ಬಳ್ಳಾರಿ: ಬಳ್ಳಾರಿಯಲ್ಲಿ ಈ ವರ್ಷದ ಡಿಸೆಂಬರ್‌ನಲ್ಲಿ ಆಯೋಜಿಸಲು ಉದ್ದೇಶಿಸಿರುವ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಐದು ತಿಂಗಳಷ್ಟೇ ಬಾಕಿ ಉಳಿದಿದೆ. ಆದರೆ, ಪ್ರಕ್ರಿಯೆಗಳಿಗೆ ಇನ್ನೂ ಚಾಲನೆಯೇ ಸಿಕ್ಕಿಲ್ಲ.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಮೇಲಿನ ಭ್ರಷ್ಟಾಚಾರದ ಆರೋಪ, ತನಿಖೆ, ಆರೋಪ ಮಾಡಿದವರ ವಿರುದ್ಧ ಪರಿಷತ್ತಿನ ಅಧ್ಯಕ್ಷರ ಕಾನೂನು ಹೋರಾಟವೂ ಸೇರಿದಂತೆ ಹಲವು ಬಗೆಯ ಗೊಂದಲಗಳು ನೇರವಾಗಿ ಸಮ್ಮೇಳನ ಆಯೋಜನೆ ಮೇಲೆ ಪರಿಣಾಮ ಬೀರುತ್ತಿವೆ.
ಈ ಕಾನೂನು ಹೋರಾಟಗಳ ಪರಿಣಾಮ ಸಚಿವರು, ಅಧಿಕಾರಿಗಳು ಕಸಾಪ ಪದಾಧಿಕಾರಿಗಳ ಜೊತೆ ಕಾಣಿಸಿ
ಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಸಮನ್ವಯದ ಸಮಸ್ಯೆ ಎದುರಾಗಿದೆ. ಸರ್ಕಾರದ ಸಹಕಾರ ಸಿಗದಂತಾಗಿದೆ. ಹೀಗಾಗಿ, ಸಮ್ಮೇಳನದ ಕಾವು ಇಲ್ಲಿ ಕಾಣಿಸುತ್ತಿಲ್ಲ.
ಬಳ್ಳಾರಿ ಸಾಹಿತ್ಯ ಸಮ್ಮೇಳನದ ವಿಚಾರವಾಗಿ ಈವರೆಗೆ ಜಾಗ, ದಿನ ನಿಗದಿಯಾಗಿಲ್ಲ. ಇನ್ನು ಸ್ವಾಗತ ಸಮಿತಿ ರಚನೆ ದೂರದ ಮಾತಾಗಿ ಉಳಿದಿದೆ.
ಸಮ್ಮೇಳನ ನೆನಪಿಗೆ ಹೊತ್ತಿಗೆ ಹೊರತರಲು ಸಿದ್ಧತೆ ಆರಂಭವಾಗಬೇಕು. ವಿಷಯಗಳು ನಿರ್ಧಾರವಾಗಬೇಕು. ಲೇಖಕರಿಂದ ಬರಹ ಆಹ್ವಾನಿಸಬೇಕು. ಪುಸ್ತಕ ಮುದ್ರಣಕ್ಕೆ ಹೋಗಬೇಕು. ಈ ಪ್ರಕ್ರಿಯೆಗೂ ಚಾಲನೆ ಸಿಕ್ಕಿಲ್ಲ.
ಸಮ್ಮೇಳನ ಆಯೋಜಿಸಲು ಕಾರ್ಯಕರ್ತರ ದೊಡ್ಡ ಪಡೆ ಬೇಕು. ಅವರನ್ನು ಏಕಾಏಕಿ ಹೊಂದಿಸಲು ಸಾಧ್ಯವಿಲ್ಲ. ಕಾಲೇಜು ವಿದ್ಯಾರ್ಥಿಗಳು, ಎನ್‌ಎಸ್‌ಎಸ್, ಎನ್‌ಸಿಸಿ, ಸ್ಕೌಟ್, ಸೇವಾದಳದ ಸದಸ್ಯರನ್ನು ಪ್ರೇರೇಪಿಸ
ಬೇಕು. ಇದು ಕೂಡ ಇನ್ನೂ ನಡೆದಿಲ್ಲ.
