ADVERTISEMENT

ಜನಾಶೀರ್ವಾದ ಇದ್ದರೆ ಮತ್ತೆ ಸಿಎಂ ಆಗುವೆ: ಸಿದ್ದರಾಮಯ್ಯ

ಮೈಲಾರದಲ್ಲಿ ಕಾಗಿನೆಲೆ ಶಾಖಾ ಮಠ ಉದ್ಘಾಟನೆ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 8 ಮೇ 2019, 13:26 IST
Last Updated 8 ಮೇ 2019, 13:26 IST
ಹೂವಿನಹಡಗಲಿ ತಾಲ್ಲೂಕು ಮೈಲಾರದಲ್ಲಿ ಕಾಗಿನೆಲೆ ಪೀಠದ ಶಾಖಾ ಮಠವನ್ನು ರಾಜ್ಯ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಉದ್ಘಾಟಿಸಿದರು
ಹೂವಿನಹಡಗಲಿ ತಾಲ್ಲೂಕು ಮೈಲಾರದಲ್ಲಿ ಕಾಗಿನೆಲೆ ಪೀಠದ ಶಾಖಾ ಮಠವನ್ನು ರಾಜ್ಯ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಉದ್ಘಾಟಿಸಿದರು   

ಹೂವಿನಹಡಗಲಿ: ‘ಜನಾಶೀರ್ವಾದ ಇದ್ದರೆ ನಾನು ಮತ್ತೆ ಮುಖ್ಯಮಂತ್ರಿ ಆಗುವೆ’ ಎಂದು ರಾಜ್ಯ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದರು.

ತಾಲ್ಲೂಕಿನ ಮೈಲಾರ ಗ್ರಾಮದಲ್ಲಿ ಬುಧವಾರ ಕಾಗಿನೆಲೆ ಶಾಖಾ ಮಠ ‘ಏಳುಕೋಟಿ ಭಕ್ತರ ಕುಟೀರ’ ಉದ್ಘಾಟಿಸಿ ಮಾತನಾಡುವ ವೇಳೆ, ‘ನೀವು ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕು’ ಎಂದು ಸಭಿಕರು ಜೋರಾಗಿ ಕೂಗಿದರು. ‘ಅಯ್ಯೋ ನಂದೆಲ್ಲಾ ಆಗೋಯ್ತಲ್ಲಯ್ಯಾ’ ಎಂದು ಮಾತು ಆರಂಭಿಸಿದ ಸಿದ್ದರಾಮಯ್ಯ, ‘ರಾಜಕಾರಣದಲ್ಲಿ ಏನೇ ಆಗಬೇಕಾದರೂ ಜನರ ಆಶೀರ್ವಾದ, ಬೆಂಬಲ ಬೇಕೇ ಬೇಕು. ಇಲ್ಲದಿದ್ದರೆ ಬರೀ ಬುರುಡೆದಾಸ ಆಗಬೇಕಾಗುತ್ತದೆ. ಅಧಿಕಾರದಲ್ಲಿ ಕೂಡಿಸುವವರು, ಕೆಳಗೆ ಇಳಿಸುವವರೂ ಜನರೇ ಆಗಿದ್ದಾರೆ’ ಎಂದರು.

‘ನಾಡಿನಲ್ಲಿ ಶೋಷಿತ ಸಮುದಾಯಗಳಿಗೆ ಪ್ರತ್ಯೇಕ ಮಠಗಳು ಇಲ್ಲದಂತಹ ಸಂದರ್ಭದಲ್ಲಿ ನಾವು ರಾಜ್ಯ ತಿರುಗಿ ಕಾಗಿನೆಲೆಯಲ್ಲಿ ಕನಕಪೀಠ ಸ್ಥಾಪನೆ ಮಾಡಿದ್ದೇವೆ. ಆದರೆ, ನನ್ನ ಟೀಕೆ ಮಾಡುವ ನಾಯಕರು ಪೀಠಕ್ಕೆ ಯಾವ ಕೊಡುಗೆ ನೀಡಿದ್ದಾರೆ ಎಂದು ಪ್ರಶ್ನಿಸಿದ ಅವರು, ನನ್ನನ್ನು ಟೀಕೆ ಮಾಡುವುದನ್ನು ಬಿಟ್ಟು ಆ ಗಿರಾಕಿಗಳಿಗೆ ಬೇರೆನೂ ಗೊತ್ತಿಲ್ಲ’ ಎಂದು ಟಾಂಗ್ ನೀಡಿದರು.

