ADVERTISEMENT

‘ಸಮರ್ಪಕ ಯೂರಿಯಾ ಪೂರೈಕೆಯಲ್ಲಿ ಸರ್ಕಾರ ವಿಫಲ’

ಜೆಡಿಎಸ್‌ನಿಂದ ನಗರದಲ್ಲಿ ಪ್ರತಿಭಟನೆ, ರಸಗೊಬ್ಬರ ನೀಡಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2025, 6:58 IST
Last Updated 5 ಆಗಸ್ಟ್ 2025, 6:58 IST
ಯೂರಿಯಾ ಬಿಕ್ಕಟ್ಟು ವಿರೋಧಿಸಿ ಜೆಡಿಎಸ್‌ ಜಿಲ್ಲಾ ಘಟಕದ ವತಿಯಿಂದ ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಯಿತು. ಜಿಲ್ಲಾ ಘಟಕದ ಮೀನಹಳ್ಳಿ ತಾಯಣ್ಣ,  ರೈತ ಘಟಕದ ಜಿಲ್ಲಾಧ್ಯಕ್ಷ ಬೈಲೂರು ಲಕ್ಷ್ಮಿಕಾಂತ ರೆಡ್ಡಿ ಇದ್ದರು. 
ಯೂರಿಯಾ ಬಿಕ್ಕಟ್ಟು ವಿರೋಧಿಸಿ ಜೆಡಿಎಸ್‌ ಜಿಲ್ಲಾ ಘಟಕದ ವತಿಯಿಂದ ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಯಿತು. ಜಿಲ್ಲಾ ಘಟಕದ ಮೀನಹಳ್ಳಿ ತಾಯಣ್ಣ,  ರೈತ ಘಟಕದ ಜಿಲ್ಲಾಧ್ಯಕ್ಷ ಬೈಲೂರು ಲಕ್ಷ್ಮಿಕಾಂತ ರೆಡ್ಡಿ ಇದ್ದರು.    

ಬಳ್ಳಾರಿ: ‘ರೈತರಿಗೆ ಯೂರಿಯಾ ಪೂರೈಕೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ’ ಎಂದು ಆರೋಪಿಸಿ ಜೆಡಿಎಸ್ ಮುಖಂಡರು ಹಾಗೂ ಪಕ್ಷದ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

