ADVERTISEMENT

ಹಗರಿಬೊಮ್ಮನಹಳ್ಳಿ ಶಾಸಕರಿಗೆ ಈಗೇಕೆ ನೆನಪಾಯ್ತು ನೀರು?

ಒಂಬತ್ತು ವರ್ಷಗಳಿಂದ ಶಾಸಕರಾಗಿದ್ದರೂ ಒಂದು ಸಲವೂ ಮಾತನಾಡದ ಭೀಮ ನಾಯ್ಕ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 13 ಮೇ 2022, 19:30 IST
Last Updated 13 ಮೇ 2022, 19:30 IST
ಹೊಸಪೇಟೆ ತಾಲ್ಲೂಕಿನ ತುಂಗಭದ್ರಾ ಜಲಾಶಯದ ಹಿನ್ನೀರಿನ ಹಂಪಿನಕಟ್ಟೆ ಸಮೀಪ ಕೈಗೆತ್ತಿಕೊಂಡಿರುವ ಪಾವಗಡ ಕುಡಿಯುವ ನೀರಿನ ಯೋಜನೆಯ ಕಾಮಗಾರಿ
ಹೊಸಪೇಟೆ ತಾಲ್ಲೂಕಿನ ತುಂಗಭದ್ರಾ ಜಲಾಶಯದ ಹಿನ್ನೀರಿನ ಹಂಪಿನಕಟ್ಟೆ ಸಮೀಪ ಕೈಗೆತ್ತಿಕೊಂಡಿರುವ ಪಾವಗಡ ಕುಡಿಯುವ ನೀರಿನ ಯೋಜನೆಯ ಕಾಮಗಾರಿ   

ಹೊಸಪೇಟೆ (ವಿಜಯನಗರ): ಪಾವಗಡ ಕುಡಿಯುವ ನೀರಿನ ಯೋಜನೆಯಡಿ ತಾಲ್ಲೂಕಿನ ಮರಿಯಮ್ಮನಹಳ್ಳಿ ಪಟ್ಟಣಕ್ಕೆ ನೀರು ಒದಗಿಸಬೇಕು. ಇಲ್ಲವಾದರೆ ಯೋಜನೆ ಸ್ಥಗಿತಗೊಳಿಸಿ ಹೋರಾಟ ನಡೆಸಲಾಗುವುದು ಎಂದು ಶಾಸಕ ಎಲ್.ಬಿ.ಪಿ. ಭೀಮ ನಾಯ್ಕ ಹೇಳಿದ್ದಾರೆ. ಜಿಲ್ಲಾಡಳಿತಕ್ಕೆ ಗಡುವು ಕೂಡ ನೀಡಿದ್ದಾರೆ. ಅನೇಕ ವರ್ಷಗಳಿಂದ ಮೌನವಾಗಿದ್ದ ಶಾಸಕರಿಗೆ ಈಗೇಕೆ ಏಕಾಏಕಿ ಕುಡಿಯುವ ನೀರಿನ ಸಮಸ್ಯೆ ನೆನಪಾಯ್ತು?

-ಇಂತಹದ್ದೊಂದು ಪ್ರಶ್ನೆ ಈಗ ಮರಿಯಮ್ಮನಹಳ್ಳಿ ಹೋಬಳಿಯ ಜನತೆಯನ್ನು ಕಾಡುತ್ತಿದೆ.

ತುಂಗಭದ್ರಾ ಜಲಾಶಯದ ಹಿನ್ನೀರಿಗೆ ಹೊಂದಿಕೊಂಡಂತೆ ಮರಿಯಮ್ಮನಹಳ್ಳಿ ಇದ್ದರೂ ಕುಡಿಯುವ ನೀರಿಗೆ ತೀವ್ರ ಸಮಸ್ಯೆ ಇದೆ. ದೇವಲಾಪುರ, ಡಣಾಯಕನಕೆರೆ, ಗರಗ–ನಾಗಲಾಪುರ, ಚಿಲಕನಹಟ್ಟಿ ಸೇರಿದಂತೆ ಇತರೆ ಗ್ರಾಮಗಳಲ್ಲೂ ಇಂತಹುದೇ ಸಮಸ್ಯೆ ಇದೆ. ಈ ಕುರಿತು ಶಾಸಕ ಭೀಮ ನಾಯ್ಕ ಒಮ್ಮೆಯೂ ಚಕಾರ ಎತ್ತಿರಲಿಲ್ಲ. ಈಗ ಇದ್ದಕ್ಕಿದ್ದಂತೆ ಅದರ ಬಗ್ಗೆ ಹೆಚ್ಚಿನ ಕಾಳಜಿ ತೋರಿಸಿ, ಹೋರಾಟದ ಮಾತುಗಳನ್ನು ಆಡಿದ್ದಾರೆ.