ADVERTISEMENT

‘ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಹಿಂದುಳಿದ ವರ್ಗಕ್ಕೆ ಒಂದು ಸೀಟೂ ಕೊಡಿಸದ ನಾಯಕರು, ಸೋಲುವ ಕ್ಷೇತ್ರಗಳಲ್ಲಿ ಟಿಕೆಟ್‌ ಕೊಡಿಸಿದ್ದಾರೆ ಎಂದು ನಮ್ಮನ್ನು ಟೀಕಿಸಿದ್ದಾರೆ. ನಾಚಿಕೆಗೆಟ್ಟವರು ಸೋಲುವ ಕ್ಷೇತ್ರಗಳಲ್ಲಾದರೂ ಬಿಜೆಪಿ ಟಿಕೆಟ್‌ ಕೊಡಿಸಬಹುದಿತ್ತಲ್ಲಾ’ ಎಂದು ಕೆ.ಎಸ್‌. ಈಶ್ವರಪ್ಪ ವಿರುದ್ಧ ಪರೋಕ್ಷವಾಗಿ ಹರಿಹಾಯ್ದರು.

ಮುಜರಾಯಿ ಸಚಿವ ಪಿ.ಟಿ.ಪರಮೇಶ್ವರನಾಯ್ಕ ಮಾತನಾಡಿ, ‘ಐದು ವರ್ಷ ಕಾಲ ದಕ್ಷ, ಭ್ರಷ್ಟಾಚಾರ ರಹಿತ ಆಡಳಿತ ನೀಡಿದ ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕು. ಅವರ ಕಾಲದಲ್ಲಿ ನೀಡಿದ ಜನಪರ ಕಾರ್ಯಕ್ರಮಗಳನ್ನು ಜನತೆ ಇಂದಿಗೂ ಸ್ಮರಿಸುತ್ತಾರೆ’ ಎಂದು ಹೇಳಿದರು.

ಕಾಗಿನೆಲೆ ಪೀಠದ ನಿರಂಜನಾನಂದಪುರಿ ಸ್ವಾಮೀಜಿ,ಕಾಗಿನೆಲೆ ಶಾಖಾಮಠಗಳ ಈಶ್ವರಾನಂದಪುರಿ ಸ್ವಾಮೀಜಿ, ಶಿವಾನಂದಪುರಿ ಸ್ವಾಮೀಜಿ, ಸಿದ್ದರಾಮನಂದಪುರಿ ಸ್ವಾಮೀಜಿ, ಸಂಸದ ವಿ.ಎಸ್.ಉಗ್ರಪ್ಪ, ಗುರುವಿನ ಕೊಟ್ರಯ್ಯ, ಶಾಸಕರಾದ ಭೀಮಾ ನಾಯ್ಕ, ರಾಮಪ್ಪ, ಪ್ರಸನ್ನಕುಮಾರ್, ಮಾಜಿ ಸಂಸದ ವಿರೂಪಾಕ್ಷಪ್ಪ, ಮಾಜಿ ಶಾಸಕರಾದ ಸೋಮಶೇಖರ್, ಬಸವರಾಜ ಶಿವಣ್ಣನವರ, ಬಸವರಾಜ ಹಿಟ್ನಾಳ್, ಹಾವೇರಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಸ್.ಕೆ.ಕರಿಯಣ್ಣ, ಕಾರಣಿಕದ ರಾಮಣ್ಣ, ಮುಖಂಡರಾದ ಬಿ.ಹನುಮಂತಪ್ಪ, ಎಂ.ಪರಮೇಶ್ವರಪ್ಪ, ಗಾಜಿಗೌಡ್ರು, ಜೆ.ಕೃಷ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.