ADVERTISEMENT

ರೈತರ ಆರ್ಥಿಕ ಅಭಿವೃದ್ದಿಗೆ ರೈತ ಸಂಪರ್ಕ ಕೇಂದ್ರ ಅವಶ್ಯಕ: ಸಂಸದ ತುಕಾರಾಂ

ರೈತ ಸಂಪರ್ಕ ಕೇಂದ್ರದ ಕಟ್ಟಡ ಕಾಮಗಾರಿಗೆ ಭೂಮಿಪೂಜೆ: ಸಂಸದ ಇ.ತುಕಾರಾಂ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2024, 14:42 IST
Last Updated 9 ಅಕ್ಟೋಬರ್ 2024, 14:42 IST
ತೋರಣಗಲ್ಲು ಗ್ರಾಮದಲ್ಲಿ ಸಂಸದ ಇ.ತುಕಾರಾಂ ಅವರು ನೂತನ ರೈತ ಸಂಪರ್ಕ ಕೇಂದ್ರದ ಕಟ್ಟಡದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು
ತೋರಣಗಲ್ಲು ಗ್ರಾಮದಲ್ಲಿ ಸಂಸದ ಇ.ತುಕಾರಾಂ ಅವರು ನೂತನ ರೈತ ಸಂಪರ್ಕ ಕೇಂದ್ರದ ಕಟ್ಟಡದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು   

ತೋರಣಗಲ್ಲು: ‘ಗ್ರಾಮೀಣ ಪ್ರದೇಶದ ಬಡ ರೈತರ ಸಮಗ್ರ ಅಭಿವೃದ್ಧಿಗೆ ರೈತ ಸಂಪರ್ಕ ಕೇಂದ್ರಗಳು ಅವಶ್ಯಕವಾಗಿದ್ದು, ರೈತರು ಕೃಷಿ ಇಲಾಖೆಯಿಂದ ಎಲ್ಲ ಸೌಲಭ್ಯಗಳನ್ನು ಸಕಾಲಕ್ಕೆ ಪಡೆದು ಆರ್ಥಿಕ ಪ್ರಗತಿ ಸಾಧಿಸಬೇಕು’ ಎಂದು ಸಂಸದ ಇ.ತುಕಾರಾಂ ಹೇಳಿದರು.

ಗ್ರಾಮದ ನಾಡಕಾರ್ಯಾಲಯದ ಬಳಿ ಜಿಲ್ಲಾ ಖನಿಜ ನಿಧಿಯ ಅನುದಾನದಲ್ಲಿ ₹50 ಲಕ್ಷ ವೆಚ್ಚದ  ರೈತ ಸಂಪರ್ಕ ಕೇಂದ್ರದ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

‘ಗ್ರಾಮದಲ್ಲಿ ಬಡ ಮಕ್ಕಳ ತಾಂತ್ರಿಕ ಶಿಕ್ಷಣದ ಅಭಿವೃದ್ಧಿಗೆ ₹3ಕೋಟಿ ವೆಚ್ಚದಲ್ಲಿ ಸರ್ಕಾರಿ ಐಟಿಐ ಕಾಲೇಜು ಕಟ್ಟಡ, ಗ್ರಾಮದ ಯುವಕರ ಸಬಲಿಕರಣಕ್ಕಾಗಿ ₹50ಲಕ್ಷ ವೆಚ್ಚದಲ್ಲಿ ಎರಡು ಯುವಕ ಮಂಡಳಿಯ ಕಟ್ಟಡಗಳನ್ನು ನಿರ್ಮಸಲಾಗುವುದು. ಹಳೆದರೋಜಿ ಗ್ರಾಮದ ಹೊರವಲಯದ ಹಳ್ಳದ ಬಳಿ ಸಣ್ಣ ನೀರಾವರಿ, ಅಂತರ್ಜಲ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ₹6ಕೋಟಿ ವೆಚ್ಚದ ಏತ ನೀರಾವರಿ ಯೋಜನೆಯ ಕಾಮಗಾರಿಯನ್ನು ಶೀಘ್ರ ಆರಂಭಿಸಲಾಗುವುದು’ ಎಂದರು.