ADVERTISEMENT

ಹಗರಿಬೊಮ್ಮನಹಳ್ಳಿ ವಿಧಾನಸಭೆ ಕ್ಷೇತ್ರದಿಂದ ಭೀಮ ನಾಯ್ಕ ಎರಡನೇ ಸಲ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಈ ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರವಿತ್ತು. ಆ ಐದು ವರ್ಷಗಳಲ್ಲಿ ಮರಿಯಮ್ಮನಹಳ್ಳಿ ಹಾಗೂ ಸುತ್ತಲಿನ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆ ಜಾರಿಗೆ ಅವರು ಶ್ರಮಿಸಬೇಕಿತ್ತು. ಆದರೆ, ಆ ಕೆಲಸ ಮಾಡಿರಲಿಲ್ಲ.

ಇನ್ನೊಂದು ವರ್ಷ ಕಳೆದರೆ ಅವರ ಎರಡನೇ ಅವಧಿ ಪೂರ್ಣಗೊಳ್ಳುತ್ತದೆ. ಈ ಸಂದರ್ಭದಲ್ಲಿ ನೀರಿನ ವಿಷಯ ಮುಂದಿಟ್ಟುಕೊಂಡು ಹೋರಾಟಕ್ಕಿಳಿದಿರುವುದು ಅವರನ್ನು ಅನುಮಾನದಿಂದ ನೋಡುವಂತೆ ಮಾಡಿದೆ. ವಿಧಾನಸಭೆ ಚುನಾವಣೆಗೆ ಇನ್ನೊಂದೇ ವರ್ಷ ಉಳಿದಿದ್ದು, ಇದರಲ್ಲಿ ರಾಜಕೀಯ ಲೆಕ್ಕಾಚಾರ ಅಡಗಿದೆ ಎಂಬ ಆರೋಪಗಳು ಕೇಳಿ ಬಂದಿವೆ.

ನೀರಿನ ಸಮಸ್ಯೆ ಬಗೆಹರಿಸಬೇಕೆಂದು ಸ್ಥಳೀಯರು ಅನೇಕ ವರ್ಷಗಳಿಂದ ಬೇಡಿಕೆ ಸಲ್ಲಿಸುತ್ತಿದ್ದಾರೆ. ಕೆಲ ಸಂಘಟನೆಗಳವರು ನೀರಿನ ಸಮಸ್ಯೆ ಇರುವ ಗ್ರಾಮಗಳಲ್ಲಿ ಓಡಾಡಿ, ಅಲ್ಲಿನ ಜನರನ್ನು ಸಂಘಟಿಸಿ ಹೋರಾಟಕ್ಕೆ ಅಣಿಯಾಗುತ್ತಿದ್ದರು. ಈ ವಿಷಯ ಗೊತ್ತಾಗಿಯೇ ಭೀಮ ನಾಯ್ಕ ಈ ವಿಚಾರವನ್ನು ಕೈಗೆತ್ತಿಕೊಂಡಿದ್ದಾರೆ. ಇಡೀ ಹೋರಾಟ ತನ್ನ ನೇತೃತ್ವದಲ್ಲಿ ನಡೆದರೆ ಬರಲಿರುವ ಚುನಾವಣೆಯಲ್ಲಿ ದೊಡ್ಡ ಲಾಭವಾಗಬಹುದು ಎಂಬ ದೊಡ್ಡ ಲೆಕ್ಕಾಚಾರ ಇದರ ಹಿಂದಿದೆ ಎಂಬ ಮಾತು ಕೇಳಿಬಂದಿದೆ.

