ADVERTISEMENT

ತಾಯಮ್ಮ ಸಂಘದಿಂದ ‘ಜಾಬ್‌ ಬ್ಯೂರೊ’

ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ; ಅಧ್ಯಕ್ಷೆ ಕವಿತಾ ಈಶ್ವರ್‌ ಸಿಂಗ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2018, 11:02 IST
Last Updated 6 ಜುಲೈ 2018, 11:02 IST
ಕವಿತಾ ಈಶ್ವರ್‌ ಸಿಂಗ್‌, ಅಧ್ಯಕ್ಷೆ, ತಾಯಮ್ಮ ಶಕ್ತಿ ಸಂಘ
ಕವಿತಾ ಈಶ್ವರ್‌ ಸಿಂಗ್‌, ಅಧ್ಯಕ್ಷೆ, ತಾಯಮ್ಮ ಶಕ್ತಿ ಸಂಘ   

ಹೊಸಪೇಟೆ: ‘ಸ್ಥಳೀಯ ನಿರುದ್ಯೋಗಿ ಯುವಕ, ಯುವತಿಯರಿಗೆ ಉದ್ಯೋಗ ಕಲ್ಪಿಸುವ ದೃಷ್ಟಿಯಿಂದ ಪ್ರಸಕ್ತ ಸಾಲಿನಿಂದ ತಾಯಮ್ಮ ಶಕ್ತಿ ‘ಜಾಬ್‌ ಬ್ಯೂರೊ’ ಆರಂಭಿಸಿದ್ದು, ಬೆಂಗಳೂರಿನ ‘ಗುರುಕುಲ್‌’ ಸ್ವಯಂ ಸೇವಾ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ’ ಎಂದು ತಾಯಮ್ಮ ಶಕ್ತಿ ಸಂಘದ ಅಧ್ಯಕ್ಷೆ ಕವಿತಾ ಈಶ್ವರ್‌ ಸಿಂಗ್‌ ತಿಳಿಸಿದರು.

ನಗರದ ಸಂಘದ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಐದನೇ ತರಗತಿಯಿಂದ ಪದವಿ ವರೆಗೆ ಶಿಕ್ಷಣ ಪೂರೈಸಿದ 26 ವರ್ಷ ವಯಸ್ಸಿನೊಳಗಿನ ಯುವಕ/ಯುವತಿಯರು ಉದ್ಯೋಗಕ್ಕಾಗಿ ಸಂಘದಲ್ಲಿ ಹೆಸರು ನೋಂದಣಿ ಮಾಡಿಸಬಹುದು’ ಎಂದು ಹೇಳಿದರು.

‘ಉದ್ಯೋಗ ಆಕಾಂಕ್ಷಿಗಳನ್ನು ಸಂಘದಿಂದ ಬೆಂಗಳೂರಿಗೆ ಕಳುಹಿಸಿಕೊಡಲಾಗುವುದು. ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ಗುರುಕುಲ್‌ ಸಂಸ್ಥೆಯು ಉಚಿತ ಊಟ, ವಸತಿಯೊಂದಿಗೆ ಮೂರು ತಿಂಗಳು ತರಬೇತಿ ನೀಡಲಿದೆ. ತರಬೇತಿ ಪಡೆಯಲು ಬಯಸುವವರು ₨500 ಶುಲ್ಕ ಕಟ್ಟಬೇಕು. ಕಂಪ್ಯೂಟರ್‌, ಸ್ಪೋಕನ್‌ ಇಂಗ್ಲಿಷ್‌, ಎಲೆಕ್ಟ್ರಿಶಿಯನ್‌, ಸೇಲ್ಸ್‌ಮ್ಯಾನ್‌, ಬ್ಯುಟಿಷಿಯನ್‌ ಸೇರಿದಂತೆ ಅವರವರ ಅರ್ಹತೆಗೆ ಅನುಗುಣವಾಗಿ ತರಬೇತಿ ನೀಡಲಾಗುವುದು. ಬಳಿಕ ಸಂಸ್ಥೆಯೇ ಸೂಕ್ತವಾದ ಸ್ಥಳದಲ್ಲಿ ಉದ್ಯೋಗ ಕೂಡ ದೊರಕಿಸಿಕೊಡಲಿದೆ’ ಎಂದು ವಿವರಿಸಿದರು.

ADVERTISEMENT

‘ಈ ರೀತಿಯ ಮೂರು ತಿಂಗಳ ತರಬೇತಿಗೆ ಬೇರೆ ಕಡೆಗಳಲ್ಲಿ ₹50 ಸಾವಿರ ಶುಲ್ಕ ವಿಧಿಸುತ್ತಾರೆ. ಆದರೆ, ಈ ಸಂಸ್ಥೆಯಲ್ಲಿ ₨500 ಶುಲ್ಕ ಕಟ್ಟಿ ಹೆಸರು ನೋಂದಣಿ ಮಾಡಿಸಿದರೆ ಸಾಕು. ಪ್ರತಿ ತಿಂಗಳು 180ರಿಂದ 200 ಜನರಿಗೆ ಸಂಸ್ಥೆ ತರಬೇತಿ ಕೊಡಲಿದೆ. ಐದನೇ ತರಗತಿ ಬಳಿಕ ವಿದ್ಯಾಭ್ಯಾಸ ಮುಂದುವರೆಸದವರೂ ಮನೆಯಲ್ಲಿ ಕುಳಿತು ಕಾಲಹರಣ ಮಾಡುವ ಬದಲು ತರಬೇತಿ ಪಡೆದು ಕೆಲಸ ಮಾಡಬಹುದು. ಆಸಕ್ತರು 08394–221544, 81971 01304 ಸಂಪರ್ಕಿಸಿ ಹೆಸರು ನೋಂದಣಿ ಮಾಡಿಸಬಹುದು’ ಎಂದರು.

‘ಕಿರ್ಲೊಸ್ಕರ್‌ ಕಂಪನಿಯಲ್ಲಿ ದಿನಗೂಲಿ ನೌಕರರ ಅಗತ್ಯವಿದೆ. ಸೂಕ್ತರಾದವರನ್ನು ಆಯ್ಕೆ ಮಾಡಿ ಕೆಲಸ ದೊರಕಿಸಿಕೊಡಲಾಗುವುದು. ಸಂಘದಿಂದ ಈಗಾಗಲೇ ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳಿಗೆ ಉಚಿತ ಹೊಲಿಗೆ ತರಬೇತಿ ನೀಡಿ, ಹೊಲಿಗೆ ಯಂತ್ರಗಳನ್ನು ವಿತರಿಸಲಾಗಿದೆ. ಮಹಿಳೆಯರ ಸಬಲೀಕಾರಣಕ್ಕಾಗಿ ಭವಿಷ್ಯದ ದಿನಗಳಲ್ಲಿ ಇನ್ನಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಯೋಜನೆ ಇದೆ’ ಎಂದು ತಿಳಿಸಿದರು.

ಸಂಘದ ಪದಾಧಿಕಾರಿಗಳಾದ ಬೀನಾ, ಕೆ. ರಾಧಾ, ರೂಪಾ ವೆಂಕಟೇಶ, ಪಿ. ಇಂದುಮತಿ, ಲಕ್ಷ್ಮಿ, ಲಲಿತಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.