ಕಂಪ್ಲಿ: ತಾಲ್ಲೂಕಿನ ವಿವಿಧೆಡೆ ಹೆಚ್ಚಿನ ಬೆಲೆಗೆ ರಸಗೊಬ್ಬರ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಘಟಕದ ಪದಾಧಿಕಾರಿಗಳು ತಹಶೀಲ್ದಾರ್ ಜೂಗಲ ಮಂಜುನಾಯಕ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
ಬಳಿಕ ಸಂಘದ ಜಿಲ್ಲಾ ಅಧ್ಯಕ್ಷ ಬಿ.ವಿ. ಗೌಡ ಮಾತನಾಡಿ, ಎಂ.ಆರ್.ಪಿ ದರಕ್ಕೆ ಗೊಬ್ಬರ ಮಾರಾಟ ಮಾಡಬೇಕು ಮತ್ತು ಗೊಬ್ಬರ ಕೃತಕ ಅಭಾವ ಸೃಷ್ಟಿಸಬಾರದು ಎಂದು ಕೃಷಿ ಪರಿಕರ ಮಾರಾಟಗಾರರಿಗೆ ತಹಶೀಲ್ದಾರ್ ಈಗಾಗಲೇ ಸೂಚಿಸಿದ್ದರು. ಆದರೂ, ಉಲ್ಲಂಘಿಸಿ ದುಪ್ಪಟ್ಟು ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂದು ದೂರಿದರು.
ಈ ರೀತಿ ಕಾನೂನು ಉಲ್ಲಂಘಿಸುವ ಮಾರಾಟಗಾರರ ಪರವಾನಗಿಯನ್ನು ರದ್ದಪಡಿಸಬೇಕು. ಅಂಗಡಿ ಮುಂದೆ ದರ ಮತ್ತು ದಾಸ್ತಾನು ಪಟ್ಟಿ ಪ್ರದರ್ಶಿಸದವರ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿದರು.
ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ವಿ. ವೀರೇಶ್ ಮಾತನಾಡಿ, ತಾಲ್ಲೂಕಿನ ಎಮ್ಮಿಗನೂರು ಗ್ರಾಮದಲ್ಲಿ ರಸಗೊಬ್ಬರ ಬೇಕಾದಲ್ಲಿ ರೈತರು ಪಹಣಿ, ಆಧಾರ್‍ಕಾರ್ಡ್, ಸಹಿ ಮಾಡಿದ ಇ-ಸ್ಟ್ಯಾಂಪ್ ಖಾಲಿ ಬಾಂಡ್ ಪೇಪರ್ ನೀಡುವಂತೆ ರಸಗೊಬ್ಬರ ಮಾರಾಟ ಮಾಡುವ ಖಾಸಗಿ ವ್ಯಾಪಾರಿಗಳು ಒತ್ತಾಯಿಸುತ್ತಿದ್ದಾರೆ ಎಂದು ಆರೋಪಿಸಿದರು.
ಎಂ.ಆರ್.ಪಿ ಗಿಂತಂಲೂ ಅಧಿಕ ಬೆಲೆಗೆ ರಸಗೊಬ್ಬರ ಮಾಡುತ್ತಿರುವ ಪ್ರಕರಣವನ್ನು ಕೃಷಿ ಅಧಿಕಾರಿಗಳ ಗಮನಕ್ಕೆ ತಂದರೂ ಮಾರಾಟಗಾರರ ಪರ ಅಧಿಕಾರಿಗಳು ಸಮರ್ಥಿಸಿಕೊಳ್ಳುತ್ತಿರುವುದು ಅವಲೋಕಿಸಿದರೆ ಶಂಕೆ ವ್ಯಕ್ತವಾಗುತ್ತಿದೆ. ಈ ಕುರಿತು ಮೇಲಧಿಕಾರಿಗಳು ವಿಚಾರಣೆ ನಡೆಸುವಂತೆ ಒತ್ತಾಯಿಸಿದರು.
ಸಂಘದ ತಾಲ್ಲೂಕು ಘಟಕದ ಪದಾಧಿಕಾರಿಗಳಾದ ತಿಮ್ಮಪ್ಪ ನಾಯಕ, ಕೊಟ್ಟೂರು ರಮೇಶ, ಚೆಲ್ಲಾ ವೆಂಕಟನಾಯ್ಡು, ಆದೋನಿ ರಂಗಪ್ಪ, ಕಾಗೆ ಈರಣ್ಣ, ಶ್ರೀಧರ, ಗಾದಿಲಿಂಗಪ್ಪ, ಮಳ್ಳೆ ಜಡೆಪ್ಪ, ಧರ್ಮಣ್ಣ, ಓ.ಎಂ.ಸುಮಂತಸ್ವಾಮಿ, ಕೆ.ಎಂ. ಅಡಿವೆಯ್ಯಸ್ವಾಮಿ, ಗುಡಿಸಲು ರಾಜಾಸಾಬ್, ಬುರೆಡ್ಡಿ ಬಸವರಾಜ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.