‘ಶಾಸಕರು ನೀರಿಗಾಗಿ ಹೋರಾಟ ಮಾಡುವುದಕ್ಕೆ ಸಮಸ್ಯೆ ಇಲ್ಲ. ಆದರೆ, ಒಂಬತ್ತು ವರ್ಷಗಳಿಂದ ಅವರೇ ಶಾಸಕರಾಗಿದ್ದಾರೆ. ಹಿಂದಿನ ಅವಧಿಯಲ್ಲಿ ರಾಜ್ಯದಲ್ಲೇ ಅವರದ್ದೇ ಸರ್ಕಾರ ಇತ್ತು. ಆದರೂ ಗಮನಹರಿಸಿರಲಿಲ್ಲ. ಈಗ ಚುನಾವಣೆ ಹತ್ತಿರ ಬಂದಿದ್ದು, ಸಕ್ರಿಯರಾಗಿದ್ದಾರೆ’ ಎಂದು ಅಖಂಡ ರಕ್ಷಣಾ ಸೇವಾ ದಳದ ಕಾರ್ಯದರ್ಶಿ ವಿ. ವಿಜಯಕುಮಾರ ತಿಳಿಸಿದ್ದಾರೆ.

‘ಪಾವಗಡ ಕುಡಿಯುವ ನೀರಿನ ಯೋಜನೆ ಆರಂಭಗೊಂಡು ಎರಡು ವರ್ಷ ಕಳೆದಿದೆ. ಹೆಚ್ಚಿನ ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿದೆ. ಈಗ ಶಾಸಕರು ವೀರಾವೇಷದ ಮಾತುಗಳನ್ನು ಆಡುವುದರಲ್ಲಿ ಪ್ರಯೋಜನವಿಲ್ಲ. ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಹೀಗೆ ಮಾಡುತ್ತಿದ್ದಾರೆ ಎನ್ನುವುದು ಎಂತಹವರಿಗೂ ಗೊತ್ತಾಗುತ್ತದೆ’ ಎಂದು ಹೆಸರು ಹೇಳಲಿಚ್ಛಿಸದ ಮರಿಯಮ್ಮನಹಳ್ಳಿಯ ನಿವೃತ್ತ ಶಿಕ್ಷಕರೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಪರಿಶೀಲನೆ ನಂತರ ಸ್ಪಷ್ಟತೆ

ಪಾವಗಡ ಕುಡಿಯುವ ನೀರಿನ ಯೋಜನೆಯಡಿ ಮರಿಯಮ್ಮನಹಳ್ಳಿಗೆ ನೀರು ಪೂರೈಸಬೇಕೆಂಬ ಬೇಡಿಕೆಯ ಸಾಧ್ಯತೆಗಳೆಷ್ಟಿದೆ ಎಂಬುದು ತಾಂತ್ರಿಕವಾಗಿ ಪರಿಶೀಲಿಸಿದ ನಂತರವಷ್ಟೇ ಸ್ಪಷ್ಟತೆ ಸಿಗಲಿದೆ. ರಾಜ್ಯ ಸರ್ಕಾರದ ಅತಿ ದೊಡ್ಡ ಯೋಜನೆ ಇದಾಗಿದೆ. ಈ ಬಗ್ಗೆ ಯೋಜನೆಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿದ ನಂತರ ಮುಂದಿನ ಹೆಜ್ಜೆ ಇಡಲು ಜಿಲ್ಲಾಡಳಿತ ಮುಂದಾಗಿದೆ. ಒಂದುವೇಳೆ ಈ ಯೋಜನೆಯಡಿ ನೀರು ಪೂರೈಸಲು ಸಾಧ್ಯವಾಗದಿದ್ದರೆ ಪರ್ಯಾಯ ಮಾರ್ಗದ ಮೂಲಕ ಸುಮಾರು 30,000 ಜನಸಂಖ್ಯೆಯಿರುವ ಮರಿಯಮ್ಮನಹಳ್ಳಿಯ ಕುಡಿವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಜಿಲ್ಲಾಡಳಿತ ಗಂಭೀರವಾಗಿ ಯೋಚಿಸುತ್ತಿದೆ ಎಂದು ಗೊತ್ತಾಗಿದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.