ADVERTISEMENT

ಆರೋಪ ಸಾಬೀತಾದರೆ ರಾಜೀನಾಮೆ: ಶಾಂತಲಾ

ಸಾರ್ವಜನಿಕರಿಂದ ಪುರಸಭೆ ಅಧ್ಯಕ್ಷಯ ಪತಿ ಹಣ ಪಡೆದ ಆರೋಪ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2021, 3:23 IST
Last Updated 10 ಆಗಸ್ಟ್ 2021, 3:23 IST
ಕಂಪ್ಲಿ ಪುರಸಭೆಯಲ್ಲಿ ಸೋಮವಾರ ನಡೆದ ಬಿಜೆಪಿ ಸಭೆಯಲ್ಲಿ ಪುರಸಭೆ ಅಧ್ಯಕ್ಷೆ ಶಾಂತಲಾ ವಿ. ವಿದ್ಯಾಧರ ಮಾತನಾಡಿದರು
ಕಂಪ್ಲಿ ಪುರಸಭೆಯಲ್ಲಿ ಸೋಮವಾರ ನಡೆದ ಬಿಜೆಪಿ ಸಭೆಯಲ್ಲಿ ಪುರಸಭೆ ಅಧ್ಯಕ್ಷೆ ಶಾಂತಲಾ ವಿ. ವಿದ್ಯಾಧರ ಮಾತನಾಡಿದರು   

ಕಂಪ್ಲಿ: ‘ನನ್ನ ಪತಿ ಸಾರ್ವಜನಿಕರಿಂದ ಹಣ ಪಡೆದಿರುವುದನ್ನು ಸಾಬೀತು ಮಾಡಿದರೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ’ ಎಂದು ಪುರಸಭೆ ಅಧ್ಯಕ್ಷೆ ಶಾಂತಲಾ ವಿ. ವಿದ್ಯಾಧರ ಸ್ಪಷ್ಟಪಡಿಸಿದರು.

ಪುರಸಭೆಯಲ್ಲಿ ಸೋಮವಾರ ನಡೆದ ಬಿಜೆಪಿ ಪುರಸಭೆ ಸದಸ್ಯರ, ಪಕ್ಷದ ಮುಖಂಡರ ಸಭೆಯಲ್ಲಿ ಮಾತನಾಡಿದರು.‘ಹಣ ಪಡೆದಿದ್ದಾರೆ ಎಂದು ಆರೋಪ ಮಾಡುವ ಪುರಸಭೆ ಕಾಂಗ್ರೆಸ್ ಸದಸ್ಯರು ಅದನ್ನು ಸಾಬೀತುಪಡಿಸಲು ವಿಫಲರಾದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವರೆ?’ ಎಂದು ಪ್ರಶ್ನಿಸಿದರು.

‘ಜವಾಬ್ದಾರಿಯುತ ಸ್ಥಾನದಲ್ಲಿರುವ ಪುರಸಭೆ ಕಾಂಗ್ರೆಸ್ ಸದಸ್ಯ ಕೆ.ಎಸ್. ಚಾಂದ್‍ಬಾಷ ಇತರರು ನನ್ನ ಪತಿಯ ಬಗ್ಗೆ ಅಪಾದಿಸುವ ಮುನ್ನ ಸತ್ಯಾಂಶ ಅರಿಯಬೇಕು. ವಿನಾಕಾರಣ ದೂರಿ ಗೊಂದಲ ಸೃಷ್ಟಿಸಿ ತಪ್ಪು ಸಂದೇಶ ರವಾನಿಸುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.

