
ಬಳ್ಳಾರಿ: ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಬಳ್ಳಾರಿ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಿರಿಯ ಭೂ ವಿಜ್ಞಾನಿ ಚಂದ್ರಶೇಖರ ಹಿರೇಮನಿ ಎಂಬುವವರನ್ನು ಬಳ್ಳಾರಿ ಜಿಲ್ಲೆಯಿಂದ ಈ ಕೂಡಲೇ ವರ್ಗಾವಣೆ ಮಾಡಬೇಕು ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಆಗ್ರಹಿಸಿದೆ.
ಕೊಪ್ಪಳದಲ್ಲಿ ಇಡೀ ಅಧಿಕಾರಿ ವರ್ಗವನ್ನೇ ವರ್ಗಾವಣೆ ಮಾಡುವಂತೆ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಈ ಮಧ್ಯೆ, ಬಳ್ಳಾರಿಯಲ್ಲಿ ರೈತ ಸಂಘವೇ ಅಧಿಕಾರಿ ವಿರುದ್ಧ ಆರೋಪ ಮಾಡಿ ವರ್ಗಾವಣೆಗೆ ಒತ್ತಾಯಿಸಿದೆ.
ಈ ಕುರಿತ ಮನವಿ ಪತ್ರವನ್ನು ಸಂಘದ ರಾಜ್ಯ ಘಟಕದ ಅಧ್ಯಕ್ಷ ಮಾಧವ ರೆಡ್ಡಿ ಅವರು ಸರ್ಕಾರದ ಕಾರ್ಯದರ್ಶಿ, ಕೇಂದ್ರದ ಉನ್ನತಾಧಿಕಾರ ಸಮಿತಿ, ಮೇಲುಸ್ತವಾರಿ ಸಮಿತಿ ಅಧ್ಯಕ್ಷರು, ಬಳ್ಳಾರಿ ಜಿಲ್ಲಾಧಿಕಾರಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶಕರು, ಉಪ ನಿರ್ದೇಶಕರಿಗೆ ಮಿಂಚಂಚೆ ಮೂಲಕ ರವಾನಿಸಿದ್ದಾರೆ.
ಅಧಿಕಾರಿಯು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಬಳ್ಳಾರಿ ಕಚೇರಿಯ ಒಂದೇ ಕಡೆ 15 ವರ್ಷಗಳಿಂದ ಕೆಲಸ ಮಾಡುತ್ತಿರುವುದು, ರೈತ ವಿರೋಧಿ ನಿಲುವನ್ನು ತಳೆದಿರುವುದನ್ನು ರೈತ ಸಂಘ ತನ್ನ ಪತ್ರದಲ್ಲಿ ಪ್ರಮುಖವಾಗಿ ಪ್ರಸ್ತಾಪಿಸಿದೆ.
ಜತೆಗೆ, ಅಧಿಕಾರಿ ಮೇಲೆ ಲೋಕಾಯುಕ್ತದಲ್ಲಿ ದಾಖಲಾಗಿರುವ ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣ ಉಲ್ಲೇಖಿಸಲಾಗಿದೆ. ಅಧಿಕಾರಿಯು ಅದೇ ಸ್ಥಳದಲ್ಲಿ ಮುಂದುವರಿದರೆ ಅಕ್ರಮ, ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಟ್ಟಂತೆ ಆಗಲಿದೆ ಎಂದು ಸಂಘಟನೆ ಅಭಿಪ್ರಾಯಪಟ್ಟಿದೆ.
ಅಧಿಕಾರಿಯು ಗಣಿ ಇಲಾಖೆಗೆ ಸಂಬಂಧಿಸಿದ ಕಾಯ್ದೆಗಳಲ್ಲಿನ ಲೋಪದೋಷಗಳನ್ನು ಗಣಿ ಕಂಪನಿಗಳಿಗೆ ತಿಳಿಸಿಕೊಡುತ್ತಾ, ಉದ್ದಿಮೆದಾರರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಬಳ್ಳಾರಿಯಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಗ್ರಾವೆಲ್ ಅಕ್ರಮವು ಅಧಿಕಾರಿ ಗಮನಕ್ಕಿದ್ದರೂ ಮೌನವಹಿಸಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ, ರೈತರು ತಮ್ಮ ಹೊಲಗಳಲ್ಲಿನ ಗ್ರಾವೆಲ್ ತೆಗೆದು ರಸ್ತೆಗೆ ಬಳಸಿಕೊಂಡರೆ ಕೆಳ ಹಂತದ ಅಧಿಕಾರಿಗಳ ಮೂಲಕ ಪ್ರಕರಣ ದಾಖಲಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.