ADVERTISEMENT

ಕೂಡ್ಲಿಗಿಗೆ ಇನ್ನೂ ಸಿಗದ ಪುರಸಭೆ ಭಾಗ್ಯ: ಪಟ್ಟಣದ ಅಭಿವೃದ್ಧಿ ಕುಂಠಿತ

ಎ.ಎಂ.ಸೋಮಶೇಖರಯ್ಯ
Published 10 ಡಿಸೆಂಬರ್ 2025, 5:44 IST
Last Updated 10 ಡಿಸೆಂಬರ್ 2025, 5:44 IST
: ಕೂಡ್ಲಿಗಿ ಪಟ್ಟಣ ಪಂಚಾಯ್ತಿ ಕಚೇರಿ ಕಟ್ಟಡ
: ಕೂಡ್ಲಿಗಿ ಪಟ್ಟಣ ಪಂಚಾಯ್ತಿ ಕಚೇರಿ ಕಟ್ಟಡ   

ಕೂಡ್ಲಿಗಿ: ಅಖಂಡ ಜಿಲ್ಲೆಯಲ್ಲಿ ಅನೇಕ ಗ್ರಾಮ ಪಂಚಾಯಿತಿಗಳು ಪುರಸಭೆಯಾಗಿ ಮೇಲ್ದರ್ಜೆಗೆ ಏರಿದ್ದರೂ ತಾಲ್ಲೂಕು ಕೇಂದ್ರವಾಗಿರುವ ಕೂಡ್ಲಿಗಿ ಇನ್ನೂ ಪಟ್ಟಣ ಪಂಚಾಯಿತಿ ಅಗಿಯೇ ಉಳಿದಿದೆ.

ಕಲ್ಯಾಣ ಕರ್ನಾಟಕ ಹೆಬ್ಬಾಗಿಲು ಎಂಬ ಬಿರುದನ್ನು ಹೊಂದಿದ್ದರೂ ಹಿಂದುಳಿದ ತಾಲ್ಲೂಕು ಎಂಬ ಹಣೆಪಟ್ಟಿ ಕಟ್ಟಿಕೊಂಡಿದೆ. ಈ ಹಿಂದೆ ಮಂಡಲ್ ಪಂಚಾಯ್ತಿಯಾಗಿದ್ದ ಪಟ್ಟಣಕ್ಕೆ ನಾಲ್ಕು ಗ್ರಾಮಗಳನ್ನು ಸೇರಿಸಿಕೊಂಡು ಪಟ್ಟಣ ಪಂಚಾಯಿತಿ ಎಂದು ಘೋಷಣೆ ಮಾಡಿ, 20 ವಾರ್ಡ್‌ಗಳನ್ನು ನಿಗದಿ ಮಾಡಲಾಗಿದೆ. ಪುರಸಭೆಯಾಗಲು ಎಲ್ಲ ಆರ್ಹತೆ ಹೊಂದಿದ್ದರೂ ಜನ ಸಂಖ್ಯೆ ಸಾಂದ್ರತೆ ಕಡಿಮೆ ಇದೆ ಎನ್ನುವ ಒಂದೇ ಕಾರಣಕ್ಕೆ ಮೇಲ್ದಾರ್ಜೆಗೇರದೇ ಅಭಿವೃದ್ಧಿ ಕುಂಠಿತಗೊಂಡಿದೆ.

ಪುರಸಭೆ ಕಾಯ್ದೆ ಅನ್ವಯ ಪಟ್ಟಣ ಪಂಚಾಯಿತಿ 20 ರಿಂದ 50 ಸಾವಿರ ಜನ ಸಂಖ್ಯೆ ಹೊಂದಿರಬೇಕು ಹಾಗೂ ಪ್ರತಿ ಚ.ಕಿ.ಮೀ 1500 ಜನಸಾಂದ್ರತೆ ಇರಬೇಕು. 2011ಕ್ಕೆ ಪಟ್ಟಣದ ಜನಸಂಖ್ಯೆ 26680 ಇತ್ತು. ಅಲ್ಲಿಂದ ಶೇ 2.2 ಸರಾಸರಿ ಹೆಚ್ಚಳದಂತೆ 2025ಕ್ಕೆ ಜನ ಸಂಖ್ಯೆ 33440 ಎಂದು ಅಂದಾಜಿಸಲಾಗಿದೆ.

