ADVERTISEMENT

ಕೂಡ್ಲಿಗಿ: ಶಾಸಕರ ನಿವಾಸದ ಮೇಲೆ ಇಡಿ ದಾಳಿ

​ಪ್ರಜಾವಾಣಿ ವಾರ್ತೆ
Published 11 ಜೂನ್ 2025, 13:03 IST
Last Updated 11 ಜೂನ್ 2025, 13:03 IST
ಕೂಡ್ಲಿಗಿ ತಾಲ್ಲೂಕಿನ ನರಸಿಂಹಗಿರಿಯಲ್ಲಿ ಶಾಸಕ ಡಾ.ಶ್ರೀನಿವಾಸ ಎನ್.ಟಿ. ನಿವಾಸದ ಮೇಲೆ ಇಡಿ ದಾಳಿ ಹಿನ್ನೆಲೆಯಲ್ಲಿ ತುಮಕೂರಿನಿಂದ ದೌಡಾಯಿಸಿ ಬಂದರು
ಕೂಡ್ಲಿಗಿ ತಾಲ್ಲೂಕಿನ ನರಸಿಂಹಗಿರಿಯಲ್ಲಿ ಶಾಸಕ ಡಾ.ಶ್ರೀನಿವಾಸ ಎನ್.ಟಿ. ನಿವಾಸದ ಮೇಲೆ ಇಡಿ ದಾಳಿ ಹಿನ್ನೆಲೆಯಲ್ಲಿ ತುಮಕೂರಿನಿಂದ ದೌಡಾಯಿಸಿ ಬಂದರು   

ಕೂಡ್ಲಿಗಿ: ಲೋಕಸಭಾ ಚುನಾವಣೆ ವೇಳೆ ವಾಲ್ಮೀಕಿ ನಿಗಮದ ಹಣ ಅಕ್ರಮವಾಗಿ ಬಳಕೆ ಮಾಡಿಕೊಳ್ಳಲಾಗಿದೆ ಎಂಬ ಆರೋಪದ ಮೇಲೆ ಶಾಸಕ ಡಾ.ಶ್ರೀನಿವಾಸ್.ಎನ್‌.ಟಿ ಅವರ ಮನೆಯ ಮೇಲೆ ಬುಧವಾರ ಬೆಳಿಗ್ಗೆ ಜಾರಿ ನಿರ್ದೇನಾಲಯದ (ಇಡಿ) ಅಧಿಕಾರಿಗಳು ದಾಳಿ ಮಾಡಿದ್ದಾರೆ.

ತಾಲ್ಲೂಕಿನ ನರಸಿಂಹಗಿರಿಯಲ್ಲಿರುವ ಶಾಸಕರ ಮನೆಯೊಳಗೆ ಇಡಿ ತನಿಖಾ ತಂಡವೊಂದು ಬೆಳಿಗ್ಗೆ 5 ಗಂಟೆ ಸುಮಾರಿಗೆ ಪ್ರವೇಶ ಮಾಡಿದ್ದು, ದಾಖಲೆಗಳ ಪರಿಶೀಲನೆ ಕೈಗೊಂಡಿದ್ದಾರೆ. ಈ ವೇಳೆ ಮನೆಯಲ್ಲಿ ಶಾಸಕರ ತಾಯಿ ಮಾತ್ರ ಇದ್ದರು. ಒಳಗೆ ಯಾರನ್ನು ಬಿಡದೆ ಮನೆ ಸುತ್ತ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ.

ಮಂಗಳವಾರ ಇಡೀ ದಿನ ಕ್ಷೇತ್ರದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದ ಶಾಸಕರು ಸಂಜೆ ತುಮಕೂರು ಕಡೆ ಹೋಗಿದ್ದರು. ವಿಷಯ ತಿಳಿದ ಶಾಸಕ ಡಾ.ಶ್ರೀನಿವಾಸ್ ಎನ್.ಟಿ. ಅವರು ಬುಧವಾರ ಮಧ್ಯಾಹ್ನದ ವೇಳೆಗೆ ಮರಳಿ ನರಸಿಂಹಗಿರಿಯಲ್ಲಿನ ತಮ್ಮ ನಿವಾಸಕ್ಕೆ ಬಂದಿದ್ದಾರೆ. ಈ ವೇಳೆ ಇಡಿ ಅಧಿಕಾರಿಗಳು ಪ್ರಿಂಟರ್‌ವೊಂದನ್ನು ಮನೆಯೊಳಗೆ ತೆಗೆದುಕೊಂಡು ಹೋದರು ಎಂದು ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ಶಾಸಕರು ಗ್ರಾಮಕ್ಕೆ ಬರುತ್ತಿದ್ದಾರೆ ಎಂದು ತಿಳಿದ ಕಾಂಗ್ರೆಸ್ ಪಕ್ಷದ ಅನೇಕ ಮುಖಂಡರು ಮತ್ತು ಹಿತೈಷಿಗಳು ಹಾಗೂ ಎಂದಿನಂತೆ ಶಾಸಕರ ಬಳಿ ಕಣ್ಣನ್ನು ಪರೀಕ್ಷೆ ಮಾಡಿಸಿಕೊಳ್ಳುವವರು ಸಹ ಶಾಸಕರ ಮನೆ ಬಳಿ ಬಂದಿದ್ದರು.

ಈ ವೇಳೆ ಶಾಸಕ ಡಾ.ಶ್ರೀನಿವಾಸ್ ಎನ್.ಟಿ. ಮಾತನಾಡಿ, ‘ನಾವು ಕಾನೂನು ಗೌರವಿಸೋಣ, ನಾನು ಯಾವುದೇ ಕಾನೂನು ಬಾಹೀರ ಚಟುವಟಿಕೆ ಮಾಡಿಲ್ಲ. ಅದ್ದರಿಂದ ಯಾರು ಆತಂಕಪಡುವ ಅಗತ್ಯವಿಲ್ಲ’ ಎಂದರು. ಸಂಜೆ 6 ಗಂಟೆಯ ನಂತರವೂ ಮನೆಯಲ್ಲಿ ತನಿಖೆ ನಡೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.