ADVERTISEMENT

ಪತ್ರಿಕೆಗೆ ಸಮರ್ಪಿಸಿಕೊಂಡ ಕುಡಿತಿನಿ ಕುಟುಂಬ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 3 ಸೆಪ್ಟೆಂಬರ್ 2019, 19:45 IST
Last Updated 3 ಸೆಪ್ಟೆಂಬರ್ 2019, 19:45 IST
ಪತ್ರಿಕೆ ಹಾಗೂ ಪುಸ್ತಕ ಮಳಿಗೆಯಲ್ಲಿ ಕುಡಿತಿನಿ ಕುಟುಂಬ ಸದಸ್ಯರು
ಪತ್ರಿಕೆ ಹಾಗೂ ಪುಸ್ತಕ ಮಳಿಗೆಯಲ್ಲಿ ಕುಡಿತಿನಿ ಕುಟುಂಬ ಸದಸ್ಯರು   

ಹೊಸಪೇಟೆ: ಇಲ್ಲಿನ ಕುಡಿತಿನಿ ಕುಟುಂಬ ಪತ್ರಿಕೆ ವಿತರಣೆಗಾಗಿಯೇ ತನ್ನನ್ನು ತಾನು ಸಂಪೂರ್ಣವಾಗಿ ಸಮರ್ಪಿಸಿಕೊಂಡಿದೆ.

1949ರಲ್ಲಿ ಈ ವೃತ್ತಿಗೆ ಬಂದ ಈ ಕುಟುಂಬ ಇಂದಿಗೂ ಅದರಲ್ಲಿಯೇ ಮುಂದುವರೆದಿದೆ. ಈ ಪರಿವಾರದ ಪ್ರತಿಯೊಬ್ಬ ಸದಸ್ಯರು ಜನರ ಮನೆಬಾಗಿಲಿಗೆ ಪತ್ರಿಕೆ ತಲುಪಿಸುವ ಕೆಲಸ ಮಾಡುತ್ತಾರೆ.

ನಸುಕಿನ ಜಾವ ಎರಡು ಗಂಟೆಗೆ ಇವರ ಕಾಯಕ ಆರಂಭವಾದರೆ, ರಾತ್ರಿ ಒಂಬತ್ತು ಗಂಟೆಯವರೆಗೆ ನಡೆಯುತ್ತದೆ. ಮನೆಯ ಗಂಡಸರು ನಸುಕಿನಲ್ಲಿ ವಾಹನದಿಂದ ಬರುವ ಪತ್ರಿಕೆ ಪಡೆದು, ಅವುಗಳನ್ನು ಎಣಿಕೆ ಮಾಡಿ, ವಿಂಗಡಿಸುವ ಕೆಲಸ ಮಾಡಿದರೆ, ಹೆಣ್ಣು ಮಕ್ಕಳು ಪತ್ರಿಕೆಗಳಲ್ಲಿ ಪುರವಣಿಗಳನ್ನು ಸೇರಿಸುವ ಕೆಲಸ ಮಾಡುತ್ತಾರೆ. ಮತ್ತೊಮ್ಮೆ ಎಣಿಕೆ ಮಾಡಿ ಖಾತ್ರಿಪಡಿಸಿಕೊಳ್ಳುತ್ತಾರೆ. ಬೆಳಕು ಹರಿದು ಪತ್ರಿಕೆಗಳನ್ನು ಜನರಿಗೆ ತಲುಪಿಸುವ ಮುನ್ನ ಕುಟುಂಬದ ಎಲ್ಲರಿಗೂ ಉಪಾಹಾರ ಸಿದ್ಧಪಡಿಸುತ್ತಾರೆ.

