ಸಾಂದರ್ಭಿಕ ಚಿತ್ರ
ಬಳ್ಳಾರಿ: ರಾಜ್ಯದ ಹಲವು ಜಿಲ್ಲೆಗಳಲ್ಲಿ ಅನ್ನಭಾಗ್ಯದ ಅಕ್ಕಿ ಪೂರೈಕೆಯಲ್ಲಿ ಭಾರಿ ವ್ಯತ್ಯಯವಾದ ನಡುವೆಯೇ ಬಳ್ಳಾರಿ ಜಿಲ್ಲೆಯಲ್ಲಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ, ಮಾರುವ ದಂಧೆ ಮತ್ತಷ್ಟು ಬಿರುಸುಗೊಂಡಿದೆ.
ಅಕ್ಕಿ ಕೊರತೆ ಕಾರಣ ಸರ್ಕಾರ ಈವರೆಗೆ ರಾಜ್ಯದಾದ್ಯಂತ 5 ಕಿಲೋ ಅಕ್ಕಿ ಮತ್ತು ಇನ್ನು 5 ಕಿಲೋ ಅಕ್ಕಿಗೆ ಹಣ ಸಂದಾಯ ಮಾಡುತಿತ್ತು. ಫೆಬ್ರುವರಿಯಲ್ಲಿ 5 ಕಿಲೋ ಅಕ್ಕಿ ಮಾತ್ರ ವಿತರಣೆಯಾಗಿದೆ. ಬಾಕಿಯಿರುವ 5 ಕಿಲೋ ಅಕ್ಕಿಯನ್ನು 10 ಕಿಲೋದೊಂದಿಗೆ ಸೇರಿಸಿ ಒಟ್ಟು 15 ಕಿಲೋ ಅಕ್ಕಿಯನ್ನು ಈ ತಿಂಗಳು ಕೊಡಲಾಗುತ್ತಿದೆ.
5 ಕಿಲೋ ಅಕ್ಕಿ ಕೊಡುತ್ತಿದ್ದಾಗಲೇ ದಂಧೆಕೋರರು, ಬಿಪಿಎಲ್ ಕಾರ್ಡುದಾರರಿಂದ ಅಕ್ರಮವಾಗಿ ಸಂಗ್ರಹಿಸಿ, ಮಾರುತ್ತಿದ್ದರು. ಸದ್ಯ 10 ಕಿಲೋ ಕೊಡುತ್ತಿರುವುದರಿಂದ ಈ ಜಾಲಕ್ಕೆ ಸುಗ್ಗಿಯಾದಂತೆ ಆಗಿದೆ.
ಮಾರ್ಚ್ 19ರಂದು ಬಳ್ಳಾರಿಯ ಕೌಲ್‌ಬಜಾರ್, ಸಿರುಗುಪ್ಪ ಠಾಣೆ ಸೇರಿ ಮೂರು ಕಡೆ ಕ್ವಿಂಟಲ್‌ಗಟ್ಟಲೇ ಅಕ್ರಮ ಅಕ್ಕಿ ದಾಸ್ತಾನನ್ನು ಪೊಲೀಸರು ಮತ್ತು ಆಹಾರ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಸಿರುಗುಪ್ಪ ಠಾಣೆಯಲ್ಲಿ 211 ಕ್ವಿಂಟಲ್, ಕೌಲ್ ಬಜಾರ್ ಠಾಣೆಯಲ್ಲಿ 50 ಕ್ವಿಂಟಲ್‌ಗೂ ಹೆಚ್ಚಿನ ಅಕ್ಕಿ ವಶಕ್ಕೆ ಪಡೆಯಲಾಗಿದೆ. ಇನ್ನೊಂದೆಡೆ, ದಂಧೆಕೋರರೊಂದಿಗೆ ಶಾಮೀಲಾದ ಆರೋಪದ ಮೇಲೆ ಬಳ್ಳಾರಿ ನಗರದಲ್ಲಿ ಆಹಾರ ಇಲಾಖೆ ಅಧಿಕಾರಿಗಳು ಎರಡು ಪಡಿತರ ಅಂಗಡಿಗಳ ಬಾಗಿಲು ಮುಚ್ಚಿಸಿದ್ದಾರೆ.
ರಾಜ್ಯದಲ್ಲಿ 2024ರ ಏಪ್ರಿಲ್‌ನಿಂದ 2025ರ ಫೆಬ್ರುವರಿವರೆಗಿನ 8 ತಿಂಗಳಲ್ಲಿ ಒಟ್ಟು 346 ಅಕ್ಕಿ ಅಕ್ರಮ ಸಂಗ್ರಹ–ಮಾರಾಟದ ಪ್ರಕರಣ ಪತ್ತೆಯಾಗಿದ್ದು, 285 ಪ್ರಕರಣಗಳು ದಾಖಲಾಗಿವೆ. 308 ಜನರ ಬಂಧನವಾಗಿದೆ. ಒಟ್ಟು ₹14.17 ಕೋಟಿ ಮೌಲ್ಯದ 8,42,711 ಕಿಲೋ ಅಕ್ಕಿ ವಶಕ್ಕೆ ಪಡೆದಿರುವುದು ಸರ್ಕಾರದ ದಾಖಲೆಯಲ್ಲೇ ಇದೆ.
