ADVERTISEMENT

ಬಳ್ಳಾರಿ | ರೈತರ ಸರಣಿ ಸಾವು: ಮಿತಿ ರಹಿತ ಖರೀದಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2025, 7:39 IST
Last Updated 12 ಅಕ್ಟೋಬರ್ 2025, 7:39 IST
ಗಾದಿಲಿಂಗ
ಗಾದಿಲಿಂಗ   

ಬಳ್ಳಾರಿ: ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಸರಣಿಯೋಪಾದಿಯಲ್ಲಿ ನಡೆಯುತ್ತಿದ್ದು, ಇದನ್ನು ತಡೆಯಲು ರಾಜ್ಯ ಸರ್ಕಾರವು ರೈತರ ಬೆಳೆಯನ್ನು ಮಿತಿ ರಹಿತವಾಗಿ, ಬೆಂಬಲ ಬೆಲೆಯಲ್ಲಿ ಖರೀದಿ ಮಾಡಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಆಗ್ರಹಿಸಿದೆ. 

ಬಳ್ಳಾರಿ ತಾಲ್ಲೂಕಿನ ಕೋಳಗಲ್‌ ಗ್ರಾಮದಲ್ಲಿ ರೈತನೊಬ್ಬ ಸಾಲಬಾಧೆ ತಾಳದೇ ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ರೈತ ಸಂಘವು ಸರ್ಕಾರಕ್ಕೆ ಶನಿವಾರ  ಪತ್ರ ಬರೆದಿದೆ. 

‘ಇತ್ತೀಚಿನ ವರ್ಷಗಳಲ್ಲಿ ನಮ್ಮ ಭಾಗದ ಗದ್ದೆಗಳಲ್ಲಿನ ಭತ್ತದ ಬೆಳೆಗೆ ನಾನಾ ರೋಗಗಳು ಬರುತ್ತಿವೆ. ಇದರ ನಿವಾರಣೆಗೆ ರಾಸಾಯನಿಕ, ಕ್ರಿಮಿನಾಶಕಗಳನ್ನು ಬಳಸಬೇಕಾದ ಅನಿವಾರ್ಯತೆ ಇದೆ. ದುಬಾರಿ ಕ್ರಿಮಿನಾಶಗಳನ್ನು ಖರೀದಿಸಲು ಕೃಷಿ ಸಹಕಾರಿ ಸಂಘಗಳು ಸೇರಿದಂತೆ ಬ್ಯಾಂಕ್, ಫೈನಾನ್ಸ್‌ಗಳಲ್ಲಿ ಸಾಲ ಪಡೆದು ಬೆಳೆಗಳ ಮೇಲೆ ಬಂಡವಾಳ ಹಾಕಲಾಗುತ್ತಿದೆ. ಇದೇ ಹೊತ್ತಲ್ಲೇ ಅತೀವೃಷ್ಟಿ, ಅನಾವೃಷ್ಟಿ ಮತ್ತು ಕೀಟಬಾಧೆಗಳಿಂದ ನಿರೀಕ್ಷಿಸದಷ್ಟು ಲಾಭ ಬರದೇ ಇರುವುದರಿಂದ ಸಾಲ ತೀರಿಸಲು ಆಗದೆ ರೈತರು ಸಂಕಷ್ಟಕ್ಕೆ ಒಳಗಾಗಿ, ಸಾಲಗಾರರ ಕಾಟದಿಂದ ಕುಗ್ಗಿಹೋಗಿದ್ದಾರೆ. ನಿರಂತರವಾಗಿ ಹೀಗೆ ಕಳೆದ 2-3 ವರ್ಷಗಳಿಂದ ರೈತರು ನಷ್ಟಕ್ಕೆ ಗುರಿಯಾಗುತ್ತಿದ್ದಾರೆ. ಸರ್ಕಾರವು ಇಂಥ ರೈತರಿಗೆ ಪರಿಹಾರವನ್ನು ನೀಡಬೇಕು. ಬ್ಯಾಂಕ್‌ ಸಾಲ ಮನ್ನಾ ಮಾಡಬೇಕು’ ಎಂದು ಸಂಘಟನೆ ಆಗ್ರಹಿಸಿದೆ. 