ADVERTISEMENT

ಪಟ್ಟಣ ಪಂಚಾಯಿತಿ ಒಟ್ಟು ವ್ಯಾಪ್ತಿ 32.17 ಚ.ಕಿ.ಮೀ. ಇದ್ದು, ಪ್ರದೇಶಕ್ಕೆ ಅನುಗುಣವಾಗಿ ಜನ ಸಾಂದ್ರತೆ ಇಲ್ಲ ಎಂದು ಹೇಳಲಾಗುತ್ತಿದೆ. ಅಂದರೆ, ಸದ್ಯ ಇರುವ ಜನ ಸಂಖ್ಯೆ ಹಾಗೂ ಪ್ರದೇಶವಾರು ಲೆಕ್ಕೆ ಹಾಕಿದರೆ ಪ್ರತಿ ಚ.ಕಿ.ಮೀಗೆ ಅಂದಾಜು 937 ಜನಸಾಂದ್ರತೆಯಾಗುತ್ತದೆ. ಪಟ್ಟಣದ ವ್ಯಾಪ್ತಿಯಲ್ಲಿ ಶೇ 48ರಷ್ಟು ಕೃಷಿ ಹಾಗೂ ಶೇ 52ರಷ್ಟು ಕೃಷಿಯೇತರ ಚಟುವಟಿಕೆ ಇದೆ. ಪಟ್ಟಣದ ವಾರ್ಷಿಕ ಅದಾಯ ಅಂದಾಜು 2.50 ಕೋಟಿ ಇದ್ದು, ತಲಾ ಆದಾಯ 942 ಇದೆ.

ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕೃಷಿಯೇ ಪ್ರಮುಖ ಉದ್ಯೋಗವಾಗಿದ್ದು, ಕೂಡ್ಲಿಗಿ ಹಾಗೂ ಅಮರದೇವರ ಗುಡ್ಡ ಎರಡು ಕಂದಾಯ ಗ್ರಾಮಗಳಾಗಿವೆ. ಇವುಗಳ ವ್ಯಾಪ್ತಿಯಲ್ಲಿ 9.97 ಚ.ಕಿ.ಮೀ ವಿಸ್ತೀರ್ಣ ಕೃಷಿ ಭೂಮಿ, 3 ಕೆರೆ, ಹಳ್ಳ, ಗುಡ್ಡಗಾಡು ಸೇರಿದಂತೆ 9.97 ಚಕಿಮೀ ಹೊರತುಪಡಿಸಿದರೆ 22.20 ಚಕಿಮೀ ವಿಸ್ತೀರ್ಣವನ್ನು ಹೊಂದುತ್ತದೆ. ಇದರಿಂದ ಪ್ರತಿ ಚಕಿಮೀಗೆ 1506 ಜನಸಾಂದ್ರತೆ ಹೊಂದಿ ಪಟ್ಟಣ ಪುರಸಭೆಯಾಗಲು ಆರ್ಹತೆ ಹೊಂದುತ್ತದೆ. ಆದರೆ ತಾಂತ್ರಿಕವಾಗಿ ಇದು ಅಸಾಧ್ಯವಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಪಟ್ಟಣ ಪಂಚಾಯಿತಿಯಲ್ಲಿ ಅನುಮೋದನೆ ಪಡೆದು ಪುರಸಭೆ ಮಾಡಲು ಈ ಹಿಂದೆ ಎರಡು ಬಾರಿ ಪ್ರಸ್ತಾವ ಕಳಿಸಲಾಗಿತ್ತು. ಅದಕ್ಕೆ ಯಾವುದೇ ಉತ್ತರ ಬಂದಿಲ್ಲ. ಇದರಿಂದ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಕಾವಲ್ಲಿ ಶಿವಪ್ಪ ನಾಯಕ ಅಧ್ಯಕ್ಷತೆಯಲ್ಲಿ 2025ರ ಅಗಸ್ಟ್ 14ರಂದು ಸಭೆ ನಡೆಸಿ ಎಲ್ಲಾ ಮಾಹಿತಿಯೊಂದಿಗೆ ಜಿಲ್ಲಾಧಿಕಾರಿಗೆ ಮತ್ತೆ ಪ್ರಸ್ತಾವನೆ ಕಳಿಸಲಾಗಿದೆ. ಇದೀಗ ಪೌರಾಡಳಿತ ಇಲಾಖೆಯ ಪರಿಶೀಲನೆಯಲ್ಲಿದ್ದು ಜನಸಾಂದ್ರತೆ ನೆಪದಿಂದ ನೆನೆಗುದಿಗೆ ಬಿದ್ದಿದೆ.

ಇದೀಗ ಪಟ್ಟಣ ಪಂಚಾಯ್ತಿ ಅವಧಿ ಮುಗಿದಿದ್ದು, ಮುಂದಿನ ಚುನಾವಣೆ ಹೊತ್ತಿಗೆ ಪಟ್ಟಣ ಪಂಚಾಯ್ತಿಯನ್ನು ಪುರಸಭೆಯನ್ನಾಗಿ ಮೇಲ್ದಾರ್ಜೆಗೆ ಏರಿಸುವ ನಿರೀಕ್ಷೆಯಲ್ಲಿ ಪಟ್ಟಣದ ನಾಗರೀಕರಿದ್ದಾರೆ.

