ADVERTISEMENT

‘ದುಡಿಯೋಣ ಬಾ’ ಅಭಿಯಾನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2021, 13:06 IST
Last Updated 15 ಮಾರ್ಚ್ 2021, 13:06 IST
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯ ಆಯುಕ್ತ, ವಿಜಯನಗರ ಜಿಲ್ಲೆಯ ವಿಶೇಷ ಅಧಿಕಾರಿ ಪಿ. ಅನಿರುದ್ಧ ಶ್ರವಣ್‌ ಅವರು ಸೋಮವಾರ ಭುವನಹಳ್ಳಿಯಲ್ಲಿ ಗ್ರಾಮಸ್ಥರ ಅಹವಾಲು ಆಲಿಸಿದರು
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯ ಆಯುಕ್ತ, ವಿಜಯನಗರ ಜಿಲ್ಲೆಯ ವಿಶೇಷ ಅಧಿಕಾರಿ ಪಿ. ಅನಿರುದ್ಧ ಶ್ರವಣ್‌ ಅವರು ಸೋಮವಾರ ಭುವನಹಳ್ಳಿಯಲ್ಲಿ ಗ್ರಾಮಸ್ಥರ ಅಹವಾಲು ಆಲಿಸಿದರು   

ವಿಜಯನಗರ (ಹೊಸಪೇಟೆ): ತಾಲ್ಲೂಕಿನ ಗಾದಿಗನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭುವನಹಳ್ಳಿ ಗ್ರಾಮದಲ್ಲಿ ಸೋಮವಾರ ‘ದುಡಿಯೋಣ ಬಾ’ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯ ಆಯುಕ್ತ, ವಿಜಯನಗರ ಜಿಲ್ಲೆಯ ವಿಶೇಷ ಅಧಿಕಾರಿ ಪಿ. ಅನಿರುದ್ಧ ಶ್ರವಣ್‌ ಅವರು ಅಭಿಯಾನಕ್ಕೆ ಚಾಲನೆ ನೀಡಿ, ‘ಉದ್ಯೋಗ ಖಾತ್ರಿ ಯೋಜನೆಯಡಿ ಈ ಅಭಿಯಾನ ನಡೆಸಲಾಗುತ್ತಿದೆ. ಕಡು ಬೇಸಿಗೆಯಲ್ಲೂ ಆಯಾ ಗ್ರಾಮಗಳಲ್ಲೇ ಸ್ಥಳೀಯರಿಗೆ ಉದ್ಯೋಗ ಒದಗಿಸಿಕೊಡುವುದು ಇದರ ಮುಖ್ಯ ಉದ್ದೇಶ’ ಎಂದು ಹೇಳಿದರು.

‘ಈ ಅಭಿಯಾನದಡಿ ಪ್ರತಿ ಕುಟುಂಬಕ್ಕೆ ನೂರು ದಿನ ಸತತ ಉದ್ಯೋಗ ನೀಡಲಾಗುವುದು. ಯೋಜನೆಯಿಂದ ಹೊರಗುಳಿದವರಿಗೂ ಕೆಲಸ ಕೊಡಲಾಗುವುದು. ಗ್ರಾಮೀಣ ಜನರನ್ನು ಸ್ವಾವಲಂಬಿಗೊಳಿಸುವುದು ಯೋಜನೆಯ ಗುರಿ’ ಎಂದು ತಿಳಿಸಿದರು.

ADVERTISEMENT

‘ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕನಿಷ್ಠ 50 ರೈತರ ಜಮೀನುಗಳಲ್ಲಿ ಬದು, ಕೃಷಿ ಹೊಂಡ, ತೆರೆದ ಬಾವಿ ನಿರ್ಮಿಸಲಾಗುವುದು. ಕೆರೆಗಳ ಸಮಗ್ರ ಅಭಿವೃದ್ಧಿ, ರಸ್ತೆಬದಿ ನೆಡುತೋಪು, ಬ್ಲಾಕ್‌ ಪ್ಲಾಂಟೇಶನ್‌, ರೈತರ ಜಮೀನುಗಳಲ್ಲಿ ತೋಟಗಾರಿಕೆ ಬೆಳೆ ಬೆಳೆಯಲು ಗುಂಡಿ ತೆಗೆಸುವುದು ಸೇರಿದಂತೆ ಇತರೆ ಕೆಲಸ ಮಾಡಲು ಅವಕಾಶ ಇದೆ. ಗ್ರಾಮಸ್ಥರು ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಹೇಳಿದರು. ನಂತರ ಕೂಲಿ ಕಾರ್ಮಿಕರ ಅಹವಾಲು ಆಲಿಸಿದರು.

ಯೋಜನೆಯ ಸಹಾಯಕ ನಿರ್ದೇಶಕ ಉಮೇಶ, ತಾಂತ್ರಿಕ ಎಂಜಿನಿಯರ್‌ ವಿಶಾಲಾಕ್ಷಿ, ತಾಂತ್ರಿಕ ಸಂಯೋಜಕ ವೀರೇಶ, ಸಹ ಸಂಯೋಜಕ ಹನುಮೇಶ, ಗ್ರಾಮ ಪಂಚಾಯತಿ ಅಧ್ಯಕ್ಷೆ ಎಚ್‌. ಮಲ್ಲಮ್ಮ ಉಪಾಧ್ಯಕ್ಷೆ ಮಲ್ಲಮ್ಮ ಕೋರಿ, ಸದಸ್ಯರಾದ ಚೌಡ್ಕಿ ಚಂದ್ರಪ್ಪ, ಸಣ್ಣ ಭರ್ಮಪ್ಪ, ಕಂತಿ ಬಸಪ್ಪ, ಗಂಟೆ ಶ್ರೀದೇವಿ, ನಾಯಕರ ಶಿವಲಕ್ಷ್ಮಿ, ಪಂಚಾಯತಿ ಕಾರ್ಯದರ್ಶಿ ಆರ್‌. ಕನಕಪ್ಪ, ಅಭಿವೃದ್ಧಿ ಅಧಿಕಾರಿ ಟಿ.ಎ. ರಾಜೇಶ್ವರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.