ಕೂಡ್ಲಿಗಿ: ತುಂಗಾಭದ್ರಾ ಜಲಾಶಯ ದಿಂದ ಸರಬರಾಜಾಗುವ ಬಹುಗ್ರಾಮ ಕುಡಿಯುವ ನೀರು ಯೋಜನೆಯ ಶುದ್ಧೀಕರಣ ಘಟಕವು ತಾಲ್ಲೂಕಿನ ಶಿವಪುರ ಬಳಿ ಇದ್ದು, ಈ ಘಟಕವು ಜೆಸ್ಕಾಂಗೆ ₹11 ಕೋಟಿ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದೆ. ಇದರಿಂದ ಪಾವಗಡ ಭಾಗಕ್ಕೆ ನೀರು ಪೂರೈಕೆ ಸ್ಥಗಿತವಾಗುವ ಭೀತಿ ಎದುರಾಗಿದೆ.
ಇದೇ ಯೋಜನೆಯಡಿ ಕೂಡ್ಲಿಗಿ ತಾಲ್ಲೂಕಿನ 218 ಗ್ರಾಮಗಳು ಸೇರಿದಂತೆ ಹೊಸಪೇಟೆ ತಾಲ್ಲೂಕು, ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು, ಚಳ್ಳಕೆರೆ, ಚಿತ್ರದುರ್ಗ ತಾಲ್ಲೂಕಿನ 1,088 ಗ್ರಾಮಗಳು ಹಾಗೂ 3 ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಜನರಿಗೆ ನಿರಂತರ ಕುಡಿಯುವ ನೀರು ಪೂರೈಕೆಗೆ ಯೋಜನೆ ರೂಪಿಸಲಾಗಿತ್ತು. ನೀರನ್ನು ಶುದ್ಧೀಕರಿಸಿ ಮುಂದಕ್ಕೆ ನೀರು ಸಾಗಿಸಲು ಈ ಬೃಹತ್ ಶುದ್ಧೀಕರಣ ಮತ್ತು ಪಂಪಿಂಗ್ ಘಟಕ ಸ್ಥಾಪಿಸಲಾಗಿದೆ.
ಈ ಘಟಕ ನಿರ್ಮಾಣಕ್ಕೆ ಗುತ್ತಿಗೆ ಪಡೆದಿರುವ ಖಾಸಗಿ ಕಂಪನಿಯೊಂದು ನಿರ್ವಹಣೆ ಮಾಡುತ್ತಿದ್ದು, ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿದೆ. ಇದಕ್ಕೆ ಬೇಕಾದ ವಿದ್ಯುತ್ ಅನ್ನು ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯ ಕಾರ್ಯ ನಿರ್ವಾಹಕ ಎಂಜಿನಿಯರ್ ಹೆಸರಲ್ಲಿ ಜೆಸ್ಕಾಂನಿಂದ 6.66 ಕೆವಿ ಸಾಮರ್ಥ್ಯದ ವಿದ್ಯುತ್ ಸಂಪರ್ಕ ಪಡೆಯಲಾಗಿದೆ. ಇದಕ್ಕೆ ಬಳಕೆ ಮಾಡುವ ವಿದ್ಯುತ್ ವೆಚ್ಚವಾಗಿ ಪ್ರತಿ ತಿಂಗಳು ₹60 ಲಕ್ಷಕ್ಕೂ ಹೆಚ್ಚು ಬಿಲ್ ಬರುತ್ತಿದ್ದು, ಈವರೆಗೂ ಒಂದು ಪೈಸೆಯನ್ನೂ ಪಾವತಿ ಮಾಡಿಲ್ಲ. ಇದರಿಂದ ಈವರೆಗೂ ₹1 ಕೋಟಿ ಬಡ್ಡಿ ಸೇರಿ ಒಟ್ಟು ₹11 ಬಾಕಿ ಉಳಿದಿದೆ. ಇದನ್ನು ಖಾಸಗಿ ಕಂಪನಿ ಪಾವತಿ ಮಾಡಬೇಕೋ, ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಪಾವತಿ ಮಾಡಬೇಕೋ ಎನ್ನುವ ಗೊಂದಲ ಹಾಗೆಯೇ ಉಳಿದಿದೆ.
ಬಾಕಿ ವಿದ್ಯುತ್ ಬಿಲ್ ಪಾವತಿಸುವಂತೆ 15 ಬಾರಿ ನೋಟಿಸ್ ಕಳುಹಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ಜೆಸ್ಕಾಂ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.