ADVERTISEMENT

‘ಅಜ್ಞಾನದಿಂದ ಸುಜ್ಞಾನದ ಕಡೆಗೆ ಕರೆದೊಯ್ಯುವವ ಗುರು’

​ಪ್ರಜಾವಾಣಿ ವಾರ್ತೆ
Published 17 ಜುಲೈ 2019, 20:09 IST
Last Updated 17 ಜುಲೈ 2019, 20:09 IST
ಗಂಗಾಮತ ಸಮಾಜದಿಂದ ಹೊಸಪೇಟೆಯಲ್ಲಿ ಬುಧವಾರ ವೇದವ್ಯಾಸರ ಜನ್ಮದಿನ ಹಾಗೂ ಗುರು ಪೂರ್ಣಿಮೆ ಆಚರಿಸಲಾಯಿತು
ಗಂಗಾಮತ ಸಮಾಜದಿಂದ ಹೊಸಪೇಟೆಯಲ್ಲಿ ಬುಧವಾರ ವೇದವ್ಯಾಸರ ಜನ್ಮದಿನ ಹಾಗೂ ಗುರು ಪೂರ್ಣಿಮೆ ಆಚರಿಸಲಾಯಿತು   

ಹೊಸಪೇಟೆ: ಗುರು ಪೂರ್ಣಿಮೆ ಪ್ರಯುಕ್ತ ವೇದವ್ಯಾಸ ಮಹರ್ಷಿಗಳ ಪೂಜೆ ನಗರದ ಗಂಗಾಪರಮೇಶ್ವರ ಸಮುದಾಯ ಭವನದಲ್ಲಿ ಬುಧವಾರ ನಡೆಯಿತು.

ಗಂಗಾಮತ ಸಮಾಜದ ಮುಖಂಡ ವೈ. ಯಮುನೇಶ್‌ ಮಾತನಾಡಿ, ‘ಮಹಾಭಾರತ ಗ್ರಂಥ ರಚಿಸಿದ ವೇದವ್ಯಾಸರು ಆಷಾಢ ಮಾಸದ ಪೂರ್ಣಿಮೆ ದಿನದಂದೇ ಜನಿಸಿದರು ಎಂಬ ನಂಬಿಕೆ ಶತಮಾನಗಳಿಂದ ರೂಡಿಯಲ್ಲಿದೆ. ಆ ದಿನವೇ ಗುರು ಪೂರ್ಣಿಮೆ ಆಚರಿಸಲಾಗುತ್ತಿದೆ. ಅದನ್ನು ಗುರು ಶಿಷ್ಯರ ಪವಿತ್ರ ಸಂಬಂಧದ ದಿನವೆಂದೇ ಪರಿಗಣಿಸಲಾಗಿದೆ. ವೇದ ಎಂದರೆ ಸತ್ಯ ಹಾಗೂ ವ್ಯಾಸವೆಂದರೆ ವಿಸ್ತಾರವಾದುದು. ಸತ್ಯಧರ್ಮದ ವಿಸ್ತಾರವೇ ವೇದವ್ಯಾಸ ಎಂದರ್ಥ’ ಎಂದು ಹೇಳಿದರು.

‘ಗುರುಗಳನ್ನು ಸ್ಮರಿಸುವುದು, ಅನುಸರಿಸುವುದು ಎಲ್ಲ ಸಮಾಜಗಳ ಸಾಂಸ್ಕೃತಿಕ, ಆಧ್ಯಾತ್ಮಿಕ ವಿಕಾಸಕ್ಕೆ ಪ್ರೇರಣೆಯಾಗಿದೆ. ಆ ಕಾಲದಲ್ಲಿ ಪ್ರಚಲಿತವಾಗಿದ್ದ ವೇದಗಳನ್ನು ವ್ಯವಸ್ಥಿತವಾಗಿ ನಾಲ್ಕು ಭಾಗಗಳಾಗಿ ಸಂಗ್ರಹಿಸಿ ಸಂಪಾದಿಸಿದ ವ್ಯಾಸರು ಚರ್ತುಮುಖ ಬ್ರಹ್ಮರೆನಿಸಿಕೊಂಡರು. ಗುರು ಎಂದರೆ ಕೇವಲ ವ್ಯಕ್ತಿಯಲ್ಲ. ಅಂಧಾಕಾರದಿಂದ ಬೆಳಕಿನತ್ತ, ಅಜ್ಞಾನದಿಂದ ಸುಜ್ಞಾನದ ಕಡೆಗೆ ಕರೆದ್ಯೊಯುವ ಚೇತನ ಶಕ್ತಿಯೇ ಗುರುವಾಗಿದೆ’ ಎಂದು ವಿವರಿಸಿದರು.

ADVERTISEMENT

‘ತಳಸಮುದಾಯದಲ್ಲಿ ಜನಿಸಿದ ವೇದವ್ಯಾಸರು ತಮ್ಮ ಚಿಂತನೆ ವೇದ ಪುರಾಣಗಳ ಮೂಲಕ ಶತಮಾನಗಳಿಂದ ಭಾರತೀಯ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಬದುಕಿನ ಮೇಲೆ ಅಪಾರ ಪ್ರಭಾವ ಬೀರಿದ್ದು, ಇಂದಿಗೂ ಅವರ ಚಿಂತನೆಗಳು ಅನುಷ್ಠಾನಯೋಗ್ಯವಾಗಿವೆ. ನಮ್ಮ ಪ್ರಾಚೀನ ಪರಂಪರೆಯ ಜನಪರ ಮೌಲ್ಯಗಳನ್ನು ಒಪ್ಪಿಕೊಳ್ಳುತ್ತ ಹರಿದು ಹಂಚಿ ಹೋಗಿರುವ ಹಿಂದುಳಿದ ಜಾತಿಗಳು, ಒಂದೇ ವೇದಿಕೆಯಡಿ ಒಗ್ಗಟ್ಟಾಗಿ ಆರ್ಥಿಕ, ಸಾಮಾಜಿಕ ಸಮಾನತೆಗಾಗಿ ಹೋರಾಡುವ ಅಗತ್ಯವಿದೆ’ ಎಂದು ಪ್ರತಿಪಾದಿಸಿದರು.

ಸಮಾಜದ ಅಧ್ಯಕ್ಷ ರಾಮನಮಲಿ ಹುಲುಗಪ್ಪ, ಮುಖಂಡರಾದ ಎಂ.ಸಣ್ಣಕ್ಕೆಪ್ಪ, ವಿರೂಪಾಕ್ಷ, ಮಡ್ಡಿ ಹನುಮಂತಪ್ಪ, ಬಿ.ಸುದರ್ಶನ್, ಅಭಿಮನ್ಯು, ಎಸ್.ಗಾಳೆಪ್ಪ, ಮೇಘನಾಥ, ಕಂಪ್ಲಿ ಹನುಮಂತಪ್ಪ, ಸುಭಾಶ್‍ಚಂದ್ರ, ಬಿ.ನಾಗರಾಜ, ಎಸ್.ವೆಂಕಪ್ಪ, ಎಸ್.ನಾಗರಾಜ, ಕೃಷ್ಣರಾಜೇಂದ್ರ, ಉಮಾಪತಿ, ಗಂಗಾಧರ, ಮಲ್ಲೇಶ್, ರಾಜು, ಉಮೇಶ, ಅಂಜಿನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.