ADVERTISEMENT

ತಾರಾನಗರ, ಹಳೆದರೋಜಿ ಗ್ರಾಮಗಳಲ್ಲಿ ನೂತನ ಬಸ್ ನಿಲ್ದಾಣ, ಹೊಸದರೋಜಿ ಗ್ರಾಮದಲ್ಲಿ ತೆರದ ಜಿಮ್ ಉದ್ಘಾಟಿಸಿದರು. ಬನ್ನಿಹಟ್ಟಿ, ವಡ್ಡು ಗ್ರಾಮಗಳ ಬಳಿ ಚೆಕ್ ಡ್ಯಾಂಗಳ ನಿರ್ಮಾಣ, ಕುರೆಕುಪ್ಪ ಪಟ್ಟಣದಲ್ಲಿ ರಸ್ತೆ, ಪ್ರೌಢಶಾಲೆಗಳ ಕೊಠಡಿಗಳಿಗೆ, ಹೊಸದರೋಜಿ ಗ್ರಾಮದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಎಸ್.ಎಲ್.ಸ್ವಾಮಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಅಳ್ಳಾಪುರದ ವಿರೇಶಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಏಕಾಂಬ್ರಪ್ಪ, ಉಪಾಧ್ಯಕ್ಷ ನೂರ್‌ ಅಹಮ್ಮದ್, ಮುಖಂಡರಾದ ಎಚ್.ವಿರೇಶಪ್ಪ, ಯು.ಪಂಪಾಪತಿ, ಎನ್.ಮಲ್ಲಯ್ಯ, ಕೃಷಿ ಇಲಾಖೆಯ ಅಧಿಕಾರಿಗಳಾದ ಸೋಮಸುಂದರ್, ಮಂಜುನಾಥ, ಮಂಜುನಾಥರೆಡ್ಡಿ, ಸಂತೋಷ ಕುಮಾರ್, ರೈತ ಮುಖಂಡರಾದ ಜಾಫರ್ ಸಾಬ್, ಪಂಪನಗೌಡ ಪಾಲ್ಗೊಂಡಿದ್ದರು.

ಮಾತಿನ ಚಕಮಕಿ : ಕುರೆಕುಪ್ಪ ಪಟ್ಟಣದ ಕಾಲುವೆಯ ರಸ್ತೆಯ ಬಳಿ ಕುರೆಕುಪ್ಪ ಪಟ್ಟಣದಿಂದ ದೇವಲಾಪುರ ಗ್ರಾಮದವರೆಗೂ ಪಿಎಂಜಿಎಸ್‍ವೈ ಯೋಜನೆಡಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸುವಾಗ ಸಂಸದ ಇ.ತುಕಾರಾಂ, ಕುರೆಕುಪ್ಪ ಪುರಸಭೆಯ 2ನೇ ವಾರ್ಡ್‌ ಸದಸ್ಯ ಎನ್.ಸೋಮಪ್ಪ ಅವರ ನಡುವೆ ಕೆಲ ಕಾಲ ಮಾತಿನ ಚಕಮಕಿ ನಡೆಯಿತು.

ಎಚ್‍ಎಲ್‍ಸಿ ಕಾಲುವೆಯ ಬದಿಯಲ್ಲಿ ತುಂಗಭದ್ರ ಮಂಡಳಿ ಅವರಿಗೆ ಸೇರಿದ ಸ್ಥಳದಲ್ಲಿ ರಸ್ತೆ ಕಾಮಗಾರಿ  ಮಾಡುವುದು ಹೇಗೆ ಸಾಧ್ಯ, ಮಂಡಳಿಯವರು ರಸ್ತೆ ನಿರ್ಮಾಣಕ್ಕೆ ಒಪ್ಪಿಗೆ ಕೊಡುವುದಿಲ್ಲ ರಸ್ತೆ ಕಾಮಗಾರಿಯು ನಡೆಯುವುದಿಲ್ಲ ಎಂದು ಸೋಮಪ್ಪ ಅವರು ಸಂಸದರನ್ನು ಪ್ರಶ್ನೆ ಮಾಡಿದರು. ಅದಕ್ಕೆ ಸಂಸದರು ಸಿಟ್ಟಿನಿಂದ ಇದು ಸಾರ್ವಜನಿಕರ ಸಂಚಾರಕ್ಕಾಗಿ ಕೈಗೊಂಡ ರಸ್ತೆ ಕಾಮಗಾರಿಯಾಗಿದ್ದು, ಇದಕ್ಕೆ ಅಡ್ಡಿಪಡಿಸುವುದು ಸರಿಯಲ್ಲ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಬಳಿ ಸಮಗ್ರವಾಗಿ ಚರ್ಚಿಸಿ ನೂತನ ರಸ್ತೆ ಕಾಮಗಾರಿ  ಹಮ್ಮಿಕೊಳ್ಳಲಾಗುವುದು ಎಂದು ಎಂದರು.  ‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.