ADVERTISEMENT

ಗಣಿಬಾಧಿತ ಪ್ರದೇಶಗಳ ಅಭಿವೃದ್ಧಿಗೆ ರೂ.21,813ಕೋಟಿ: ಡಿ.ಕೆ.ಶಿವಕುಮಾರ್‌

ಸಂಭ್ರಮದ 72ನೇ ಸ್ವಾತಂತ್ರ್ಯ ದಿನ ಆಚರಣೆ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2018, 6:41 IST
Last Updated 15 ಆಗಸ್ಟ್ 2018, 6:41 IST
ಬಳ್ಳಾರಿಯಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ. ಆಕರ್ಷಕ ಪಥಸಂಚಲನ. ಪ್ರಜಾವಾಣಿ ಚಿತ್ರ/ ಕೆ. ನರಸಿಂಹ ಮೂರ್ತಿ
ಬಳ್ಳಾರಿಯಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ. ಆಕರ್ಷಕ ಪಥಸಂಚಲನ. ಪ್ರಜಾವಾಣಿ ಚಿತ್ರ/ ಕೆ. ನರಸಿಂಹ ಮೂರ್ತಿ   

ಬಳ್ಳಾರಿ: ಗಣಿಬಾಧಿತ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರಕಾರ ಕಟಿಬದ್ಧವಾಗಿದ್ದು, ಕರ್ನಾಟಕ ಗಣಿಭಾದಿತ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ಆರೋಗ್ಯ,ಶಿಕ್ಷಣ, ಪರಿಸರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ,ಕೃಷಿ,ವಸತಿ ಸೌಕರ್ಯ, ಮೂಲಸೌಕರ್ಯ ಸೇರಿದಂತೆವಿವಿಧ ಕ್ಷೇತ್ರಗಳ ಅಭಿವೃದ್ಧಿಗಾಗಿ ಅಳವಡಿಸಿಕೊಳ್ಳಲಾಗಿದೆ ಎಂದು ಜಲಸಂಪನ್ಮೂಲ,ವೈದ್ಯಕೀಯ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ ಹೇಳಿದರು.

ಜಿಲ್ಲಾಡಳಿತದ ವತಿಯಿಂದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ನಡೆದ 72ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ನೆರವೆರಿಸಿ ಕವಾಯತು ಪಡೆಗಳಿಂದ ಗೌರವ ವಂದನೆ ಸ್ವೀಕರಿಸಿ ನೀಡಿದ ಸ್ವಾತಂತ್ರ್ಯ ಸಂದೇಶದಲ್ಲಿ ಈ ಪ್ರಮುಖ ಅಂಶ ಸೇರಿದಂತೆ ವಿವಿಧ ಅಂಶಗಳನ್ನು ಪ್ರಕಟಿಸಿದರು.

ಗಣಿಭಾದಿತ ಪ್ರದೇಶದ ಸುಮಾರು 40 ಸಾವಿರ ಬಡ ಕುಟುಂಬದವರಿಗೆ ಮನೆಯನ್ನು ಕಲ್ಪಿಸಿ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು. ಯುವಕರಿಗೆ ಉದ್ಯೋಗ ಕಲ್ಪಿಸಲು ಕೌಶಲ್ಯ ತರಬೇತಿಗಳನ್ನು ಕೆಎಂಇಆರ್‍ಸಿ ಯೋಜನೆಯಡಿ ಏರ್ಪಡಿಸಲಾಗುವುದು ಎಂದರು.

ADVERTISEMENT

ಬಳ್ಳಾರಿಯ ವಿಮ್ಸ್ ಆಸ್ಪತ್ರೆಯನ್ನು ಬಲಪಡಿಸಲು ರೂ.200 ಕೋಟಿ ಅನುದಾನವನ್ನು ವಿನಿಯೋಗಿಸಲಾಗುತ್ತಿದೆ. ಬಳ್ಳಾರಿ ಹಾಲು ಉತ್ಪಾದನ ಕೇಂದ್ರಕ್ಕೆ ರೂ.225 ಕೋಟಿ ಅನುದಾನವನ್ನು ಮೀಸಲಿಡಲಾಗಿದೆ. ಸಂಡೂರಿನಲ್ಲಿ ಮೆಡಿಕಲ್ ಕಾಲೇಜ್ ಮತ್ತು ಇಂಡಿಯನ್ ಸ್ಕೂಲ್ ಆಫ್ ಮೈನ್ಸ್‍ಗಳನ್ನು ಪ್ರಾರಂಭಿಸಲಾಗುವುದು ಎಂದು ಹೇಳಿದರು.

