದಾರೆ. ಎಂ.ಪಿ ಪ್ರಕಾಶರ ಕನಸಿನ ಕೂಸನ್ನು ಉಳಿಸಬೇಕಾಗಿದೆ’ ಎಂದು ಹೇಳಿದರು.

‘ವಿಶ್ವದ ಅತಿ ದೊಡ್ಡ ಐತಿಹಾಸಿಕ ಬಯಲು ಸಂಗ್ರಹಾಲಯವಾದ ಹಂಪಿಯ ಉತ್ಸವವನ್ನು ಇದುವರೆಗೆ 5 ಬಾರಿ ರದ್ದು ಮಾಡಲಾಗಿದೆ. ಕಲಾವಿದರನ್ನು ಗೌರವಿಸಿ ಹಂಪಿ ಉತ್ಸವವನ್ನು ಮಾಡಲೇಬೇಕು’ ಎಂದು ಜಾನಪದ ಪರಿಷತ್ತಿನ ಅಧ್ಯಕ್ಷ ಟಿಎಚ್ಎಂ ಬಸವರಾಜ್ ಆಗ್ರಹಿಸಿದರು.

ಕಲಾವಿದರಾದ ಸುಭದ್ರಮ್ಮ ಮನ್ಸೂರ್, ವೀಣಾ ಆದೋನಿ, ವಿ.ರಾಮಚಂದ್ರ, ಕೆ.ಜಗದೀಶ್, ಡಿ.ಎಂ.ಪಂಪಾತಿ, ನಾಗರಾಜ, ರಮೇಶ್ ಗೌಡ ಪಾಟೀಲ್, ವೆಂಕಟಯ್ಯ, ಗಂಗಾಧರ, ವೀಣಾ, ಜಯಶ್ರೀ ಪಾಟೀಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.