ADVERTISEMENT

ವಿಜಯನಗರ ಜಿಲ್ಲಾಸ್ಪತ್ರೆಗೆ ₹129 ಕೋಟಿ

ಐದು ಎಕರೆ ಪ್ರದೇಶದಲ್ಲಿ ತಲೆ ಎತ್ತಲಿದೆ ಸುಸಜ್ಜಿತ ಸರ್ಕಾರಿ ಆಸ್ಪತ್ರೆ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 24 ಸೆಪ್ಟೆಂಬರ್ 2022, 8:25 IST
Last Updated 24 ಸೆಪ್ಟೆಂಬರ್ 2022, 8:25 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಹೊಸಪೇಟೆ (ವಿಜಯನಗರ): ನೂತನ ವಿಜಯನಗರ ಜಿಲ್ಲೆಯಲ್ಲಿ ಹೊಸ ಸರ್ಕಾರಿ ಆಸ್ಪತ್ರೆ ನಿರ್ಮಾಣಕ್ಕೆ ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ದೊರಕಿದೆ.

ಈ ಸಂಬಂಧ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ (ಗಣಿ–1) ಸೆ. 21ರಂದು ಆದೇಶ ಹೊರಡಿಸಿದೆ. ಅದರ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ಒಟ್ಟು ಐದು ಎಕರೆ ಪ್ರದೇಶದಲ್ಲಿ 250 ಹಾಸಿಗೆಗಳ ಜಿಲ್ಲಾ ಆಸ್ಪತ್ರೆ ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿದೆ. ಸಿವಿಲ್‌ ಕಾಮಗಾರಿ, ಪೀಠೋಪಕರಣ, ವೈದ್ಯಕೀಯ ಉಪಕರಣ ಸೇರಿದಂತೆ ಇತರೆ ಕೆಲಸಗಳಿಗೆ ಒಟ್ಟು ₹129.89 ಕೋಟಿ ವೆಚ್ಚದಲ್ಲಿ ಕೆಲಸ ಕೈಗೆತ್ತಿಕೊಳ್ಳಲು ಅನುಮೋದನೆ ದೊರೆತಿದೆ. ಜಿಲ್ಲಾ ಖನಿಜ ನಿಧಿ ಬಳಕೆಗೂ ಅನುಮತಿ ನೀಡಲಾಗಿದೆ. ರಾಷ್ಟ್ರೀಯ ಹೆದ್ದಾರಿ 50ರ ಬಳಿಯಿರುವ ನಗರಸಭೆ ಸರ್ವೇ ನಂಬರ್‌ 325/ಪಿ, 325/ಕೆ, 325/ಐ, 325/ಒ ಗೆ ಸೇರಿದ ಐದು ಎಕರೆ ಜಮೀನು ಗುರುತಿಸಲಾಗಿದೆ.

ADVERTISEMENT

ಹೊಸ ಜಿಲ್ಲಾ ಆಸ್ಪತ್ರೆಯಲ್ಲಿ ವಾಹನ ನಿಲುಗಡೆ ಜಾಗ, ಮರಣೋತ್ತರ ಪರೀಕ್ಷೆ ವಿಭಾಗ, ಒಳರೋಗಿ, ಹೊರರೋಗಿ ವಿಭಾಗ, ಹೋಟೆಲ್‌, ಲಾಂಡ್ರಿ, ಸಿಬ್ಬಂದಿಯ ಕ್ವಾಟರ್ಸ್‌ ಸೇರಿದಂತೆ ಇತರೆ ಸೌಕರ್ಯಗಳು ಇರಲಿವೆ. ಹೊಸ ಜಿಲ್ಲಾ ಆಸ್ಪತ್ರೆಗೆ ಅನುಮೋದನೆ ಸಿಕ್ಕಿರುವುದರಿಂದ ಜನರಿಗೆ ಸ್ಥಳೀಯವಾಗಿ ಉತ್ತಮ ಆರೋಗ್ಯ ಸೇವೆ ಲಭಿಸಲಿದೆ. ಸದ್ಯ ಜನ ಆರೋಗ್ಯ ಸೇವೆಗಳಿಗೆ ಹುಬ್ಬಳ್ಳಿ, ಹೈದರಾಬಾದ್‌, ಬೆಂಗಳೂರು, ದಾವಣಗೆರೆ ಸೇರಿದಂತೆ ಇತರೆ ನಗರಗಳಿಗೆ ಹೋಗುತ್ತಾರೆ. ಬರುವ ದಿನಗಳಲ್ಲಿ ಅದು ತಪ್ಪಲಿದೆ.

ಈ ಹಿಂದೆ ನಗರದ ನೂರು ಹಾಸಿಗೆ ಸರ್ಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ನಿರ್ಧರಿಸಲಾಗಿತ್ತು. ವಿಜಯನಗರ ಜಿಲ್ಲೆ ಘೋಷಿಸಿದ ನಂತರ ಆ ಪ್ರಸ್ತಾವ ಕೈಬಿಡಲಾಗಿದ್ದು, ಹೊಸದಾಗಿ ಜಿಲ್ಲಾಸ್ಪತ್ರೆ ನಿರ್ಮಿಸಲು ತೀರ್ಮಾನಿಸಿ ಜಿಲ್ಲಾಡಳಿತದಿಂದ ಪ್ರಸ್ತಾವ ಸಲ್ಲಿಸಲಾಗಿತ್ತು. ‘ನಗರದಲ್ಲಿ ಸುಸಜ್ಜಿತವಾದ ಸರ್ಕಾರಿ ಆಸ್ಪತ್ರೆಯ ಅವಶ್ಯಕತೆಯಿತ್ತು. ಸರ್ಕಾರ ಅದನ್ನು ಮನಗಂಡು ಅನುಮೋದನೆ ನೀಡಿರುವುದು ಖುಷಿ ತಂದಿದೆ’ ಎಂದು ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದ್ದಾರೆ.

ರೈಲ್ವೆ ಮೇಲ್ಸೇತುವೆಗೂ ಒಪ್ಪಿಗೆ:

ಹೊಸಪೇಟೆ–ಕಾರಿಗನೂರು ನಡುವೆ ಇರುವ ರೈಲ್ವೆ ಲೆವೆಲ್‌ ಕ್ರಾಸ್‌ ಗೇಟ್‌ ಸಂಖ್ಯೆ 85ರಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೂ ರಾಜ್ಯ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ.

ಈ ಸಂಬಂಧ ಮೂಲಸೌಕರ್ಯ ಅಭಿವೃದ್ಧಿ, ಒಳನಾಡು ಮತ್ತು ಬಂದರು ಸಾರಿಗೆ ಇಲಾಖೆ ಗುರುವಾರ (ಸೆ. 22) ಆದೇಶ ಹೊರಡಿಸಿದೆ. ನೈರುತ್ಯ ರೈಲ್ವೆ ಇಲಾಖೆಯ ಕೋರಿಕೆ ಮೇರೆಗೆ ರಾಜ್ಯ ಸರ್ಕಾರದ ಅನುದಾನ ಬಿಡುಗಡೆಗೂ ಒಪ್ಪಿಗೆ ಸೂಚಿಸಲಾಗಿದೆ. ಈ ಯೋಜನೆಗೆ ಅಂದಾಜು ₹26.21 ಕೋಟಿ ವೆಚ್ಚವಾಗಲಿದ್ದು, ರಾಜ್ಯ ಸರ್ಕಾರ ಮತ್ತು ರೈಲ್ವೆ ಸಮಾನವಾಗಿ ಅರ್ಧ ಪಾಲು ಭರಿಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.