ADVERTISEMENT

ಬಳ್ಳಾರಿ | ಜೀನ್ಸ್‌ ಘಟಕಗಳಿಗೆ ಮತ್ತೆ ಸ್ಥಗಿತ ಭೀತಿ

ಕಲುಷಿತ ನೀರು ಸಂಸ್ಕರಣೆಯಲ್ಲಿ ವಿಫಲ| ಕೆಎಸ್‌ಪಿಸಿಬಿಗೆ ವರದಿ

ಆರ್. ಹರಿಶಂಕರ್
Published 29 ಜೂನ್ 2025, 2:30 IST
Last Updated 29 ಜೂನ್ 2025, 2:30 IST
ಬಳ್ಳಾರಿಯ ಜೀನ್ಸ್‌ ಘಟಕವೊಂದರ ಚಿತ್ರ 
ಬಳ್ಳಾರಿಯ ಜೀನ್ಸ್‌ ಘಟಕವೊಂದರ ಚಿತ್ರ    

ಬಳ್ಳಾರಿ: ಈಗಾಗಲೇ ಹಲವು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ, ಸೊರಗುತ್ತಿರುವ ಬಳ್ಳಾರಿಯ ಜೀನ್ಸ್‌ ಡೈಯಿಂಗ್‌ ಉದ್ದಿಮೆಗೆ ಮತ್ತೊಂದು ಬರಸಿಡಿಲು ಬಿದ್ದಿದ್ದು, ಘಟಕಗಳಿಗೆ ಮತ್ತೆ ಮುಚ್ಚುವ ಭೀತಿ ಎದುರಾಗಿದೆ. 

ಕಾರ್ಖಾನೆಗಳ ಕಲುಷಿತ ನೀರನ್ನು ಸಂಸ್ಕರಿಸದೇ ನೇರವಾಗಿ ಜಲಮೂಲಗಳಿಗೆ ಬಿಟ್ಟು, ಪರಿಸರ ಮತ್ತು ಜಲ ಮೂಲಗಳ ಮಾಲಿನ್ಯಕ್ಕೆ ಕಾರಣವಾಗಿರುವುದರಿಂದ ಘಟಕಗಳನ್ನು ಸ್ಥಗಿತಗೊಳಿಸಬೇಕು ಎಂದು ಕರ್ನಾಟಕ ಮಾಲಿನ್ಯ ನಿಯಂತ್ರಣಾ ಮಂಡಳಿಯ (ಕೆಎಸ್‌ಪಿಸಿಬಿ) ಬಳ್ಳಾರಿ ಕಚೇರಿಯು ಕೇಂದ್ರ ಕಚೇರಿಗೆ ವರದಿ ನೀಡಿದೆ. ಕೇಂದ್ರ ಕಚೇರಿಯು ಕೆಲವೇ ದಿನಗಳಲ್ಲಿ ಈ ಸಂಬಂಧ ಆದೇಶ ಹೊರಡಿಸುವ ಸಾಧ್ಯತೆಗಳಿದ್ದು, ಡೈಯಿಂಗ್‌ ಘಟಕಗಳು ಬಾಗಿಲು ಹಾಕಬೇಕಾದ ಪರಿಸ್ಥಿತಿ ಉದ್ಭವಿಸಿದೆ. 

ಕಲುಷಿತ ನೀರು ಸಂಸ್ಕರಣ ಘಟಕಗಳನ್ನು (ಇಟಿಪಿ) ಸ್ಥಾಪಿಸಿಕೊಳ್ಳದಿರುವುದೇ ಇದಕ್ಕೆಲ್ಲ ಮೂಲ ಕಾರಣ. ಕಡೆಗೆ ಎಲ್ಲ ಘಟಕಗಳೂ ಸೇರಿ ಸಾಮಾನ್ಯ (ಒಂದೇ) ಸಂಸ್ಕರಣಾ ಘಟಕವನ್ನಾದರೂ (ಸಿಇಟಿಪಿ)  ಆರಂಭಿಸಬೇಕಾಗಿತ್ತು. ಆದರೆ, ಅದನ್ನೂ ಮಾಡಿಲ್ಲ ಎನ್ನಲಾಗಿದೆ. ಹೀಗಾಗಿ ಕೆಎಸ್‌ಪಿಸಿಬಿಯು ಕೇಂದ್ರ ಕಚೇರಿಗೆ ವರದಿ ಸಲ್ಲಿಸಿದೆ. 