‘ಕಾಂಗ್ರೆಸ್ ಸರ್ಕಾರಕ್ಕೆ ರೈತರ ಹಿತ ಕಾಯುವ ಯಾವುದೇ ಕಾಳಜಿಗಳಿಲ್ಲ. ಮುಂಗಾರು ಹಂಗಾಮು ಶುರುಗೊಳ್ಳುವುದು ಗೊತ್ತಿದ್ದರೂ ಯೂರಿಯಾ ರಸಗೊಬ್ಬರ ದಾಸ್ತಾನು ಮಾಡಿಕೊಂಡಿಲ್ಲ. ಯೂರಿಯಾ ಸಮಸ್ಯೆಯನ್ನೇ ನೆಪವಾಗಿಸಿಕೊಂಡ ವ್ಯಾಪಾರಿಗಳು ಕೃತಕ ಅಭಾವ ಸೃಷ್ಟಿಸಿದರೂ ಸರ್ಕಾರ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ವಹಿಸಿಲ್ಲ. ಇದರಿಂದ ರೈತರು ದುಬಾರಿ ಬೆಲೆಗೆ ಯೂರಿಯಾ ಖರೀದಿಸುವಂತಾಗಿದೆ. ಹೆಚ್ಚಿನ ಹಣ ನೀಡಲು ಆರ್ಥಿಕ ಶಕ್ತಿಯಿಲ್ಲದ ರೈತರು ರಸಗೊಬ್ಬರದಿಂದ ವಂಚಿತರಾಗುವಂತಾಯಿತು. ಈ ಎಲ್ಲ ಸಮಸ್ಯೆಗಳಿಗೆ ರಾಜ್ಯ ಸರ್ಕಾರವೇ ಕಾರಣ’ ಎಂದು ಪ್ರತಿಭಟನಾಕಾರರು ದೂರಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಪಕ್ಷದ ಜಿಲ್ಲಾಧ್ಯಕ್ಷ ಮೀನಳ್ಳಿ ತಾಯಣ್ಣ, ‘ರಾಜ್ಯದಲ್ಲಿ ಮಳೆಯಿಂದ ಹಾನಿಗೊಳಾದ ರೈತರಿಗೆ ನೆರವು ನೀಡದ ಕಾಂಗ್ರೆಸ್ ಸರ್ಕಾರ ರೈತರ ಹಿತ ಕಾಯುವ ಯಾವುದೇ ಯೋಜನೆ ಜಾರಿಗೊಳಿಸಿಲ್ಲ. ಬೆಂಬಲ ಬೆಲೆ ನಿಗದಿಗೆ ಕಾಳಜಿ ತೋರಿಸಲಿಲ್ಲ. ಕಳೆದ ಎರಡು ವರ್ಷಗಳಿಂದ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷ, ರೈತರ ಸಂಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ಹೀಗಾಗಿ ಪ್ರತಿವರ್ಷ ರೈತರು ಆತ್ಮಹತ್ಯೆಗೆ ಮೊರೆ ಹೋಗುತ್ತಿದ್ದಾರೆ. ಮುಖ್ಯಮಂತ್ರಿ ಈ ಕೂಡಲೇ ರಾಜ್ಯದ ರೈತರ ಸಮಸ್ಯೆಗಳ ಕುರಿತು ವಿಶೇಷ ಸಭೆ ಕರೆದು ಚರ್ಚಿಸಬೇಕು. ಅನ್ನದಾತರ ಅಳಲು ಕೇಳುವ ಕಾಳಜಿಯನ್ನು ಪ್ರದರ್ಶಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಜೆಡಿಎಸ್‌ನ ರೈತ ಘಟಕದ ಜಿಲ್ಲಾಧ್ಯಕ್ಷ ಬೈಲೂರು ಲಕ್ಷ್ಮಿಕಾಂತ ರೆಡ್ಡಿ ಮಾತನಾಡಿ, ‘ರಾಜ್ಯದ ರೈತ ಸಮುದಾಯ ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಕುರಿತು ಮಾತನಾಡಿದರು. ರಾಜ್ಯ ಸರ್ಕಾರ ಕೂಡಲೇ ರೈತರಿಗೆ ರಸಗೊಬ್ಬರ ಕೊರತೆಯಾಗದಂತೆ ಕ್ರಮ ವಹಿಸಬೇಕು. ಬರುವ ದಿನಗಳಲ್ಲೂ ಸಹ ರೈತರಿಗೆ ರಸಗೊಬ್ಬರ, ಬಿತ್ತನೆಬೀಜಗಳ ಸಮಸ್ಯೆಯಾಗದಂತೆ ಮುಂಜಾಗ್ರತೆ ವಹಿಸಬೇಕು’ ಎಂದು ಆಗ್ರಹಿಸಿದರು.

ಇಲ್ಲಿನ ಕೃಷ್ಣಮಾಚಾರ್ ರಸ್ತೆಯಲ್ಲಿರುವ ಪಕ್ಷದ ಜಿಲ್ಲಾ ಕಚೇರಿಯಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು, ಗಡಗಿಚನ್ನಪ್ಪ ವೃತ್ತದಲ್ಲಿ ಕೆಲ ಹೊತ್ತು ಧರಣಿ ನಡೆಸಿ, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮುಖ್ಯಮಂತ್ರಿಗಳಿಗೆ ಜಿಲ್ಲಾಡಳಿತ ಮೂಲಕ ಮನವಿಪತ್ರ ಕಳಿಸಿಕೊಟ್ಟರು.

ಪಕ್ಷದ ಜಿಲ್ಲಾ ಪ್ರಮುಖರಾದ ಅಶೋಕ್, ಶಿವನಾರಾಯಣ, ನಾಗರಾಜ್, ಬಸಪ್ಪ, ಪುಷ್ಪಾ, ರಾಮಾಂಜನಿ, ಕಿರಣ್ ಕುಮಾರ್, ಭವಾನಿ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳ ಪಕ್ಷದ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.