ADVERTISEMENT

ತೋರಣಗಲ್ಲು: ಭಾರಿ ಗಾಳಿಗೆ ಕುಸಿದ ವಿದ್ಯುತ್ ಕಂಬ, ಮರಗಳು

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2024, 16:06 IST
Last Updated 18 ಏಪ್ರಿಲ್ 2024, 16:06 IST
ಕುರೆಕುಪ್ಪದಲ್ಲಿ ಗುರುವಾರ ಭಾರಿ ಗಾಳಿ ಸಹಿತ ಮಳೆ ಸುರಿದಿದ್ದರಿಂದ ಮರದ ಟೊಂಗೆಗಳು ವಿದ್ಯುತ್ ತಂತಿಗಳ ಮೇಲೆ ಹರಿದು ಬಿದ್ದಿವೆ
ಕುರೆಕುಪ್ಪದಲ್ಲಿ ಗುರುವಾರ ಭಾರಿ ಗಾಳಿ ಸಹಿತ ಮಳೆ ಸುರಿದಿದ್ದರಿಂದ ಮರದ ಟೊಂಗೆಗಳು ವಿದ್ಯುತ್ ತಂತಿಗಳ ಮೇಲೆ ಹರಿದು ಬಿದ್ದಿವೆ   

ತೋರಣಗಲ್ಲು: ತೋರಣಗಲ್ಲು ಸೇರಿದಂತೆ ಕುರೆಕುಪ್ಪ, ವಡ್ಡು, ತಾಳೂರು, ಎಸ್.ಬಸಾಪುರ, ಬನ್ನಿಹಟ್ಟಿ, ನಾಗಲಾಪುರ ಸೇರಿದಂತೆ ಇತರೆ ಗ್ರಾಮಗಳಲ್ಲಿ ಗುಡುಗು, ಸಿಡಿಲು, ಭಾರಿ ಗಾಳಿ ಸಹಿತ ಕೆಲಕಾಲ ಗುರುವಾರ ಸಾಧಾರಣ ಮಳೆ ಸುರಿಯಿತು.

ಕುರೆಕುಪ್ಪ ಪಟ್ಟಣದಲ್ಲಿ ಗುಡುಗು, ಸಿಡಿಲು ಹಾಗೂ ಭಾರಿ ಗಾಳಿ ಸಹಿತ ಸಾಧಾರಣ ಮಳೆಯಾಗಿದ್ದು, ಕೆಲಕಾಲ ಪಟ್ಟಣದಲ್ಲಿ ಆಲಿಕಲ್ಲು ಮಳೆ ಸುರಿದಿದೆ. ಪಟ್ಟಣದ 2,4ನೇ ವಾರ್ಡ್ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಸುಮಾರು ಹತ್ತು ಮರಗಳು ಗಾಳಿ ಮಳೆಗೆ ಮುರಿದು ಬಿದ್ದಿವೆ. ಸುಮಾರು ನಾಲ್ಕು ವಿದ್ಯುತ್ ಕಂಬಗಳು ಧರೆಗೆ ಉರುಳಿವೆ.

ಮರಗಳ ಟೊಂಗೆಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದಿದ್ದರಿಂದ ತಂತಿ ಹರಿದು ಬಿದ್ದಿವೆ. ವಿದ್ಯುತ್ ಕಂಬಗಳು ರಸ್ತೆ ಬದಿಯ ಮನೆಗಳ ಬಳಿ ಉರುಳಿ ಬಿದ್ದಿವೆ. ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.

ADVERTISEMENT

ತೋರಣಗಲ್ಲು ಗ್ರಾಮದ 1ನೇ ವಾರ್ಡ್‍ನಲ್ಲಿ ಸಣ್ಣ ಪ್ರಮಾಣದ ಮಳೆ ಸುರಿದರೂ ಸಹ ಓಣಿಯ ರಸ್ತೆಯಲ್ಲಿ ನೀರು ಸಂಗ್ರಹವಾಗುತ್ತಿದ್ದು ನಿವಾಸಿಗಳು ಪ್ರತಿವರ್ಷ ಮಳೆಗಾಲದಲ್ಲಿ ಮಳೆಯ ನೀರಿನಿಂದ ಪರಿತಪಿಸುವಂತಾಗಿದೆ. ಪ್ರಮುಖ ರಸ್ತೆಯಲ್ಲಿ ಮಳೆ ನೀರು ಸಂಗ್ರಹಗೊಂಡಿದ್ದರಿಂದ ವಿವಿಧ ವಾಹನಗಳ ಸವಾರರು ಮಳೆಯ ನೀರಿನಲ್ಲಿ ಕೆಲ ಕಾಲ ಪ್ರಯಾಸಪಟ್ಟು ಸಂಚರಿಸಿದರು.

‘ಕುರೆಕುಪ್ಪ ಪಟ್ಟಣದಲ್ಲಿ ಭಾರಿ ಗಾಳಿ ಸಹಿತ ಮಳೆಯಾಗಿದ್ದರಿಂದ ಪಟ್ಟಣದಲ್ಲಿ ಎಲ್‍ಟಿ ಲೈನ್‌ನ ನಾಲ್ಕು ವಿದ್ಯುತ್‌ ಕಂಬಗಳು ಕುಸಿದಿವೆ. ಕೆಲ ಮರಗಳು ವಿದ್ಯುತ್ ತಂತಿಯ ಮೇಲೆ ಬಿದ್ದರಿಂದ ತಂತಿಗಳು ಹರಿದು ಬಿದ್ದಿದ್ದು ಯಾವುದೇ ಅಪಾಯ ಸಂಭವಿಸಿಲ್ಲ’ ಎಂದು ತೋರಣಗಲ್ಲು ಜೆಸ್ಕಾಂ ಕೇಂದ್ರದ ಶಾಖಾಧಿಕಾರಿ ತುಕಾರಾಂ ಪ್ರತಿಕ್ರಿಯಿಸಿದರು.

ತೋರಣಗಲ್ಲು ಗ್ರಾಮದ 1ನೇ ವಾರ್ಡ್‍ನ ಓಣಿಯಲ್ಲಿ ಮಳೆಯ ನೀರು ಸಂಗ್ರಹಗೊಂಡಿರುವುದು
ತೋರಣಗಲ್ಲು ಗ್ರಾಮದಲ್ಲಿ ಗುರುವಾರ ಸುರಿದ ಮಳೆಗೆ ರಸ್ತೆಯಲ್ಲಿ ನೀರು ಸಂಗ್ರಹಗೊಂಡಿತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.