ADVERTISEMENT

ಕಂಪ್ಲಿ | ಭತ್ತದ ಬದಲು ‘ಜೋಳ’ ನಮೂದು

ದಲ್ಲಾಳಿಗಳಿಂದ ಜೋಳ ಖರೀದಿ: ರೈತ ಸಂಘದ ಆರೋಪ

​ಪ್ರಜಾವಾಣಿ ವಾರ್ತೆ
Published 15 ಜನವರಿ 2026, 2:44 IST
Last Updated 15 ಜನವರಿ 2026, 2:44 IST
ಕಂಪ್ಲಿ ತಹಶೀಲ್ದಾರ್ ಜೂಗಲ ಮಂಜುನಾಯಕ ಅವರೊಂದಿಗೆ ರೈತ ಸಂಘದ ಪದಾಧಿಕಾರಿಗಳು ಜೋಳ ಖರೀದಿಯ ಲೋಪ ಕುರಿತು ಚರ್ಚಿಸಿದರು
ಕಂಪ್ಲಿ ತಹಶೀಲ್ದಾರ್ ಜೂಗಲ ಮಂಜುನಾಯಕ ಅವರೊಂದಿಗೆ ರೈತ ಸಂಘದ ಪದಾಧಿಕಾರಿಗಳು ಜೋಳ ಖರೀದಿಯ ಲೋಪ ಕುರಿತು ಚರ್ಚಿಸಿದರು   

ಕಂಪ್ಲಿ: ಪಹಣಿಯಲ್ಲಿ ಭತ್ತದ ಬದಲು ಜೋಳ ಎಂದು ತಪ್ಪಾಗಿ ತಿದ್ದಿಸಿ, ಖರೀದಿ ಕೇಂದ್ರದಲ್ಲಿ ಜೋಳ ಮಾರಾಟಕ್ಕೆ ದಲ್ಲಾಳಿಗಳಿಂದ ಹೆಸರು ನೋಂದಣಿ ಮಾಡಿಸಲಾಗುತ್ತಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಆರೋಪಿಸಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಬಿ.ವಿ. ಗೌಡ ಮಾತನಾಡಿ, ‘ಜ.14ರಿಂದ ಜೋಳ ಖರೀದಿಗೆ ಹೆಸರು ನೋಂದಣಿ ಆರಂಭವಾಗಿದ್ದು, ಎಮ್ಮಿಗನೂರು ಗ್ರಾಮದಲ್ಲಿ ಏಳೆಂಟು ದಲ್ಲಾಳಿಗಳು ಪಹಣಿ ತಿದ್ದುಪಡಿ ಮಾಡಿಸಿ ಜೋಳ ಖರೀದಿಗೆ ಹೆಸರು ನೋಂದಾಯಿಸಿದ್ದರಿಂದ ನಿಜವಾಗಿ ಜೋಳ ಬೆಳೆದ ರೈತರಿಗೆ ಅನ್ಯಾಯವಾಗಿದೆ. ಪಡಿತರ ಅಂಗಡಿಗಳಿಗೆ ವಿತರಿಸಿದ್ದರೆನ್ನಲಾದ ಜೋಳವನ್ನು ದಲ್ಲಾಳಿಗಳು ಕಡಿಮೆ ಬೆಲೆಗೆ ಖರೀದಿಸಿ ಅವೇ ಜೋಳವನ್ನು ಇದೀಗ ಸರ್ಕಾರಕ್ಕೆ ಮರು ಮಾರಾಟ ಮಾಡುತ್ತಿದ್ದಾರೆ’ ಎಂದು ಆಪಾದಿಸಿದರು.

‘ದಲ್ಲಾಳಿಗಳೊಂದಿಗೆ ಅಧಿಕಾರಿಗಳು ಶಾಮೀಲಾಗಿ, ಸುಮಾರು 500 ಎಕರೆಗೆ ಹೀಗೆ ನಮೂದಿಸಿದ್ದು, ವಿಚಾರಣೆ ನಡೆಸಬೇಕು. ರೈತರಿಂದ 15 ಕ್ವಿಂಟಲ್ ಬದಲು 30 ಕ್ವಿಂಟಲ್ ಜೋಳ ಖರೀದಿಸಬೇಕು’ ಎಂದು ಅವರು ತಹಶೀಲ್ದಾರ್ ಜೂಗಲ ಮಂಜುನಾಯಕ ಅವರಿಗೆ ಬುಧವಾರ ಮನವಿ ಮಾಡಿದರು.

ADVERTISEMENT

ರೈತ ಸಂಘದ ತಾಲ್ಲೂಕು ಅಧ್ಯಕ್ಷ ವಿ. ವೀರೇಶ್ ಮಾತನಾಡಿ, ‘ಬಡ, ಸಣ್ಣ, ಅತಿ ಸಣ್ಣ ರೈತರಿಗೆ ಅನುಕೂಲವಾಗಲಿ ಎಂದು ಕಳೆದ 15 ದಿನಗಳಿಂದ ಸರ್ಕಾರದೊಂದಿಗೆ ಹೋರಾಟ ನಡೆಸಿ ಜೋಳ ಖರೀದಿ ಕೇಂದ್ರ ಆರಂಭಿಸಲು ಸಂಘ ಶ್ರಮಿಸಿದೆ. ಈಗ ತಪ್ಪು ಮಾಡಿದ ಅಧಿಕಾರಿಗಳ ತಲೆದಂಡವಾಗಬೇಕು’ ಎಂದು ಆಗ್ರಹಿಸಿದರು.

