ಕೂಡ್ಲಿಗಿ: ಪಟ್ಟಣದಲ್ಲಿ ಮಂಗಳವಾರ ಹೋಳಿಗೆಮ್ಮ ಹಬ್ಬವನ್ನು ಸಂಭ್ರಮ-ಸಡಗರದಿಂದ ಆಚರಿಸಲಾಯಿತು. ಹೆಸರೇ ಹೇಳುವಂತೆ ಹೋಳಿಗೆ ನೈವೇದ್ಯ ಅರ್ಪಿಸುವುದೇ ಈ ಹಬ್ಬದ ವಿಶೇಷವಾಗಿದೆ.
ಮುಂದಿನ ದಿನಗಳಲ್ಲಿ ಉತ್ತಮ ಮಳೆ, ಬೆಳೆಯಾಗಲಿ, ಜನ, ಜಾನುವಾರುಗಳಿಗೆ ಯಾವುದೇ ರೋಗ ರುಜಿನಗಳು ಬರಬಾರದು ಎಂಬ ಉದ್ದೇಶದಿಂದ ಈ ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ.
ಹೋಳಿಗೆಯೊಂದಿಗೆ ಇತರ ಭಕ್ಷ್ಯಗಳನ್ನು ಸಿದ್ಧಪಡಿಸುವ ಮಹಿಳೆಯರು, ಪುಟ್ಟ ಮಡಕೆ, ಅದರಲ್ಲಿ ಬೇವಿನ ಎಲೆಯನ್ನಿರಿಸಿಕೊಂಡು ಪಟ್ಟಣದ ಪ್ರವಾಸಿ ಮಂದಿರದ ಮುಂಭಾಗದಲ್ಲಿರುವ ಊರಮ್ಮ ದೇವಿಯ ಆಲದ ಮರದ ಬಳಿ ಇಟ್ಟು ಹೋದರು. ಈ ರೀತಿ ಎಡೆಯನ್ನು ತೆಗೆದುಕೊಡು ಹೋಗುವಾಗ ಯಾರೊಂದಿಗೂ ಮಾತನಾಡಬಾರದು ಎಂಬ ನಿಯಮವೂ ಇರುವುದರಿಂದ ಜನರು ಮೌನವಾಗಿಯೇ ಮರದತ್ತ ಹೆಜ್ಜೆ ಹಾಕಿದರು.
ಅಲದ ಮರದ ಬುಡದಲ್ಲಿನ ದೇವಸ್ಥಾನದ ಮುಂಭಾಗದಲ್ಲಿ ಎಡೆಯನ್ನಿರಿಸಿದ ನಂತರ ದೇವತೆಗೆ ನಮಸ್ಕರಿಸಿ, ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಕೋರಿ ಮನೆಗೆ ತೆರಳಿದ ಭಕ್ತರು ನಂತರ ಮನೆಯ ಸದಸ್ಯರೊಂದಿಗೆ ಮಾತ್ರ ಊಟ ಮಾಡಿದರು.
ಈ ಹಬ್ಬಕ್ಕೆ ಯಾರನ್ನೂ ಕರೆಯುವಂತಿಲ್ಲ. ಬೇರೆಯವರಿಗೆ ಊಟವನ್ನೂ ಕೊಡುವಂತಿಲ್ಲ. ಅದನ್ನು ತಾವೇ ಊಟ ಮಾಡಬೇಕು ಎಂಬ ನಿಯಮವೂ ಈ ಹಬ್ಬದ ಆಚರಣೆಯಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.