ಹರಪನಹಳ್ಳಿ: ತಾಲ್ಲೂಕಿನ ಅರಸೀಕೆರೆ ಗ್ರಾಮದಲ್ಲಿ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳುತ್ತಿಲ್ಲ ಎಂದು ಆರೋಪಿಸಿ ಭಾರತ ಕಮ್ಯುನಿಷ್ಟ ಪಕ್ಷ ಮತ್ತು ರೈತ ಮುಖಂಡರು ಗುರುವಾರ ಲೋಕೋಪಯೋಗಿ ಇಲಾಖೆ ಕಚೇರಿಗೆ ಬೀಗ ಜಡಿಯಲು ಯತ್ನಿಸಿದಾಗ, ಪೊಲೀಸರು ಮಧ್ಯಸ್ಥಿಕೆ ವಹಿಸಿದ್ದರಿಂದ ಪ್ರತಿಭಟನೆ ಹಿಂಪಡೆದರು.
ಸಿಪಿಐ ತಾಲ್ಲೂಕು ಕಾರ್ಯದರ್ಶಿ ಗುಡಿಹಳ್ಳಿ ಹಾಲೇಶ್ ಮಾತನಾಡಿ, ಅರಸೀಕೆರೆ ಗ್ರಾಮದ ಪೆಟ್ರೊಲ್ ಬಂಕ್ ಬಳಿ ಒಂದು ಕಿ.ಮೀ ರಸ್ತೆ ನಿರ್ಮಿಸಲು ಅನುದಾನ ಮಂಜೂರಾಗಿ ಟೆಂಡರ್ ನೀಡಲಾಗಿದೆ. ಆದರೆ ಅಧಿಕಾರಿಗಳು ವಿಳಂಬ ನೀತಿಯಿಂದಾಗಿ ಗುತ್ತಿಗೆದಾರರು ರಸ್ತೆ ನಿರ್ಮಿಸುತ್ತಿಲ್ಲ ಎಂದು ದೂರಿದರು.
ತಾಲ್ಲೂಕು ಕೇಂದ್ರಕ್ಕೆ ವಿಚಾರಿಸಲು ಬಂದಾಗ ಪಿಡಬ್ಲ್ಯುಡಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅವರು ಇಡೀ ದಿವಸ ಕಚೇರಿಯಲ್ಲಿ ಸಿಗುತ್ತಿಲ್ಲ. ನಾವು ಯಾರನ್ನು ಕೇಳಬೇಕು ಎಂದು ಪ್ರಶ್ನಿಸಿದರು.
ಮುಖ್ಯದ್ವಾರಕ್ಕೆ ಬೀಗ ಜಡಿಯಲು ಮುಂದಾದಾಗ ಸ್ಥಳಕ್ಕೆ ದೌಡಾಯಿಸಿದ ಎಎಸ್‍ಐ ರುದ್ರಪ್ಪ ಮತ್ತು ತಂಡದ ಸಿಬ್ಬಂದಿ ಪ್ರತಿಭಟನಾಕಾರರ ಮನವೊಲಿಸಿದರು.
ಕಚೇರಿ ಅಧಿಕಾರಿಗಳು ವಾರದೊಳಗಾಗಿ ಕಾಮಗಾರಿ ಆರಂಭಿಸಲು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.