ಹೂವಿನಹಡಗಲಿ: ತಾಲ್ಲೂಕಿನ ಮಾಗಳ ಸೇರಿದಂತೆ ತುಂಗಭದ್ರಾ ನದಿ ತೀರದ ಕೆಲ ಗ್ರಾಮಗಳಲ್ಲಿ ಸಾರ್ವಜನಿಕ ಸ್ಮಶಾನಗಳು ಮುಳುಗಡೆ ಆಗುವುದರಿಂದ ನದಿ ತುಂಬಿ ಹರಿಯುವ ದಿನಗಳಲ್ಲಿ ಮೃತರ ಅಂತ್ಯ ಸಂಸ್ಕಾರ ನೆರವೇರಿಸಲು ಊರಿನ ಜನರು ಹೆಣಗಾಡುವಂತಾಗಿದೆ.
ಜೂನ್‌ನಿಂದ ಡಿಸೆಂಬರ್‌ವರೆಗೆ ಆರೇಳು ತಿಂಗಳು ತುಂಗಭದ್ರಾ ನದಿ ಮೈದುಂಬಿ ಹರಿಯುತ್ತದೆ. ನದಿ ತೀರದ ಮಾಗಳ, ಹೊಸಹಳ್ಳಿ, ಹಿರೇಬನ್ನಿಮಟ್ಟಿ, ಮಕರಬ್ಬಿ, ಬ್ಯಾಲಹುಣ್ಸಿ, ನಂದಿಗಾವಿ ಗ್ರಾಮಗಳಲ್ಲಿನ ಸಾರ್ವಜನಿಕ ಸ್ಮಶಾನಗಳು ಮುಳುಗಡೆ ಆಗುವುದರಿಂದ ಈ ಗ್ರಾಮಗಳಲ್ಲಿ ರಸ್ತೆ ಬದಿಗಳಲ್ಲೇ ಅಂತ್ಯಕ್ರಿಯೆ ನೆರವೇರಿಸುವುದು ಅನಿವಾರ್ಯವಾಗಿದೆ.
ಮಾಗಳ ಗ್ರಾಮದಲ್ಲಿ ರುದ್ರಭೂಮಿಗೆ ಮೀಸಲಿಟ್ಟಿದ್ದ ಒಂದು ಎಕರೆ ಭೂಮಿ ಹಾಗೂ ಮುಸ್ಲಿಮರ ಖಬರಸ್ತಾನ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಹಿನ್ನೀರಿನಲ್ಲಿ ಮುಳುಗಡೆಯಾಗಿದೆ. ಇದಕ್ಕೆ ಪರ್ಯಾಯವಾಗಿ ಸರ್ಕಾರ ಬೇರೆಡೆ ಜಮೀನು ನೀಡಿಲ್ಲ. ಸ್ಥಳೀಯ ರೈತರೊಬ್ಬರು ರುದ್ರಭೂಮಿಗೆ ಜಮೀನು ಬಿಟ್ಟುಕೊಟ್ಟಿದ್ದಾರೆ. ಇದರ ಸುತ್ತಲೂ ಹಿನ್ನೀರು ಸುತ್ತುವರಿಯುವುದರಿಂದ ಅಲ್ಲಿಗೆ ಹೆಣಗಳನ್ನು ಹೊತ್ತು ಸಾಗಲು ಹರಸಾಹಸಪಡಬೇಕಿದೆ. ಅಂತ್ಯಕ್ರಿಯೆಗೆ ತೆರಳಲು ಜನರು ಪರದಾಡುವಂತಾಗಿದೆ.
ತಾಲ್ಲೂಕಿನ ಹಕ್ಕಂಡಿಯಲ್ಲಿ ನದಿಯ ಅಂಚಿನ ಹಳ್ಳವನ್ನೇ ಸ್ಮಶಾನವಾಗಿ ಬಳಸಲಾಗುತ್ತಿದೆ. ಹೂಳಲು ಜಾಗದ ಅಭಾವವಿರುವ ಕಾರಣ ಕೆಲ ಜನಾಂಗದವರು ತಮ್ಮ ಸಂಪ್ರದಾಯಕ್ಕೆ ವಿರುದ್ಧವಾಗಿ ಶವಗಳಿಗೆ ಅಗ್ನಿಸ್ಪರ್ಶ ಮಾಡುತ್ತಿದ್ದಾರೆ.