ಹಗರಿ ಕೃಷಿ ಕಾಲೇಜು ಉನ್ನತೀಕರಣಕ್ಕೆ ಕ್ರಮ: ಜಿಲ್ಲೆಯಲ್ಲಿರುವ ಹಗರಿ ಕೃಷಿ ಕಾಲೇಜು ಉನ್ನತೀಕರಣಕ್ಕೆ ನಮ್ಮ ಸರಕಾರ ಕಟಿಬದ್ಧವಾಗಿದೆ, ಈ ಕಾಲೇಜು ಉನ್ನತೀಕರಣಕ್ಕೆ ಕ್ರಮಕೈಗೊಳ್ಳಲಾಗುವುದು ಎಂದರು. ಕರ್ನಾಟಕ ಸಕಾಲ ಸೇವೆಗಳ ಯೋಜನೆಯ ಅನುಷ್ಠಾನದಲ್ಲಿ ಬಳ್ಳಾರಿ ಜಿಲ್ಲೆಯು ರಾಜ್ಯಕ್ಕೆ 2 ನೇ ಸ್ಥಾನ ಪಡೆದು ಉತ್ತಮ ಕಾರ್ಯ ನಿರ್ವಹಿಸುತ್ತಿದೆ. ಅಟಲ್ ಜೀ ಜನಸ್ನೇಹಿ ಕೇಂದ್ರದ ಯೋಜನೆಗಳ ಅನುಷ್ಠಾನದಲ್ಲಿ ಬಳ್ಳಾರಿ ಜಿಲ್ಲೆಯು ರಾಜ್ಯಕ್ಕೆ 5 ನೇ ಸ್ಥಾನ ಪಡೆದು ಉತ್ತಮ ಕಾರ್ಯ ನಿರ್ವಹಿಸುತ್ತಿದೆ ಎಂದು ಸಂತಸ ಹಂಚಿಕೊಂಡರು.

ಶಿಕ್ಷಣ ಕ್ಷೇತ್ರದಲ್ಲಿ ಬಳ್ಳಾರಿ ಜಿಲ್ಲೆಯು ಅಗ್ರ ಸ್ಥಾನವನ್ನು ಹೊಂದಿದೆ. ವಿದ್ಯಾರ್ಥಿ ಬೆಳಕು ಯೋಜನೆಯಡಿ ವಾರ್ಷಿಕ ರೂ.4 ಸಾವಿರ ಶಿಷ್ಯವೇತನವನ್ನು ಪ್ರತಿ ವಿದ್ಯಾರ್ಥಿಗೆ ನೀಡಲಾಗುತ್ತಿದೆ. ವಿದ್ಯಾರ್ಥಿ-ಬೆಳಕು ಆ್ಯಪ್ ಬಿಡುಗಡೆ ಮಾಡಲಾಗುತ್ತಿದೆ ಎಂದು ವಿವರಿಸಿದರು. ಉದ್ಯೋಗ ಖಾತ್ರಿ ಯೋಜನೆಯ ಅನುಷ್ಠಾನದಲ್ಲಿ ರಾಜ್ಯದಲ್ಲಿಯೇ ಮೊದಲ ಸ್ಥಾನವನ್ನು ಪಡೆದಿದೆ. ಜಿಲ್ಲೆಯಲ್ಲಿ 11 ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು 6 ತಾಲ್ಲೂಕು ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸಿ ಮೂಲಭೂತ ಸೌಲಭ್ಯಗಳನ್ನು ಓದಗಿಸಲಾಗಿದೆ. ಮೊಬೈಲ್ ಸಂಚಾರಿ ಘಟಕವನ್ನು ಸಹ ಪ್ರಾರಂಭಿಸಲಾಗುತ್ತದೆ ಎಂದು ವಿವರಿಸಿದರು.