ADVERTISEMENT

‘ರೈತನನ್ನು ದೇಶದ ಬೆನ್ನೆಲುಬು ಎಂದು ಕರೆಯಲಾಗುತ್ತದೆ. ವಾಸ್ತವದಲ್ಲಿ ರೈತನ ಬೆನ್ನೆಲುಬು ಮುರಿದು ಹೋಗಿದೆ. ಇದೇ ಹೊತ್ತಲ್ಲೇ ಉದ್ದಿಮೆದಾರರ ಸಾವಿರಾರು ಕೋಟಿ ಸಾಲ ಮನ್ನಾ ಆಗುತ್ತಿದೆ. ರೈತನ ನೆರವಿಗೆ ಸರ್ಕಾರಗಳು ನಿಲ್ಲದೇ ಇರುವುದು ದುರಂತ’ ಎಂದು ಸಂಘಟನೆ ತನ್ನ ಪತ್ರದಲ್ಲಿ ಆಕ್ರೋಶ ವ್ಯಕ್ತಪಡಿಸಿದೆ. 

‘ರಾಜ್ಯದಲ್ಲಿ ಹೆಚ್ಚುತ್ತಿರುವ ರೈತರ ಆತ್ಮಹತ್ಯೆ ಪ್ರಕರಣಗಳನ್ನು ಪತ್ತೆಹಚ್ಚಬೇಕು. ರೈತರ ನಷ್ಟಕ್ಕೆ ಕಾರಣವಾಗುತ್ತಿರುವ ಅಲಿಖಿತ ಖರೀದಿಯನ್ನು ನಿಯಂತ್ರಣಕ್ಕೆ ತರಬೇಕು. ರೈತನು ಬೆಳೆಯುವ ಎಲ್ಲಾ ಬೆಳೆಗಳಿಗೆ ವೈಜ್ಞಾನಿಕ ಬೆಂಬಲ ಬೆಲೆ ನಿಗದಿಪಡಿಸಬೇಕು. ಬೆಂಬಲ ಬೆಲೆ ಅಡಿಯಲ್ಲಿ ಮಿತಿ ರಹಿತವಾಗಿ ಬೆಳಗಳನ್ನು ಖರೀದಿ ಮಾಡಬೇಕು’ ಎಂದು ಸಂಘಟನೆ ಒತ್ತಾಯಿಸಿದೆ. 

ಸಾಲ ಬಾಧೆ ರೈತ ಆತ್ಮಹತ್ಯೆ 

ಬಳ್ಳಾರಿ: ತಾಲ್ಲೂಕಿನ ಕೊಳಗಲ್ಲು ಗ್ರಾಮದ ರೈತ  ಗಾದಿಲಿಂಗ (32) ಎಂಬುವವರು ಸಾಲಬಾಧೆ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಅ. 9ರಂದು ಕ್ರಿಮಿನಾಶಕ ಸೇವಿಸಿದ್ದ ಅವರನ್ನು ‘ಬಳ್ಳಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರ (ಬಿಎಂಸಿಆರ್‌ಸಿ–ವಿಮ್ಸ್‌)’ಕ್ಕೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿ ಆಗದೆ ಅವರು ಶುಕ್ರವಾರ ಮೃತಪಟ್ಟಿದ್ದಾರೆ. ಈ ಕುರಿತು ಗಾದಿಲಿಂಗ ಅವರ ಪತ್ನಿ ಸಾವಿತ್ರಿ ಬಳ್ಳಾರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.  ಕೃಷಿ ಚಟುವಟಿಕೆಗಾಗಿ ಗಾದಿಲಿಂಗ ಅವರು ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ₹1.20 ಲಕ್ಷ  ಸಾಲ ಮಾಡಿದ್ದರು. ಜತೆಗೆ ಪರಿಚಯಸ್ಥರಿಂದಲೂ ಸಾಲ ಪಡೆದಿದ್ದರು. ಪದೇ ಪದೇ ಸುರಿದ ಮಳೆಯಿಂದಾಗಿ ಬೆಳೆ ನಾಶವಾಗಿದ್ದು ಸಾಲ ತೀರಿಸುವುದು ಹೇಗೆ ಎಂಬ ಆತಂಕದಲ್ಲಿ ಗಾದಿಲಿಂಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪತ್ನಿ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ದೂರು ಆಧರಿಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.