ADVERTISEMENT

‘ಇಟಿಪಿ ಅಥವಾ ಸಿಇಟಿಪಿ ಮಾಡಿಕೊಳ್ಳುವಂತೆ, ಪರಿಸರ ಮಾಲಿನ್ಯ ಮಾಡದಂತೆ ಕೆಎಸ್‌ಪಿಸಿಬಿಯು ಈಗಾಗಲೇ ಜೀನ್ಸ್‌ ಡೈಯಿಂಗ್‌ ಘಟಕಗಳಿಗೆ ಹಲವು ಬಾರಿ ನೋಟಿಸ್‌ಗಳನ್ನೂ ನೀಡಿದೆ. ಘಟಕಗಳ ಮಾಲೀಕರನ್ನು ಬೆಂಗಳೂರಿನ ಕೇಂದ್ರ ಕಚೇರಿಗೇ ಕರೆಸಿಕೊಂಡು ಮುಖತಃ ಸಮಾಲೋಚನೆ ನಡೆಸಲಾಗಿದೆ. ಆದರೂ, ಅವರು ಸಂಸ್ಕರಣಾ ಘಟಕಗಳನ್ನು ಮಾಡಿಕೊಂಡಿಲ್ಲ’ ಎಂದು ಕೆಎಸ್‌ಪಿಸಿಬಿ ಅಧಿಕಾರಿಗಳು ಮಾಹಿತಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಕೆಎಸ್‌ಪಿಸಿಬಿ ಕೇಂದ್ರ ಕಚೇರಿಯಿಂದ ಒಂದು ಬಾರಿ ಸ್ಥಗಿತ ಆದೇಶ ಹೊರಬಿದ್ದರೆ, ಘಟಕಗಳಿಗೆ ವಿದ್ಯುತ್‌ ಸಂಪರ್ಕ ಸ್ಥಗಿತಗೊಳ್ಳಲಿದೆ. ಬಳಿಕ ಇಟಿಪಿ ಮತ್ತು ಸಿಇಟಿಪಿ ಅಳವಡಿಸಿಕೊಂಡು, ಅನುಪಾಲನ ವರದಿ ನೀಡಿದ ಬಳಿಕವೇ ಘಟಕಗಳು ಮರುಚಾಲನೆಗೊಳ್ಳಲು ಅವಕಾಶ ಸಿಗಲಿದೆ ಎಂದು ಗೊತ್ತಾಗಿದೆ.    

ಉಪಲೋಕಾಯುಕ್ತರಿಂದಲೂ ಆಕ್ಷೇಪ: ಜ.16ರಂದು ಬಳ್ಳಾರಿ ಪ್ರವಾಸ ಕೈಗೊಂಡಿದ್ದ ಉಪಲೋಕಾಯುಕ್ತ ಬಿ. ವೀರಪ್ಪ, ಮುಂಡರಗಿ ಅಪೆರಲ್‌ ಪಾರ್ಕ್‌ಗೆ ಭೇಟಿ ನೀಡಿದ್ದರು. ಡೈಯಿಂಗ್‌ ಘಟಕಗಳಿಂದ ಬರುತ್ತಿದ್ದ ಕಲುಷಿತ ನೀರು ಕಂಡು ಆಕ್ರೋಶಗೊಂಡಿದ್ದ ಅವರು, ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಅಧಿಕಾರಿಗಳ ವಿರುದ್ಧ ಆಕ್ರೋಶಗೊಂಡಿದ್ದರು.  

ಈ ಘಟನೆಯಿಂದ ಆತಂಕಗೊಂಡಿದ್ದ ಜೀನ್ಸ್‌ ಡೈಯಿಂಗ್‌ ಉದ್ಯಮಿಗಳು ಸ್ವಯಂ ಪ್ರೇರಿತರಾಗಿ ಘಟಕಗಳನ್ನು ಬಂದ್‌ ಮಾಡಿದ್ದರು. ಆದರೆ, ಘಟಕಗಳನ್ನು ಮುಚ್ಚುವಂತೆ ಉಪ ಲೋಕಾಯುಕ್ತರಾಗಲಿ, ಕೆಐಎಡಿಬಿಯಾಗಲಿ, ಕೆಸ್‌ಪಿಸಿಬಿಯಾಗಲಿ ಆದೇಶಿಸಿರಲಿಲ್ಲ. ಬಳಿಕ ಘಟಕಗಳು ಮತ್ತೆ ಆರಂಭವಾಗಿದ್ದವು. 

