ADVERTISEMENT

‘ಯುಜಿಸಿ ನಿಯಮದಂತೆ ವೇತನ ನೀಡಿ’

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2019, 14:49 IST
Last Updated 6 ಫೆಬ್ರುವರಿ 2019, 14:49 IST

ಬಳ್ಳಾರಿ: ‘ಯುಜಿಸಿ ನಿಯಮದಂತೆ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಅತಿಥಿ ಉಪನ್ಯಾಸಕರಿಗೆ ವೇತನ ನಿಗದಿಗೊಳಿಸಬೇಕು’ ಎಂದು ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಜಿಲ್ಲಾ ಸಮನ್ವಯ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಟಿ.ದುರುಗಪ್ಪ ಒತ್ತಾಯಿಸಿದರು.

‘ರಾಜ್ಯ ಸರ್ಕಾರ ಯುಜಿಸಿ ನಿಯಮದಂತೆ ವೇತನ ನಿಗದಿ ಮಾಡಿ ಅತಿಥಿ ಉಪನ್ಯಾಸಕರ ಹಿತಿ ಕಾಪಾಡಬೇಕು. ಈಗಾಗಲೇ ಪಕ್ಕದ ತೆಲಂಗಾಣ, ಆಂಧ್ರಪ್ರದೇಶ ಹಾಗೂ ಹರಿಯಾಣ, ದೆಹಲಿ ರಾಜ್ಯಗಳಲ್ಲಿ ಅದರಂತೆ ಕನಿಷ್ಠ ವೇತನ ನೀಡುತ್ತಿದ್ದು, ನಮ್ಮ ರಾಜ್ಯದಲ್ಲಿಯೂ ನಿಯಮ ಜಾರಿಗೊಳಿಸಬೇಕು’ ಎಂದು ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ರಾಜ್ಯದ412 ಸರ್ಕಾರಿ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ14 ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರ ಜೀವನ ಅಭದ್ರತ ಸ್ಥಿತಿಯಲ್ಲಿದೆ. ಈಗಾಗಲೇ ಹಲವು ಬಾರಿ ವೇತನ ಹೆಚ್ಚಳ ಮತ್ತು ಕಾಯಂ ಮಾಡುವ ಬಗ್ಗೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರೂ ಈವರೆಗೆ ಯಾವುದೇ ಸೇವಾ ಭದ್ರತೆ ನೀಡಿಲ್ಲ. ಹಲವು ಸರ್ಕಾರಗಳು ಬಂದು ಆಶ್ವಾಸನೆ ನೀಡುತ್ತಾ ಕಾಲಹರಣ ಮಾಡಿ ಹೋದರು. ಇದೀಗ ಬಂದ ಸಮ್ಮಿಶ್ರ ಸರ್ಕಾರವೂ ಕೂಡ ಬೇಡಿಕೆಗೆ ಸ್ಪಂದಿಸುತ್ತಿಲ್ಲ’ ಎಂದರು.

ADVERTISEMENT

7ನೇ ವೇತನ ಆಯೋಗದ ಶಿಫಾರಸ್ಸಿನ ಆಧಾರದ ಮೇಲೆ ಗೌರವಧನ ನೀಡಬೇಕೆಂದು ಯುಜಿಸಿ ನಡೆಸಿದ 537ನೇ ಸಭೆಯಲ್ಲಿ ನಿರ್ಧಾರ ಕೈಗೊಂಡಿದೆ. ಪದವಿ, ಸ್ನಾತಕೋತ್ತರ ಪದವಿ ಕೋಸ್೯ಗಳ ಬೋಧನೆ ಮಾಡುತ್ತಿರುವ ಅತಿಥಿ ಉಪನ್ಯಾಸಕರ ಗೌರವ ಧನ ಹೆಚ್ಚಳ ಮಾಡುವಂತೆ ಕೇಂದ್ರ ಸರ್ಕಾರ ಎಲ್ಲ ರಾಜ್ಯದ ಕುಲಪತಿಗಳಿಗೆ ಸೂಚನೆ ನೀಡಿದೆ.

‘ಆದರೆ ರಾಜ್ಯ ಸರ್ಕಾರ ಅತಿಥಿ ಉಪನ್ಯಾಸಕರಿಗೆ ಸಕಾಲಕ್ಕೆ ವೇತನ ನೀಡುತ್ತಿಲ್ಲ. ಈ ಕುರಿತುಮುಖ್ಯಮಂತ್ರಿಕುಮಾರಸ್ವಾಮಿ ಗಮನಹರಿಸಿ ಫೆ.8ರಂದು ಬಜೆಟ್‌ನಲ್ಲಿ ಅತಿಥಿ ಉಪನ್ಯಾಸಕರಿಗೆ ಪ್ರತಿ ಒಂದು ತರಗತಿಗೆ ₹1,500 ನಿಗದಿಪಡಿಸಲು ಮನವಿ ಸಲ್ಲಿಸುತ್ತೇವೆ. ಬೇಡಿಕೆ ಈಡೇರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಲಾಗುವುದು’ ಎಂದರು.

ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಬಸಪ್ಪ, ಹನುಮೇಶ, ವಿಶ್ವನಾಥ, ಸಿದ್ದೇಶ್, ಮನೋಹರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.