ADVERTISEMENT

ಮನೆ ಮನೆಗೆ ಪತ್ರಿಕೆ ಹಂಚುವುದು, ಬಿಲ್‌ ಸಂಗ್ರಹಿಸುವ ಎಲ್ಲ ಕೆಲಸವನ್ನು ಈ ಕುಟುಂಬದವರೇ ಮಾಡುತ್ತಾರೆ. ಇತ್ತೀಚಿನ ಕೆಲ ವರ್ಷಗಳಿಂದ ಕೆಲಸ ಹೆಚ್ಚಾಗಿರುವುದರಿಂದ ಪತ್ರಿಕೆ ವಿತರಣೆಗೆ ನಾಲ್ಕೈದು ಹುಡುಗರನ್ನು ನೇಮಿಸಿಕೊಂಡಿದ್ದಾರೆ. ಪತ್ರಿಕೆ ತಲುಪದೇ ಯಾರಾದರೂ ಕರೆ ಮಾಡಿದರೆ ಕೆಲವೇ ನಿಮಿಷಗಳಲ್ಲಿ ಖುದ್ದಾಗಿ ಆ ಮನೆಗೆ ಹೋಗಿ ಅದನ್ನು ತಲುಪಿಸುವ ಕೆಲಸ ಮಾಡುತ್ತಾರೆ.

‘ಪ್ರಜಾವಾಣಿ’, ‘ಡೆಕ್ಕನ್‌ ಹೆರಾಲ್ಡ್‌’ನಿಂದ ಆರಂಭವಾದ ಇವರ ಪಯಣ ಇತರೆ ಪತ್ರಿಕೆಗಳಿಗೂ ವಿಸ್ತರಿಸಿದೆ. ಇವರ ಕೆಲಸವನ್ನು ಮೆಚ್ಚಿ ‘ಪ್ರಜಾವಾಣಿ’ಯ ಜೆ.ಎಂ.ಡಿ. ಕೆ.ಎನ್‌. ತಿಲಕ್‌ ಕುಮಾರ್‌ ಅವರು ಎರಡು ಸಲ ಇವರನ್ನು ಗೌರವಿಸಿದ್ದಾರೆ. ನಗರದ ಪುಣ್ಯಮೂರ್ತಿ ವೃತ್ತ, ರೈಲು ನಿಲ್ದಾಣದಲ್ಲಿ ಮಳಿಗೆಗಳನ್ನು ಹೊಂದಿದ್ದಾರೆ. ‘ಶಾರದಾ ಸ್ಟಾಲ್‌’ ಹೆಸರಿನ ಇವರ ಮಳಿಗೆ ನಗರದ ಪ್ರತಿಯೊಬ್ಬರಿಗೂ ಚಿರಪರಿಚಿತ.

ಮೂಲತಃ ಕುಡಿತಿನಿ ಪಟ್ಟಣದವರಾದ ಈ ಕುಟುಂಬ 1940ರಲ್ಲಿ ನಗರಕ್ಕೆ ವಲಸೆ ಬಂದಿತ್ತು. ಕುಡಿತಿನಿ ವೀರಣ್ಣನವರು ಆರಂಭದಲ್ಲಿ ಕೆಲ ವರ್ಷ ನಗರದಲ್ಲಿ ಗುಮಾಸ್ತನಾಗಿ ಕೆಲಸ ಮಾಡಿದರು. ಬಳಿಕ 1949ರಲ್ಲಿ ಪತ್ರಿಕೆಯ ಏಜೆನ್ಸಿ ಪಡೆದು, ಅವರೇ ಖುದ್ದಾಗಿ ಜನರಿಗೆ ತಲುಪಿಸುವ ಕೆಲಸ ಮಾಡಿದರು. ನಂತರ ಅವರ ಮಕ್ಕಳಾದಹನುಮಂತಪ್ಪ,ಭೂಪತಿ, ಶಿವಾನಂದ, ವೆಂಕಟೇಶ್‌ ಮುಂದುವರೆಸಿಕೊಂಡು ಬಂದರು. ಇದೀಗ ಅವರ ಮೂರನೇ ತಲೆಮಾರಿನವರಾದ ವಿರೂಪಾಕ್ಷ, ಮಹೇಶ್‌ ಕೂಡ ಇದರಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಮನೆಯ ಹೆಣ್ಣು ಮಕ್ಕಳಾದ ಜಾನಕಿ, ಮಂಜುಳಾ, ಕೃಷ್ಣವೇಣಿ, ಉಮಾ, ನೇತ್ರಾ, ಭಾರತಿ, ಪದ್ಮಜಾ, ಶ್ರೀದೇವಿ, ಶ್ರಾವಣಿ, ಕಾವ್ಯ, ನಿಶಿತಾ, ರಮಾಪ್ರಿಯ ದೈನಂದಿನ ಕೆಲಸಕ್ಕೆ ನೆರವಾಗುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.