ಬಳ್ಳಾರಿಯೊಂದರಲ್ಲೇ 37 ಪ್ರಕರಣಗಳು ದಾಖಲಾಗಿವೆ. ಒಟ್ಟು ₹34.28 ಲಕ್ಷ ಮೌಲ್ಯದ 1,15,000 ಕಿಲೋ ಅಕ್ಕಿ ವಶಪಡಿಸಿಕೊಳ್ಳಲಾಗಿದೆ. 55 ಜನರನ್ನು ಬಂಧಿಸಲಾಗಿದೆ. 25 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಇದರೊಂದಿಗೆ ಅಕ್ರಮದಲ್ಲಿ ಬಳ್ಳಾರಿ ಜಿಲ್ಲೆ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ.
ಇದನ್ನು ಹೊರತುಪಡಿಸಿದರೆ ಬೀದರ್‌ನಲ್ಲಿ ಅತ್ಯಧಿಕ 40 ಪ್ರಕರಣಗಳು ಪತ್ತೆಯಾಗಿದ್ದು, 47 ಪ್ರಕರಣಗಳು ದಾಖಲಾಗಿವೆ. 87 ಜನರನ್ನು ಬಂಧಿಸಲಾಗಿದೆ. ಆದರೆ, ಅಲ್ಲಿ ವಶಕ್ಕೆ ಪಡೆದ ಅಕ್ಕಿ 74,100 ಕಿಲೋ ಮಾತ್ರ.
‘ಇವು ಪತ್ತೆಯಾದ ಪ್ರಕರಣಗಳು ಅಷ್ಟೆ. ಆದರೆ, ಪಟ್ಟಭದ್ರರ ಪೋಷಣೆಯೊಂದಿಗೆ, ಗಮನಕ್ಕೇ ಬಾರದಂತೆ ನೂರಾರು ಕೋಟಿಗಳ ಲೆಕ್ಕದಲ್ಲಿ ಈ ದಂಧೆ ನಡೆಯುತ್ತಿದೆ’ ಎಂಬ ಆರೋಪಗಳು ಕೇಳಿ ಬಂದಿವೆ.
‘ಸಾರ್ವಜನಿಕರಿಂದ ಕಡಿಮೆ ಹಣಕ್ಕೆ ಅಕ್ಕಿ ಸಂಗ್ರಹಿಸುವ ದಂಧೆಕೋರರು ಅದನ್ನು ಮಿಲ್, ಹೋಟೆಲ್, ಕಾಳ ಸಂತೆಯಲ್ಲಿ ಕಿಲೋಗೆ ₹40ರಿಂದ ₹60ರವರೆಗೆ ಮಾರುತ್ತಿದ್ದಾರೆ. ಪಡಿತರ ಉದ್ದೇಶದ ಅಕ್ಕಿಯನ್ನು ಸಂಗ್ರಹಿಸುವುದು, ಕಾಳ ಸಂತೆಯಲ್ಲಿ ಮಾರುವುದು ಅಕ್ರಮ. ಅದನ್ನು ನಾವು ಹಿಡಿಯಲೇ ಬೇಕು. ಹಿಡಿದ ಕೂಡಲೇ ಪ್ರಭಾವಿಗಳು ಕರೆ ಮಾಡುತ್ತಾರೆ. ದಂಧೆಕೋರರು ಬೆದರಿಸುತ್ತಾರೆ’ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಬಳ್ಳಾರಿಯಲ್ಲಿ ಭತ್ತ ಪ್ರಮುಖ ಬೆಳೆಯಾಗಿದ್ದು, ಅಕ್ಕಿಯ ಲಭ್ಯತೆ ಹೆಚ್ಚು. ಹೀಗಿರುವಾಗ ಸರ್ಕಾರವು ಸಾರ್ವಜನಿಕ ವಿತರಣೆ ವ್ಯವಸ್ಥೆಯಡಿ ಅಕ್ಕಿಯನ್ನೇ ಹೆಚ್ಚಾಗಿ ಪೂರೈಸುತ್ತಿರುವುದು, ಅಕ್ಕಿಯ ದಂಧೆಗೆ ಮೂಲ ಕಾರಣ. ಹೀಗಾಗಿ ಅಕ್ಕಿಯ ಬದಲಿಗೆ ಇನ್ನಿತರ ಪದಾರ್ಥಗಳನ್ನು ನೀಡುವುದೇ ಇದಕ್ಕಿರುವ ಪರಿಹಾರ’ ಎಂದು ಅವರು ಹೇಳಿದರು.
ಈ ಬಾರಿ 15 ಕೆ.ಜಿ ಅಕ್ಕಿ ನೀಡಲಾಗುತ್ತಿದೆ. ಹೀಗಾಗಿ ಅಕ್ಕಿ ಅಕ್ರಮ ಸಂಗ್ರಹ, ಮಾರಾಟ ಚುರುಕಿನಿಂದ ನಡೆಯುತ್ತಿದೆ. 2 ದಿನಗಳಲ್ಲಿ 3 ಲೋಡ್ ಹಿಡಿದಿದ್ದೇವೆ. ಅಕ್ರಮ ನಡೆಯುವುದನ್ನು ತಡೆಯುತ್ತೇವೆಸಕೀನಾ, ಉಪ ನಿರ್ದೇಶಕಿ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ, ಬಳ್ಳಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.