ಹೊಸಪೇಟೆ (ವಿಜಯನಗರ): ಆರನೇ ವೇತನ ಆಯೋಗದ ಶಿಫಾರಸು ಜಾರಿಗೆ ತರಬೇಕೆಂದು ಆಗ್ರಹಿಸಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ಸೋಮವಾರ ಆರನೇ ದಿನಕ್ಕೆ ಕಾಲಿರಿಸಿತು.
ಈಗಲೂ ಹೆಚ್ಚಿನ ಸಿಬ್ಬಂದಿ ಮುಷ್ಕರ ಬೆಂಬಲಿಸಿ ಕೆಲಸಕ್ಕೆ ಗೈರಾಗಿದ್ದಾರೆ. ಜಿಲ್ಲೆಯ ಎಲ್ಲ ತಾಲ್ಲೂಕು ಕೇಂದ್ರಗಳ ಬಸ್ ನಿಲ್ದಾಣದಿಂದ ಬೆರಳೆಣಿಕೆಯಷ್ಟು ಬಸ್‌ಗಳು ಸಂಚಾರ ಬೆಳೆಸಿದವು.
ನಗರದ ಕೇಂದ್ರ ಬಸ್ ನಿಲ್ದಾಣದಿಂದ ಸೋಮವಾರವೂ ಖಾಸಗಿ ವಾಹನಗಳು ವಿವಿಧ ಕಡೆಗಳಿಗೆ ಸಂಚಾರ ಬೆಳೆಸಿದವು. ಸಾರಿಗೆ ಸಂಸ್ಥೆಯವರು ಬಳ್ಳಾರಿಗೆ ಬಸ್ ಬಿಡಲು ಮುಂದಾದಾಗ ಅದಕ್ಕೆ ಖಾಸಗಿ ವಾಹನಗಳವರು ಆಕ್ಷೇಪ ವ್ಯಕ್ತಪಡಿಸಿದರು. ಪ್ರಾದೇಶಿಕ ಸಾರಿಗೆ ಇಲಾಖೆಯ (ಆರ್‌ಟಿಒ) ಅಧಿಕಾರಿಗಳು ಮಧ್ಯ ಪ್ರವೇಶಿಸಿ ವಾತಾವರಣ ತಿಳಿಗೊಳಿಸಿದರು. ಬಳಿಕ ಸಾರಿಗೆ ಸಂಸ್ಥೆ ಹಾಗೂ ಖಾಸಗಿ ಬಸ್‌ಗಳೆರಡೂ ಬಳ್ಳಾರಿಗೆ ಸಂಚರಿಸಿದವು.
‘ಪೂರ್ಣ ಪ್ರಮಾಣದಲ್ಲಿ ಬಸ್ ಸಂಚಾರ ಆರಂಭಗೊಳ್ಳುವವರೆಗೆ ಯಾವ ಭಾಗಕ್ಕೂ ಬಸ್‌ಗಳನ್ನು ಓಡಿಸುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದರು. ಆದರೆ, ಅವರು ಸೋಮವಾರ ಬಳ್ಳಾರಿಗೆ ಬಸ್ ಬಿಟ್ಟಿದ್ದಾರೆ. ಇದರಿಂದ ನಮಗೆ ನಷ್ಟ ಉಂಟಾಗುತ್ತದೆ. ಇದನ್ನೇ ಪ್ರಶ್ನಿಸಿದ್ದೆವು. ಸರ್ಕಾರದ ಸೂಚನೆ ಇರುವುದರಿಂದ ಬಸ್ ಬಿಡಲಾಗಿದೆ ಎಂದು ಆರ್‌ಟಿಒ ಅಧಿಕಾರಿಗಳು ತಿಳಿಸಿದರು. ಹೀಗಾಗಿ ಸುಮ್ಮನಾದೆವು’ ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಖಾಸಗಿ ಬಸ್ ಚಾಲಕ ತಿಳಿಸಿದರು.
ಯುಗಾದಿ ಹಬ್ಬದ ನಿಮಿತ್ತ ಜನ ವಿವಿಧ ಕಡೆಗಳಿಂದ ಅವರ ಊರುಗಳಿಗೆ ತೆರಳಲು ಬಂದದ್ದರಿಂದ ಈ ಹಿಂದಿನ ದಿನಗಳಿಗೆ ಹೋಲಿಸಿದರೆ ಸೋಮವಾರ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ಕಂಡು ಬಂತು. ಖಾಸಗಿ ವಾಹನಗಳವರು ಹೆಚ್ಚಿನ ಸಂಖ್ಯೆಯ ಪ್ರಯಾಣಿಕರನ್ನು ತುಂಬಿಸಿಕೊಂಡು ಕರೆದೊಯ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.