ಸಿದ್ದೇಶ್ವರ ಬಾಬು
.

36 ಘಟಕಗಳ ಬಗ್ಗೆ ವರದಿ  ಕೆಲವೇ ದಿನಗಳಲ್ಲಿ ಸ್ಥಗಿತಗೊಳಿಸಲು ಆದೇಶ?  ಸಂಕಷ್ಟದಲ್ಲಿ ಬಳ್ಳಾರಿಯ ಜೀನ್ಸ್‌ ಉದ್ಯಮ, ಉದ್ಯಮಿಗಳು 

ಕಲುಷಿತ ನೀರು ಹೊರಬಿಡದಂತೆ ಇಟಿಪಿ ಅಥವಾ ಸಿಇಟಿಪಿಗಳನ್ನು ಅಳವಡಿಸಿಕೊಳ್ಳುವಂತೆ ಜೀನ್ಸ್‌ ಘಟಕಗಳಿಗೆ ತಿಳಿಸಲಾಗಿತ್ತು. ಅದ್ಯಾವುದೂ ಆಗಿಲ್ಲ. ಹೀಗಾಗಿ ಎಲ್ಲ ಪ್ರಕ್ರಿಯೆ ಮುಗಿಸಿ ಸ್ಥಗಿತಕ್ಕೆ ವರದಿ ನೀಡಲಾಗಿದೆ. 
ಸಿದ್ದೇಶ್ವರ ಬಾಬು ಪರಿಸರ ಅಧಿಕಾರಿ ಕೆಎಸ್‌ಪಿಸಿಬಿ ಬಳ್ಳಾರಿ
ನಿಮಗೆ ಸವಲತ್ತು ಕೊಡುತ್ತೇವೆ ಎಂದೇ ನಮ್ಮನ್ನು ಊರ ಹೊರಗೆ ಕಳುಹಿಸಲಾಯಿತು. ಇಂದು ಯಾವ ಸವಲತ್ತುಗಳೂ ಇಲ್ಲವಾಗಿವೆ. ಸರ್ಕಾರವೇ ನಮಗೆ ಸಿಇಟಿಪಿ ಮಾಡಿಕೊಡಬೇಕು. ಉದ್ಯಮ ಉಳಿಸಬೇಕು. 
ಇಬ್ರಾಹಿಂ ಬಾಬು ಜೀನ್ಸ್‌ ಡೈಯಿಂಗ್‌ ಘಟಕದ ಮಾಲೀಕ

ಉಳಿದಿರುವುದು ಇನ್ನೆರಡೇ! ಬಳ್ಳಾರಿಯ ಮುಂಡ್ರಿಗಿ ಕೈಗಾರಿಕಾ ಪ್ರದೇಶದಲ್ಲಿ ಆರಂಭದಲ್ಲಿ ಒಟ್ಟು 64 ಜೀನ್ಸ್ ಡೈಯಿಂಗ್‌ ಘಟಕಗಳಿಗೆ ಅನುಮತಿ ನೀಡಲಾಗಿತ್ತು. ಇಟಿಪಿಯನ್ನು ಮಾಡಿಕೊಳ್ಳದ ಕಾರಣದಿಂದ ಈಗಾಗಲೇ 16 ಘಟಕಗಳನ್ನು ಮುಚ್ಚಿಸಲಾಗಿದೆ. ಇನ್ನು 10 ಘಟಕಗಳು ತನ್ನಿಂತಾನೆ ಹಲವು ಕಾರಣಗಳಿಂದ ಮುಚ್ಚಿಕೊಂಡು ಹೋಗಿವೆ. ಸದ್ಯ 36 ಘಟಕಗಳಿಗೆ ಹಲವು ಹಂತದ ನೋಟಿಸ್‌ಗಳನ್ನು ನೀಡಲಾಗಿದ್ದು ಸ್ಥಗಿತ ಆದೇಶ ಇನ್ನೇನು ಹೊರಬೀಳುವ ಸಾಧ್ಯತೆಗಳಿವೆ. ಇನ್ನೂ ಎರಡು ಘಟಕಗಳೂ ಇದೇ ಹಾದಿಯಲ್ಲಿವೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.