ತಾಲ್ಲೂಕಿನ ದೇವಗೊಂಡನಹಳ್ಳಿ, ಮಿರಾಕೊರನಹಳ್ಳಿ, ವಿನೋಬನಗರ ಗ್ರಾಮಗಳಲ್ಲಿ ಸಾರ್ವಜನಿಕ ಸ್ಮಶಾನವೇ ಇಲ್ಲ. ಹಳ್ಳ, ರಸ್ತೆ ಬದಿ, ಸಮೀಪದ ಗುಡ್ಡಕ್ಕೆ ಶವಗಳನ್ನು ಹೊಯ್ದು ಅಂತ್ಯಕ್ರಿಯೆ ನೆರವೇರಿಸುತ್ತಿದ್ದಾರೆ.
ನವಲಿ ಗ್ರಾಮದಲ್ಲಿ ಮೂರು ಎಕರೆ ಜಮೀನನ್ನು ಸರ್ಕಾರ ಸ್ಮಶಾನಕ್ಕೆ ಕಾಯ್ದಿರಿಸಿದ್ದು, ಇದಕ್ಕೆ ದಾರಿಯೇ ಇಲ್ಲ. ಸುತ್ತಲಿರುವ ಪಟ್ಟಾ ಭೂಮಿಗಳಲ್ಲಿ ಭತ್ತದ ಗದ್ದೆ ಮಾಡಿಕೊಂಡಿರುವ ರೈತರು ಸ್ಮಶಾನಕ್ಕೆ ದಾರಿ ಬಿಟ್ಟುಕೊಡಲು ಹಿಂದೇಟು ಹಾಕುತ್ತಿದ್ದಾರೆ. ದಾರಿಗೆ ಅಗತ್ಯವಿರುವ ಜಮೀನನ್ನು ಭೂ ಸ್ವಾಧೀನಪಡಿಸಿಕೊಳ್ಳುವಂತೆ ಗ್ರಾಮಸ್ಥರು ಬೇಡಿಕೆ ಇಟ್ಟಿದ್ದಾರೆ. ಅದಕ್ಕೆ ಜಿಲ್ಲಾಡಳಿತದಿಂದ ಸ್ಪಂದನೆ ಸಿಕ್ಕಿಲ್ಲ.
ಸ್ಮಶಾನ ಸಮಸ್ಯೆ ಪರಿಹರಿಸುವಂತೆ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಸಾರ್ವಜನಿಕರು ಸಾಕಷ್ಟು ಬಾರಿ ಮನವಿ ಮಾಡಿದ್ದಾರೆ. ಲಭ್ಯ ಸರ್ಕಾರಿ ಜಮೀನು ಗುರುತಿಸಿ, ಸ್ಮಶಾನಗಳಿಗೆ ಮಂಜೂರು ಮಾಡುವಲ್ಲಿ ಅಧಿಕಾರಿಗಳು ಇಚ್ಛಾಸಕ್ತಿ ತೋರಿಸಿಲ್ಲ.
‘ನದಿ ತೀರದ ಗ್ರಾಮಗಳಲ್ಲಿ ಮಸಣದ ಸಮಸ್ಯೆ ಇರುವುದರಿಂದ ಮೃತರನ್ನು ಗೌರವಯುತ ಅಂತ್ಯ ಸಂಸ್ಕಾರ ನಡೆಸಲು ಪರದಾಡುವ ಪರಿಸ್ಥಿತಿ ಇದೆ. ತಕ್ಷಣ ಸರ್ಕಾರ ಗಮನಹರಿಸಿ, ಸಮಸ್ಯೆ ಇರುವ ಗ್ರಾಮಗಳಿಗೆ ಸ್ಮಶಾನ ಭೂಮಿ ಮಂಜೂರು ಮಾಡಬೇಕು’ ಎಂದು ಮಾಗಳ ಗ್ರಾಮದ ಹಾಲೇಶ, ಹೊಸಹಳ್ಳಿಯ ಎಸ್.ಎಂ.ಶಿವಾನಂದಯ್ಯ ಆಗ್ರಹಿಸಿದ್ದಾರೆ.
ಮಾಗಳ ಹಿರೇಬನ್ನಿಮಟ್ಟಿಯಲ್ಲಿ ಸ್ಮಶಾನಕ್ಕೆ ಜಾಗ ಗುರುತಿಸಿದ್ದೇವೆ. ಕೆಲವೆಡೆ ಸ್ಮಶಾನವಿದ್ದರೂ ಸರಿಯಾದ ದಿಕ್ಕಿನಲಿಲ್ಲ ಎಂಬ ಕಾರಣಕ್ಕೆ ಸ್ಥಳೀಯರು ಉಪಯೋಗಿಸುತ್ತಿಲ್ಲ. ಪರಿಶೀಲಿಸಿ ಕ್ರಮ ವಹಿಸುತ್ತೇವೆಜಿ. ಸಂತೋಷಕುಮಾರ್ ತಹಶೀಲ್ದಾರ್ ಹೂವಿನಹಡಗಲಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.