ADVERTISEMENT

ತೆಕ್ಕಲಕೋಟೆ| ಬೆಳೆ ಸಮೀಕ್ಷೆ: ಆಕ್ಷೇಪಣೆ ಸಲ್ಲಿಸಿದ ರೈತರ ಹೊಲಗಳಿಗೆ ಅಧಿಕಾರಿ ಭೇಟಿ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2025, 5:59 IST
Last Updated 13 ಡಿಸೆಂಬರ್ 2025, 5:59 IST
ತೆಕ್ಕಲಕೋಟೆ ಸಮೀಪದ ಹಳೇಕೋಟೆ ಗ್ರಾಮದ ರೈತರ ಹೊಲಗಳಿಗೆ ಸಿರುಗುಪ್ಪ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕ ಮಂಜುನಾಥರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು
ತೆಕ್ಕಲಕೋಟೆ ಸಮೀಪದ ಹಳೇಕೋಟೆ ಗ್ರಾಮದ ರೈತರ ಹೊಲಗಳಿಗೆ ಸಿರುಗುಪ್ಪ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕ ಮಂಜುನಾಥರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು   

ತೆಕ್ಕಲಕೋಟೆ : ಬೆಳೆ ಸಮೀಕ್ಷೆಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಅತಿ ಹೆಚ್ಚು ಆಕ್ಷೇಪಣೆ ಸಲ್ಲಿಸಿದ ಹಳೇಕೋಟೆ ಗ್ರಾಮದ ರೈತರ ಹೊಲಗಳಿಗೆ ಸಿರುಗುಪ್ಪ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಮಂಜುನಾಥರೆಡ್ಡಿ ಗುರುವಾರ ಸಂಜೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಂದಾಯ ಇಲಾಖೆಯ ಅಧಿಕಾರಿಗಳು ಬೆಳೆ ಸಮೀಕ್ಷೆಯ ಸಂದರ್ಭದಲ್ಲಿ ಏನಾದರೂ ತಪ್ಪು ಮಾಹಿತಿ ದಾಖಲಿಸಿದ್ದರೆ, ರೈತರು ಬೆಳೆ ದರ್ಶಕ್ ಮೊಬೈಲ್ ಆ್ಯಪ್ ಮೂಲಕ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಇದರಿಂದಾಗಿ ಹಳೇಕೋಟೆ ಗ್ರಾಮದ 51 ರೈತರು ಆಕ್ಷೇಪಣೆ ಸಲ್ಲಿಸಿದ್ದರು ಎಂದು ಅವರು ಹೇಳಿದರು.

‘ಆಕ್ಷೇಪಣೆ ಸಲ್ಲಿಸಿದ್ದ ರೈತರ ಹೊಲಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗಿದ್ದು, 31ರೈತರು ತಡವಾಗಿ ಬಿತ್ತನೆ ಮಾಡಿದ ಬೆಳೆಯನ್ನು ಮುಂಗಾರಿಗೆ ಪರಿಗಣಿಸಲು ಹಾಗೂ 20 ರೈತರು ತಾವು ಬೆಳೆಯದ ಬೆಳೆಗೆ ಪರ್ಯಾಯ ಬೆಳೆ ನಮೂದಿಸಿ (ಮೆಕ್ಕೆಜೋಳ, ಜೋಳ, ಹತ್ತಿ ಬೆಳೆ) ತಪ್ಪು ಮಾಹಿತಿ ನೀಡಿದ್ದರು’ ಎಂದು ತಿಳಿಸಿದರು.

ADVERTISEMENT

ತೆಕ್ಕಲಕೋಟೆ ಹೋಬಳಿಯಲ್ಲಿ 40 ಸಮೀಕ್ಷೆಗಾರರು 38,061 ಬೆಳೆ ತಾಕು ಹಾಗೂ ಕರೂರು ಹೋಬಳಿಯಲ್ಲಿ 38 ಸಮೀಕ್ಷೆಗಾರರು 38,335 ಬೆಳೆ ತಾಕುಗಳನ್ನು ಗುರುತಿಸಿದ್ದರು. ಅದೇ ರೀತಿ ಸಿರುಗುಪ್ಪ ಹೋಬಳಿಯಲ್ಲಿ 36 ಸಮೀಕ್ಷೆಗಾರರು 27,944 ಬೆಳೆ ತಾಕುಗಳನ್ನು ಹಾಗೂ ಹಚ್ಚೊಳ್ಳಿ ಹೋಬಳಿಯಲ್ಲಿ 27 ಸಮೀಕ್ಷೆಗಾರರು 23,210 ಬೆಳೆ ತಾಕುಗಳನ್ನು ಗುರುತಿಸಿದ್ದರು. ಒಟ್ಟಾರೆ ಸಿರುಗುಪ್ಪ ತಾಲ್ಲೂಕಿನಲ್ಲಿ 1,735 ಬೆಳೆ ಸಮೀಕ್ಷೆ ಆಕ್ಷೇಪಣೆ ಸಲ್ಲಿಕೆಯಾಗಿದ್ದು, ರೈತರ ಹೊಲಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ ಎಂದರು.

ಈ ಬೆಳೆ ಸಮೀಕ್ಷೆಯ ಮಾಹಿತಿಯನ್ನು ರೈತರು ವಿಮೆ, ಬೆಂಬಲ ಬೆಲೆ ಮತ್ತು ನಷ್ಟ ಪರಿಹಾರದಂತಹ ಯೋಜನೆಗಳಿಗೆ ಬಳಸಲಾಗುತ್ತದೆ ಎಂದು ತಿಳಿಸಿದರು. ತೆಕ್ಕಲಕೋಟೆ ಕೃಷಿ ಅಧಿಕಾರಿ ಪುರುಷೋತ್ತಮ ಭಾಗವಹಿಸಿದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.