ಆಡಳಿತದಲ್ಲಿ ಪಾರದರ್ಶಕತೆ ಕಾಪಾಡಲು ಬಳ್ಳಾರಿ ಡಿಸಿ ಕಚೇರಿಯಲ್ಲಿ ಪೇಪರ್‍ಲೆಸ್ ಆಫೀಸ್:ಕಾಗದ ರಹಿತ ‌ಕಚೇರಿ ಆರಂಭ: ಆಡಳಿತದಲ್ಲಿ ಪಾರದರ್ಶಕತೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪೇಪರ್‍ಲೆಸ್ ಆಫೀಸ್ ಪ್ರಾರಂಭಿಸಲಾಗುತ್ತದೆ. ಆನ್‍ಲೈನ್ ಮೂಲಕ ಎನ್.ಎ ಅರ್ಜಿಗಳನ್ನು ಇತ್ಯರ್ಥಗೊಳಿಸಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ ಸ್ಪಷ್ಟಪಡಿಸಿದರು. ಜಿಲ್ಲೆಯ ಲೋಕೋಪಯೋಗಿ ಇಲಾಖೆ, ಜಿಲ್ಲಾ ಪಂಚಾಯಿತಿ ಇಲಾಖೆ ರಸ್ತೆಗಳು ಮತ್ತು ಗ್ರಾಮೀಣ ರಸ್ತೆಗಳನ್ನು ಉನ್ನತಿಕರಿಸಲಾಗುತ್ತಿದೆ. ಶಾಲಾ ಕಾಲೇಜು, ಐಟಿಐ, ಡೀಪ್ಲೊಮೊ ಕಾಲೇಜುಗಳ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಸಮಗ್ರ ಅಭಿವೃದ್ಧಿ ಮಾಡಲಾಗುವುದು ಎಂದರು.

ಬಳ್ಳಾರಿ ನಗರಕ್ಕೆ ತುಂಗಾಭದ್ರಾ ಜಲಾಶಯದಿಂದ ನೀರು: ಬಳ್ಳಾರಿ ನಗರಕ್ಕೆ ತುಂಗಾಭದ್ರ್ರಾ ಡ್ಯಾಂನಿಂದ ನೇರವಾಗಿ ಕುಡಿಯುವ ನೀರಿನ ವ್ಯವಸ್ಥೆಗೆ ಯೋಜನೆಯನ್ನು ರೂಪಿಸಲಾಗಿದ್ದು, ಅದನ್ನು ಕಾರ್ಯಗತಗೊಳಿಸಲಾಗುವುದು ಎಂದರು.
ಸಂಸದ ಸೈಯದ್‌ ನಾಸಿರ್‌ಹುಸೇನರ ,ಶಾಸಕರಾದ ಜಿ.ಸೋಮಶೇಖರ ರೆಡ್ಡಿ, ಬಿ.ನಾಗೇಂದ್ರ, ಕೆ.ಸಿ.ಕೊಂಡಯ್ಯ,ಅಲ್ಲಂ ವೀರಭದ್ರಪ್ಪ,ಜಿಪಂ ಅಧ್ಯಕ್ಷೆ ಸಿ.ಭಾರತಿ ತಿಮ್ಮಾರೆಡ್ಡಿ, ಉಪಾಧ್ಯಕ್ಷೆ ಪಿ.ದೀನಾ ಮಂಜುನಾಥ, ಮೇಯರ್ ಆರ್.ಸುಶೀಲಾಬಾಯಿ, ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ ರಂಗರಾಜನ್, ಜಿಪಂ ಸಿಇಒ ಡಾ.ಕೆ.ವಿ.ರಾಜೇಂದ್ರ ,ಪ್ರೊಬೆಷನರಿ ಐಎಎಸ್ ಅಧಿಕಾರಿ ಆರ್. ನಂದಿನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.