ವಿಚಾರ ಗೋಷ್ಠಿಗಳ ವಿಷಯ ಕುರಿತು ಜನರ ಅಭಿಪ್ರಾಯ ಕೇಳಬೇಕು. ಜಿಲ್ಲೆಗೆ ಸಂಬಂಧಿಸಿದ ವಿಷಯ ಸಂಗ್ರಹಿಸಬೇಕು. ಈ ಕೆಲಸಗಳಿಗೂ ಚಾಲನೆ ಸಿಕ್ಕಿಲ್ಲ. ಸಮ್ಮೇಳನದ ಕುರಿತು ಈವರೆಗೆ ಒಂದೂ ಪರಿಣಾಮಕಾರಿ ಸಭೆ ನಡೆದಿಲ್ಲ.
ಈ ಮಧ್ಯೆ, ಬಳ್ಳಾರಿಯ ‘ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ’ದ 70 ಎಕರೆ ಪ್ರದೇಶ
ದಲ್ಲಿ ಸಮ್ಮೇಳನ ಆಯೋಜಿಸುವಂತೆ ವಿವಿ ಕುಲಪತಿ ಮುನಿರಾಜು ಪ್ರಸ್ತಾವ ಸಲ್ಲಿಸಿದ್ದಾರೆ ಎನ್ನಲಾಗಿದ್ದು, ಈ ಜಾಗದ ಪರಿಶೀಲನೆ ನಡೆಯುತ್ತಿದೆ ಎನ್ನಲಾಗಿದೆ.
ಉಸ್ತುವಾರಿ ಸಚಿವರ ಪ್ರವಾಸ ರದ್ದು
ಜುಲೈ 22ರಂದು ಜಿಲ್ಲಾ ಪಂಚಾಯಿತಿ ಕೆಡಿಪಿ ಸಭೆಗಾಗಿ ಬಳ್ಳಾರಿ ಉಸ್ತುವಾರಿ ಸಚಿವ ಬಿ.ಝಡ್ ಜಮೀರ್ ಅಹಮದ್ ಖಾನ್ ಬಳ್ಳಾರಿಗೆ ಬರಬೇಕಿತ್ತು. ಅಂದೇ ಅವರು ಸ್ಥಳದ ಪರಿಶೀಲನೆಯನ್ನೂ ನಡೆಸುವವರಿದ್ದರು.
ಆದರೆ, ಜಿಲ್ಲೆಯ ಜನಪ್ರತಿನಿಧಿಗಳ ಅಲಭ್ಯತೆ ಕಾರಣದಿಂದ ಸಚಿವರ ಪ್ರವಾಸ ಮೊಟಕುಗೊಂಡಿದೆ. ಹೀಗಾಗಿ ಜಾಗ ನಿಗದಿ ವಿಳಂಬವಾಗುವ ಸಾಧ್ಯತೆಗಳಿವೆ.
ತಿಂಗಳ ಅಂತ್ಯಕ್ಕೆ ಬಳ್ಳಾರಿಗೆ ಪ್ರವಾಸ ಕೈಗೊಳ್ಳಲಿದ್ದು, ಸಮ್ಮೇಳನಕ್ಕೆ ಸೂಕ್ತ ಜಾಗ ಅಂತಿಮಗೊಳಿಸಿ, ಕೆಲಸ ಕಾರ್ಯಗಳಿಗೂ ಚಾಲನೆ ನೀಡಲಾಗುವುದುಜಮೀರ್ ಅಹಮದ್ ಖಾನ್
ಜಾಗ ನಿಗದಿಗಾಗಿ ಜಿಲ್ಲಾಧಿಕಾರಿ ಜತೆ ಸಂಪರ್ಕದಲ್ಲಿದ್ದೇವೆ. ಸೋಮವಾರದ ಬಳಿಕ ಜಾಗ ಪರಿಶೀಲಿಸಲು ಜಿಲ್ಲಾಧಿಕಾರಿ ಒಪ್ಪಿದ್ದಾರೆನಿಷ್ಠಿ ರುದ್ರಪ್ಪ,
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.