ADVERTISEMENT

ಕಂಪ್ಲಿ: ಶಾಸನೋಕ್ತ ಯುದ್ಧ ವೀರಗಲ್ಲು ಪತ್ತೆ 

​ಪ್ರಜಾವಾಣಿ ವಾರ್ತೆ
Published 16 ಜನವರಿ 2026, 4:32 IST
Last Updated 16 ಜನವರಿ 2026, 4:32 IST
ಕಂಪ್ಲಿ ತಾಲ್ಲೂಕು ಬಳ್ಳಾಪುರದ ದೊಡ್ಡ ಮಾಯಪ್ಪ ಅವರ ಗದ್ದೆಯಲ್ಲಿ ಪತ್ತೆಯಾದ ಶಾಸನೋಕ್ತ ಯುದ್ಧ ವೀರಗಲ್ಲು
ಕಂಪ್ಲಿ ತಾಲ್ಲೂಕು ಬಳ್ಳಾಪುರದ ದೊಡ್ಡ ಮಾಯಪ್ಪ ಅವರ ಗದ್ದೆಯಲ್ಲಿ ಪತ್ತೆಯಾದ ಶಾಸನೋಕ್ತ ಯುದ್ಧ ವೀರಗಲ್ಲು   

ಕಂಪ್ಲಿ: ತಾಲ್ಲೂಕಿನ ಬಳ್ಳಾಪುರ ಗ್ರಾಮದ ಹರಿಜನ ದೊಡ್ಡ ಮಾಯಪ್ಪ ಅವರ ಗದ್ದೆಯಲ್ಲಿ ‘ಶಾಸನೋಕ್ತ ಯುದ್ಧ ವೀರಗಲ್ಲು’ ಪತ್ತೆಯಾಗಿದೆ.

‘5 ಅಡಿ ಎತ್ತರ 2 ಅಡಿ ಅಗಲವಿರುವ ಕಪ್ಪುಶಿಲೆಯ ಈ ಬೃಹತ್ ಗಾತ್ರದ ವೀರಗಲ್ಲು ಮೂರು ಫಲಕಗಳನ್ನು ಒಳಗೊಂಡಿದೆ. ನಾಗಯ ಎಂಬ ವೀರನು ಚಿಂಮ್ಮತನಕಲ್ಲು ಅಥವಾ ಚಿತ್ರದುರ್ಗ ಕಾಳಗದಲ್ಲಿ ವೀರಮರಣ ಹೊಂದಿದ ಎಂಬ ಉಲ್ಲೇಖವಿದೆ’ ಎಂದು ಪುರಾತತ್ವ ಇಲಾಖೆಯ ಮುನಿರತ್ನಂ ತಿಳಿಸಿದ್ದಾರೆ.

ವೀರಗಲ್ಲಿನ ಕೆಳಭಾಗದಲ್ಲಿ ಕುದುರೆಯನ್ನೇರಿ ಯುದ್ಧದಲ್ಲಿ ನಿರತನಾಗಿರುವ ವೀರ ನಾಗಯನ ಶಿಲ್ಪವಿದೆ. ಈತ ಪ್ರಾಂತ್ಯಾಧಿಕಾರಿ ಮಗನಾಗಿರಬಹುದು ಅಥವಾ ಆಡಳಿತಗಾರ ವರ್ಗದವರಾಗಿರಬಹುದು. ಬಿಲ್ಲು, ಬಾಣ ಹಿಡಿದ ಯೋಧರ, ಮಂಟಪದ ಒಳಗೆ ನಾಗಯ ಕೈ ಮುಗಿದು ಕುಳಿತ, ಅಕ್ಕಪಕ್ಕದಲ್ಲಿ ಸ್ವರ್ಗ ಕನ್ಯೆಯರಾದ ರಂಬೆ, ಊರ್ವಶಿ ಇರುವ ದೃಶ್ಯವನ್ನು ಕೆತ್ತಲಾಗಿದೆ. ಕೆಳ ಮತ್ತು ಮಧ್ಯಭಾಗದ ಫಲಕಗಳ ನಡುವೆ ಮೂರು ಸಾಲಿನ ಶಾಸನವನ್ನು ಬರೆಯಲಾಗಿದೆ.

ADVERTISEMENT

‘ಸಂಡೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕ ನರಸಿಂಹ ತಳವಾರ, ನಾಗರಾಜ್, ಯಲ್ಲಪ್ಪ, ಯಲ್ಲಪ್ಪ ಚಿತ್ತವಾಡಗಿ, ಆಂಜನೇಯ, ಪ್ರೊ. ಮಂಜುನಾಥ, ಪೊಲೀಸ್ ತಿಮ್ಮಯ್ಯ, ಬಸವರಾಜ ಅವರು ಗದ್ದೆಯಲ್ಲಿ ಛಿದ್ರಗೊಂಡು ಬಿದ್ದಿದ್ದ ಈ ವೀರಗಲ್ಲನ್ನು ಪುನಃ ಜೋಡಿಸಿ ರಕ್ಷಿಸುವ ಕಾರ್ಯ ಮಾಡಿದ್ದಾರೆ’ ಎಂದು ಗ್ರಾಮಸ್ಥರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.