ADVERTISEMENT

ಸಂಭ್ರಮದಿಂದ ಗಣಪನ ವಿಸರ್ಜನೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2019, 12:06 IST
Last Updated 5 ಸೆಪ್ಟೆಂಬರ್ 2019, 12:06 IST
ಗಣೇಶ ವಿಸರ್ಜನೆ ಪ್ರಯುಕ್ತ ಹೊಸಪೇಟೆಯಲ್ಲಿ ಬುಧವಾರ ರಾತ್ರಿ ನಡೆದ ಮೆರವಣಿಗೆಯಲ್ಲಿ ಅನರ್ಹ ಶಾಸಕ ಆನಂದ್‌ ಸಿಂಗ್‌ ಟ್ರ್ಯಾಕ್ಟರ್‌ ಓಡಿಸಿ ಗಮನ ಸೆಳೆದರು
ಗಣೇಶ ವಿಸರ್ಜನೆ ಪ್ರಯುಕ್ತ ಹೊಸಪೇಟೆಯಲ್ಲಿ ಬುಧವಾರ ರಾತ್ರಿ ನಡೆದ ಮೆರವಣಿಗೆಯಲ್ಲಿ ಅನರ್ಹ ಶಾಸಕ ಆನಂದ್‌ ಸಿಂಗ್‌ ಟ್ರ್ಯಾಕ್ಟರ್‌ ಓಡಿಸಿ ಗಮನ ಸೆಳೆದರು   

ಹೊಸಪೇಟೆ: ಮೂರು ದಿನಗಳ ಗಣೇಶನ ಮೂರ್ತಿಗಳ ವಿಸರ್ಜನೆ ಪ್ರಯುಕ್ತ ಬುಧವಾರ ರಾತ್ರಿ ನಗರದಲ್ಲಿ ಭವ್ಯ ಮೆರವಣಿಗೆ ನಡೆಯಿತು.

ಹೂ, ತಳಿರು ತೋರಣಗಳಿಂದ ಅಲಂಕರಿಸಿದ ವಾಹನದಲ್ಲಿ ಗಣಪನನ್ನು ಪ್ರತಿಷ್ಠಾಪಿಸಿ, ಸಂಗೀತಕ್ಕೆ ಹೆಜ್ಜೆ ಹಾಕುತ್ತ ನಗರದ ಪ್ರಮುಖ ಮಾರ್ಗಗಳಲ್ಲಿ ಗಣೇಶ ಮಂಡಳಿಯವರು ಮೂರ್ತಿಗಳ ಮೆರವಣಿಗೆ ಮಾಡಿದರು. ಎಲ್ಲೆಡೆ ಭಗವಾ ಧ್ವಜಗಳು ರಾರಾಜಿಸಿದವು. ಪ್ರಮುಖ ವೃತ್ತಗಳಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಮೆರವಣಿಗೆಯಲ್ಲಿ ನಗರದ ರಾಣಿಪೇಟೆಯಲ್ಲಿ ಪ್ರತಿಷ್ಠಾಪಿಸಿದ್ದ ಏಕದಂತ ಮಿತ್ರವೃಂದ ಗಣೇಶ ಮಂಡಳಿ ಎಲ್ಲರ ಗಮನ ಸೆಳೆಯಿತು. ಮುಂಬೈ, ಪುಣೆ, ಬೆಳಗಾವಿ, ಕೇರಳದ ಕಲಾ ತಂಡಗಳ ಡೊಳ್ಳು, ತಾಷಾ ರಂಡೋಲ್‌ ಮೈನವಿರೇಳಿಸುವಂತೆ ಮಾಡಿತು. ಗಣಪನ ಪ್ರತಿಷ್ಠಾಪಿಸಿದ್ದ ಟ್ರ್ಯಾಕ್ಟರ್‌ ಅನ್ನು ಅನರ್ಹ ಶಾಸಕ ಆನಂದ್‌ ಸಿಂಗ್‌ ಚಲಾಯಿಸಿ ಗಮನ ಸೆಳೆದರು. ಅವರ ತಂದೆ ಪೃಥ್ವಿರಾಜ್‌ ಸಿಂಗ್‌, ಪತ್ನಿ ಲಕ್ಷ್ಮಿ ಸಿಂಗ್‌ ಸೇರಿದಂತೆ ಕುಟುಂಬದ ಇತರೆ ಸದಸ್ಯರು ಅವರಿಗೆ ಸಾಥ್‌ ನೀಡಿದರು. ಇದಕ್ಕೂ ಮುನ್ನ ರಾಣಿಪೇಟೆಯಲ್ಲಿ ರಂಗೋಲಿ ಬಿಡಿಸುವ ಸ್ಪರ್ಧೆ ನಡೆಯಿತು. ಯುವತಿಯರು, ಮಹಿಳೆಯರು ಪಾಲ್ಗೊಂಡು ರಸ್ತೆಯ ತುಂಬೆಲ್ಲ ಬಗೆಬಗೆಯ ರಂಗೋಲಿ ಬಿಡಿಸಿದರು.

ADVERTISEMENT

ಇನ್ನು ಮನೆಗಳಲ್ಲಿ ಪ್ರತಿಷ್ಠಾಪಿಸಿದ್ದ ಗಣಪನನ್ನು ಜನ ನಗರದ ತುಂಗಭದ್ರಾ ಜಲಾಶಯದ ಕೆಳಮಟ್ಟ ಹಾಗೂ ಮೇಲ್ಮಟ್ಟದ ಕಾಲುವೆಯಲ್ಲಿ ವಿಸರ್ಜಿಸಿದರು. ವಿವಿಧ ಕಡೆಗಳಿಂದ ಜನ ಬಂದು ಮೂರ್ತಿಗಳನ್ನು ಭಕ್ತಿಭಾವದಿಂದ ವಿಸರ್ಜನೆ ಮಾಡಿದರು. ಗಣೇಶ ಉತ್ಸವ ಪ್ರಯುಕ್ತ ನಗರದ ವಡಕರಾಯ ದೇವಸ್ಥಾನದಲ್ಲಿ ಹೋಮ ಹವನ, ದಾಸೋಹ ವ್ಯವಸ್ಥೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.