ADVERTISEMENT

‘ದಿಕ್ಕು ತಪ್ಪಿಸುತ್ತಿರುವ ಉಪಮುಖ್ಯಮಂತ್ರಿ ಕಾರಜೋಳ’

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2019, 14:49 IST
Last Updated 1 ಡಿಸೆಂಬರ್ 2019, 14:49 IST

ಹೊಸಪೇಟೆ: ‘ಘನತೆಯ ಸ್ಥಾನದಲ್ಲಿರುವ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಸುಳ್ಳು ವಿಷಯಗಳನ್ನು ಹೇಳಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ’ ಎಂದು ಕಾಂಗ್ರೆಸ್‌ ಹಿರಿಯ ಮುಖಂಡ ಆರ್‌.ಬಿ. ತಿಮ್ಮಾಪುರ ಆರೋಪಿಸಿದರು.

ಭಾನುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಡಾ.ಬಿ.ಆರ್‌. ಅಂಬೇಡ್ಕರ್‌ ಅವರು ನಿಧನರಾದಾಗ ಸರ್ಕಾರ ನವದೆಹಲಿಯಲ್ಲೇ ಅವರ ಸಮಾಧಿಗೆ ವ್ಯವಸ್ಥೆ ಮಾಡಿತ್ತು. ಆದರೆ, ಅವರ ಬೆಂಬಲಿಗರು, ಅನುಯಾಯಿಗಳು ಮುಂಬೈನಲ್ಲೇ ಮಾಡಬೇಕು ಎಂದು ಪಟ್ಟು ಹಿಡಿದ ಕಾರಣ ಸರ್ಕಾರ ತನ್ನ ನಿರ್ಧಾರ ಬದಲಿಸಿತು. ಆದರೆ, ಕಾರಜೋಳರು, ನೆಹರೂ ಸರ್ಕಾರ ಅಂಬೇಡ್ಕರ್‌ ಸಮಾಧಿಗೆ ಜಾಗ ಕೊಡಲಿಲ್ಲ ಎಂದು ಜನರಲ್ಲಿ ವಿಷ ಬೀಜ ಬಿತ್ತುತ್ತಿದ್ದಾರೆ’ ಎಂದರು.

‘ಅಂಬೇಡ್ಕರ್‌ ಅವರನ್ನು ಕೇಂದ್ರ ಸಚಿವ, ಸಂವಿಧಾನ ರಚನಾ ಸಮಿತಿ ಅಧ್ಯಕ್ಷರಾಗಿ ನೇಮಿಸಿದ್ದು ಕಾಂಗ್ರೆಸ್‌ ಪಕ್ಷ. ಚರಿತ್ರೆ ಗೊತ್ತಿರದಿದ್ದರೆ ಸುಮ್ಮನಿರಬೇಕು. ಆದರೆ, ಸುಳ್ಳು ಹರಡಬಾರದು. ಅಧಿಕಾರಕ್ಕೆ ಬಂದರೆ ಈ ದೇಶದ ಸಂವಿಧಾನ ಬದಲಿಸುತ್ತೇವೆ ಎಂದು ಹೇಳುವ ಬಿಜೆಪಿ ಮುಖಂಡರಿಗೆ, ಅಂಬೇಡ್ಕರ್‌ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ’ ಎಂದು ಟೀಕಿಸಿದರು.

ADVERTISEMENT

‘ನವದೆಹಲಿಯಲ್ಲಿ ಸಂವಿಧಾನದ ಪ್ರತಿಗಳನ್ನು ಸುಟ್ಟು ವಿಕೃತಿ ಮೆರೆದವರು ಯಾರು ಎನ್ನುವುದು ಈ ದೇಶದ ಜನರಿಗೆ ಗೊತ್ತಿದೆ. ಇತ್ತೀಚೆಗೆ ರಾಜ್ಯ ಸರ್ಕಾರ ಮಕ್ಕಳಿಗೆ ವಿತರಿಸಿರುವ ಪುಸ್ತಕಗಳಲ್ಲಿ ಅಂಬೇಡ್ಕರ್‌ ಒಬ್ಬರೇ ಸಂವಿಧಾನ ಬರೆದಿಲ್ಲ ಎಂಬ ಅಂಶ ಸೇರಿಸಿ ಅಪಮಾನ ಮಾಡಿದೆ. ಹೀಗಿರುವಾಗ ಅಂಬೇಡ್ಕರ್‌ ಬಗ್ಗೆ ಬಿಜೆಪಿ ಮಾತನಾಡುತ್ತಿರುವುದು ನೋಡಿದರೆ ಹಾಸ್ಯಾಸ್ಪದ ಎನಿಸುತ್ತದೆ’ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಎನ್.ಎಸ್.ಬೋಸ್‌ ರಾಜು, ಮುಖಂಡರಾದ ನಿಂಬಗಲ್ ರಾಮಕೃಷ್ಣ, ಕುಮಾರ್ ಸ್ವಾಮಿ, ಅನಿಲ್ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.