ADVERTISEMENT

ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ವಿ. ಸುದರ್ಶನರೆಡ್ಡಿ, ಬಿಜೆಪಿ ಪುರಸಭೆ ಸದಸ್ಯರಾದ ಸಿ.ಆರ್. ಹನುಮಂತ, ಡಾ.ವಿ.ಎಲ್. ಬಾಬು, ಎನ್. ರಾಮಾಂಜನೇಯಲು, ಆರ್. ಆಂಜಿನೇಯ, ಹೂಗಾರ ರಮೇಶ್ ಇತರರು ಮಾತನಾಡಿ, ‘ಪುರಸಭೆ ವ್ಯಾಪ್ತಿಗೊಳಪಡುವ ನೀರು ಸರಬರಾಜು ಪೈಪ್ ಅನ್ನು ಸ್ಥಳೀಯ ಶಾಸಕರು ವಿಸ್ತರಿಸಿ ನೆಲ್ಲೂಡಿ ಕೊಟ್ಟಾಲು ಗ್ರಾಮ ಪಂಚಾಯಿತಿ ಸರಹದ್ದಿನ ಮನೆಗಳಿಗೆ ಕೊಳಾಯಿ ಸಂಪರ್ಕ ಕಲ್ಪಿಸಿರುವುದು ನಿಯಮಗಳಿಗೆ ವಿರುದ್ಧವಾಗಿದೆ’ ಎಂದು ದೂರಿದರು.

‘ಅಕ್ಕಪಕ್ಕದ ಊರಿನವರಾದ ನಾವೆಲ್ಲರು ಸಾಮರಸ್ಯದಿಂದ ನಡೆದುಕೊಂಡು ಹೋಗುತ್ತಿದ್ದೇವೆ. ಶಾಸಕರು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಇಂದು ಸಹೋದರರಂತಿದ್ದ ಅಕ್ಕಪಕ್ಕದ ಗ್ರಾಮಸ್ಥರ ಮಧ್ಯೆ ಕಂದಕ ನಿರ್ಮಿಸಿದ್ದಾರೆ’ ಎಂದು ಅಪಾದಿಸಿದರು. ‘ಆ.8ರಂದು ದೌರ್ಜನ್ಯದಿಂದ ಅನಧಿಕೃತವಾಗಿ ಕೊಳಾಯಿ ಸಂಪರ್ಕ ಕಲ್ಪಿಸಿರುವ ಶಾಸಕರು ಇದರಲ್ಲಿ ನನ್ನದೇನು ಪಾತ್ರವಿಲ್ಲ ಎಂದು ನುಣಿಚಿಕೊಳ್ಳುತ್ತಿದ್ದಾರೆ’ ಆರೋಪಿಸಿದರು.

ಶಾಸಕರು ನಳ ಸಂಪರ್ಕ ಕಾಮಗಾರಿಗೆ ಚಾಲನೆ ನೀಡಿದ ವಿಡಿಯೊಗಳನ್ನು ಸಭೆಯಲ್ಲಿ ಪ್ರದರ್ಶಿಸಲಾಯಿತು. ಮುಖಂಡರಾದ ಪಿ. ಬ್ರಹ್ಮಯ್ಯ, ಬಿ. ಸಿದ್ದಪ್ಪ, ಜಿ. ಸುಧಾಕರ, ಡಾ. ವೆಂಕಟೇಶ್, ಡಿ. ಶ್ರೀಧರಶ್ರೇಷ್ಠಿ, ಎನ್. ಪುರುಷೋತ್ತಮ, ಕೊಡಿದಲರಾಜು, ವಸಂತ್‍ಕುಮಾರ, ಎಸ್. ರಾಘವೇಂದ್ರ ಇತರರು ಹಾಜರಿದ್ದರು.

ದೂರು ಸಲ್ಲಿಕೆ: ಕಂಪ್ಲಿ-ಕುರುಗೋಡು ರಸ್ತೆಯಲ್ಲಿ ಪುರಸಭೆಗೆ ಸೇರಿದ ಕುಡಿಯುವ ನೀರಿನ ಪೈಪ್‍ಲೈನ್ ಮೂಲಕ ಕೆಲ ವ್ಯಕ್ತಿಗಳು ಭಾನುವಾರ ಅನಧಿಕೃತವಾಗಿ ಮನೆಗಳಿಗೆ ಸಂಪರ್ಕ ಕಲ್ಪಿಸಿದ್ದಾರೆ. ಈ ಕುರಿತು ಕಾನೂನು ಕ್ರಮ ತೆಗೆದುಕೊಳ್ಳುವಂತೆ ಸ್ಥಳೀಯ ಪೊಲೀಸ್ ಠಾಣೆಗೆ ಆ.9ರಂದು ದೂರು ಸಲ್ಲಿಸಿರುವುದಾಗಿ ಪುರಸಭೆ ಮುಖ್ಯಾಧಿಕಾರಿ ಎನ್. ಶಿವಲಿಂಗಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.