ADVERTISEMENT

ಪಡಿತರ ವಿತರಕರ ಸಮ್ಮೇಳನ ಫೆ.16ರಂದು

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2019, 14:47 IST
Last Updated 6 ಫೆಬ್ರುವರಿ 2019, 14:47 IST
ಟಿ.ಕೃಷ್ಣಪ್ಪ
ಟಿ.ಕೃಷ್ಣಪ್ಪ   

ಬಳ್ಳಾರಿ: ‘ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ 33ನೇ ವಾರ್ಷಿಕೋತ್ಸವ, ರಾಜ್ಯ ಸರ್ಕಾರಕ್ಕೆ ಕೃತಜ್ಞತಾ ಸಮರ್ಪಣಾ ಸಮಾರಂಭ ಹಾಗೂ ವಿತರಕರ ರಾಜ್ಯ ಮಟ್ಟದ ಸಮ್ಮೇಳನವು ಫೆ.16ರಂದು ಬೆಳಿಗ್ಗೆ 10.30ಕ್ಕೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಆಯೋಜಿಸಲಾಗಿದೆ’ ಎಂದು ಸಂಘದ ರಾಜ್ಯ ಘಟಕದ ಅಧ್ಯಕ್ಷ ಟಿ.ಕೃಷ್ಣಪ್ಪ ತಿಳಿಸಿದರು.

‘ಈ ಮುಂಚೆ ಇದ್ದ ₹87 ಕಮಿಷನ್‌ಗೆ ₹13 ಸೇರಿಸಿ ₹100 ಗಳನ್ನು ಕಳೆದ ತಿಂಗಳಿಂದಲೇ ಜಾರಿಗೊಳಿಸಲಾಗಿದೆ. ಇದಕ್ಕಾಗಿ ರಾಜ್ಯ ಸರ್ಕಾರಕ್ಕೆ ಸಂಘದಿಂದ ಅಭಿನಂದನೆ ಸಲ್ಲಿಸಲಾಗುವುದು. ಆದರೂ ನೆರೆಯಗೋವಾದಲ್ಲಿ ₹200, ಮಹಾರಾಷ್ಟ್ರ ₹170 ಕಮಿಷನ್ ನೀಡಲಾಗುತ್ತಿದೆ. ಅವುಗಳಂತೆ ರಾಜ್ಯದಲ್ಲಿಯೂ ₹ 150 ಕಮಿಷನ್ ನೀಡುವಂತೆ ಸಮ್ಮೇಳನದಲ್ಲಿ ಮನವಿ ಸಲ್ಲಿಸಲಾಗುವುದು’ ಎಂದು ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ರಾಜ್ಯ ಸರ್ಕಾರ ಈ ಮೊದಲಿನಂತೆ ತಾಳೆ ಎಣ್ಣೆ, ಉಪ್ಪು, ಸಕ್ಕರೆಯನ್ನು ವಿತರಣೆ ಮಾಡಬೇಕು. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಯಾವುದೇ ನಷ್ಟವಾಗುವುದಿಲ್ಲ. ಈಗ ಕೇವಲ ಅಕ್ಕಿ ಮತ್ತು ಬೇಳೆ ಮಾತ್ರ ವಿತರಣೆ ಮಾಡಲಾಗುತ್ತಿದೆ. ಅವುಗಳನ್ನು ಮತ್ತೆ ಪ್ರಾರಂಭಿಸಬೇಕು. ಕೇಂದ್ರ ಸರ್ಕಾರವು ಪ್ರತಿ ತಿಂಗಳು ರೇಷನ್ ಬದಲಾಗಿ ₹2500 ನೀಡಲಾಗುವುದು’ ಎಂದು ಘೋಷಿಸಿದ್ದರೆ. ಆದರೆ ಅದರಿಂದ ಪಡಿತರ ಕುಟುಂಬಗಳಿಗೆ ಯಾವುದೇ ಲಾಭವಾಗುವುದಿಲ್ಲ. ಹಣಕ್ಕೆ ಬದಲಾಗಿ ಮೊದಲಿನಂತೆ ಪಡಿತರ ನೀಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಕೇಂದ್ರ ಆಹಾರ ಮತ್ತು ಗ್ರಾಹಕರ ವ್ಯವಹಾರ ಸಾರ್ವಜನಿಕ ವಿತರಣೆ ಸಚಿವ ರಾಮ್‌ವಿಲಾಸ್ ಪಾಸ್ವಾನ್ ಆಗಮಿಸಲಿದ್ದಾರೆ. ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಬಿ.ಜಮೀರ್ ಅಹಮದ್ ಸಂಘದ ಸಮ್ಮೇಳನ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ’ ಎಂದು ಹೇಳಿದರು.

ಸಂಘದ ಡಿ.ತಾಯಣ್ಣ, ವೆಂಕಟೇಶ್, ನಾಗರಾಜ, ಪಾಲಾಕ್ಷಯ್ಯ, ಸದಾಶಿವ, ಕೆ.ಮಾರುತಿ, ತುಕಾರಾಂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.