ತಹಶೀಲ್ದಾರ್ ಮಂಜುನಾಯಕ ಮಾತನಾಡಿ, ‘ರೈತ ಸಂಘದ ಆರೋಪ ಹಿನ್ನೆಲೆಯಲ್ಲಿ ಜೋಳ ಬೆಳೆದ ಸರ್ವೆ ನಂಬರಿನ ಪಹಣಿಗಳನ್ನು ಪರಿಶೀಲಿಸಲಾಗುವುದು’ ಎಂದು ಸ್ಪಷ್ಟಪಡಿಸಿದರು.

ರೈತ ಸಂಘದ ನಗರ ಅಧ್ಯಕ್ಷ ಎನ್. ತಿಮ್ಮಪ್ಪನಾಯಕ, ತಾಲ್ಲೂಕು ಕಾರ್ಯಾಧ್ಯಕ್ಷ ಕೊಟ್ಟೂರು ರಮೇಶ, ಪದಾಧಿಕಾರಿಗಳಾದ ಆದೋನಿ ರಂಗಪ್ಪ, ಡಿ. ಮುರಾರಿ, ವಿ.ಟಿ. ನಾಗರಾಜ, ಎಮ್ಮಿಗನೂರು ಗ್ರಾಮ ಪಂಚಾಯಿತಿ ಸದಸ್ಯ ಸಾಯಿಬಣ್ಣ, ಆದಿಮನೆ ಸಣ್ಣ ಜಡೆಪ್ಪ, ಬಾರಕೀರ ರಾಜು, ಭಾಸ್ಕರ, ವಿ.ಡಿ. ಜಡೆಪ್ಪ, ನೆಲ್ಲೂಡಿ ರಾಜಾಸಾಬ್, ಮಾರೇಶ್ ಇದ್ದರು.

ಜೋಳ ಖರೀದಿ ಕೇಂದ್ರ ಆರಂಭ

ಸಿರುಗುಪ್ಪ: ನಗರದ ಎ.ಪಿ.ಎಂ.ಸಿ ಮಾರುಕಟ್ಟೆ ಸೇರಿದಂತೆ ತಾಲ್ಲೂಕಿನ ಕೆ.ಬೆಳಗಲ್ ಹಚ್ಚೊಳ್ಳಿ ಬೂದುಗುಪ್ಪ ಕರೂರು ಮುದ್ದಟನೂರು ಅರಳಿಗನೂರು ತಾಳೂರು ಬಿ.ಎಂ. ಸೂಗೂರು ಗ್ರಾಮಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಜೋಳ ಖರೀದಿ ಕೇಂದ್ರ ಆರಂಭಿಸಲಾಗಿದೆ ಎಂದು ತಹಶೀಲ್ದಾರ್ ಗೌಸಿಯಾ ಬೇಗಂ ಹೇಳಿದರು. ತಾಲ್ಲೂಕು ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಮುಂಗಾರು ಜೋಳ ಖರೀದಿ ಕೇಂದ್ರದಲ್ಲಿ ನೋಂದಣಿ ಆರಂಭಿಸಲಾಗಿದ್ದು ನೋಂದಣಿಗೆ ಜ.31 ಕೊನೆಯ ದಿನ. ಹಿಂಗಾರು ಜೋಳ ಖರೀದಿ ಕೇಂದ್ರದಲ್ಲಿ ನೋಂದಣಿಯನ್ನು ಫೆ.2ರಿಂದ ಆರಂಭಿಸಲಾಗುವುದು ಹಾಗೂ ನೋಂದಣಿಗೆ ಮಾರ್ಚ್ 30 ಕೊನೆಯ ದಿನ’ ಎಂದು ತಿಳಿಸಿದರು. ಮುಂಗಾರು ಜೋಳ ಖರೀದಿಯನ್ನು ಫೆ.1ರಿಂದ ಆರಂಭಿಸಿ ಏಪ್ರಿಲ್ 30ರ ವರೆಗೆ ನಡೆಸಲಾಗುವುದು. ಒಬ್ಬ ರೈತರಿಂದ 1 ಎಕರೆಗೆ 15 ಕ್ವಿಂಟಲ್‌ನಂತೆ ಗರಿಷ್ಠ 150 ಕ್ವಿಂಟಲ್ ವರೆಗೆ ಜೋಳ ಖರೀದಿ ಮಿತಿ ಇದೆ. ಜೋಳ ಕ್ವಿಂಟಲ್‌ಗೆ ₹3699 ಎಂಎಸಸ್‌ಪಿ ಇರುತ್ತದೆ’ ಎಂದು ತಹಶೀಲ್ದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.