ಹಣಕಾಸು ಸೇರಿದಂತೆ ಕೆಲವು ತಾಂತ್ರಿಕ ಸಮಸ್ಯೆಗಳಿದ್ದು, ಚಳಿಗಾಲದ ಅಧಿವೇಶನದಲ್ಲಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ ಪುರಸಭೆಯನ್ನಾಗಿ ಘೋಷಣೆ ಮಾಡಲು ಕ್ರಮ ಕೈಗೊಳ್ಳಲಾಗುವುದು.

ಡಾ. ಶ್ರೀನಿವಾಸ್ ಎನ್.ಟಿ. ಶಾಸಕರು, ಕೂಡ್ಲಿಗಿ ವಿಧಾನಸಭಾ

ಪಟ್ಟಣ ಪಂಚಾಯ್ತಿಯನ್ನು ಪುರಸಭೆಯಾಗಿ ಮೇಲ್ದರ್ಜೆಗೆ ಏರಿಸಲು ಈಗಾಗಲೇ ಪ್ರಾಸ್ತಾವನೆಯಲ್ಲಿ ಸಲ್ಲಿಸಲಾಗಿದ್ದು, ಸರ್ಕಾರ ಹಂತದಲ್ಲಿ ಪರಿಶೀಲನೆಯಲ್ಲಿದೆ.

ಕಾವಲ್ಲಿ ಶಿವಪ್ಪ ನಾಯಕ, ಅಧ್ಯಕ್ಷ, ಪಟ್ಟಣ ಪಂಚಾಯಿತಿ ಕೂಡ್ಲಿಗಿ

: ಕೂಡ್ಲಿಗಿ ಪಟ್ಟಣ ಪಂಚಾಯ್ತಿ ವ್ಯಾಪ್ತಿ ಮತ್ತು ವಾರ್ಡ್ ನಕಾಶೆ.
ಹಣಕಾಸು ಸೇರಿದಂತೆ ಕೆಲವು ತಾಂತ್ರಿಕ ಸಮಸ್ಯೆಗಳಿದ್ದು, ಚಳಿಗಾಲದ ಅಧಿವೇಶನದಲ್ಲಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ ಪುರಸಭೆಯನ್ನಾಗಿ ಘೋಷಣೆ ಮಾಡಲು ಕ್ರಮ ಕೈಗೊಳ್ಳಲಾಗುವುದು
ಡಾ. ಶ್ರೀನಿವಾಸ್ ಎನ್.ಟಿಶಾಸಕ, ಕೂಡ್ಲಿಗಿ
ಪಟ್ಟಣ ಪಂಚಾಯಿತಿಯನ್ನು ಪುರಸಭೆಯಾಗಿ ಮೇಲ್ದರ್ಜೆಗೇರಿಸಲು ಈಗಾಗಲೇ ಪ್ರಸ್ತಾವ ಸಲ್ಲಿಸಲಾಗಿದ್ದು, ಸರ್ಕಾರದ ಹಂತದಲ್ಲಿ ಪರಿಶೀಲನೆಯಲ್ಲಿದೆ
ಕಾವಲ್ಲಿ ಶಿವಪ್ಪ ನಾಯಕ ಅಧ್ಯಕ್ಷ, ಕೂಡ್ಲಿಗಿ ಪಟ್ಟಣ ಪಂಚಾಯಿತಿ
2 ಬಾರಿ ಪ್ರಸ್ತಾವ ಸಲ್ಲಿಕೆ
ಪಟ್ಟಣ ಪಂಚಾಯಿತಿಯಲ್ಲಿ ಅನುಮೋದನೆ ಪಡೆದು ಪುರಸಭೆ ಮಾಡಲು ಈ ಹಿಂದೆ ಎರಡು ಬಾರಿ ಪ್ರಸ್ತಾವ ಕಳಿಸಲಾಗಿತ್ತು. ಅದಕ್ಕೆ ಯಾವುದೇ ಉತ್ತರ ಬಂದಿಲ್ಲ. ಇದರಿಂದ ಪಟ್ಟಣ ಪಂಚಾಯಿತಿ ಅಧ್ಯಕ್ಷ ಕಾವಲ್ಲಿ ಶಿವಪ್ಪ ನಾಯಕ ಅಧ್ಯಕ್ಷತೆಯಲ್ಲಿ 2025ರ ಆಗಸ್ಟ್ 14ರಂದು ಸಭೆ ನಡೆಸಿ ಎಲ್ಲಾ ಮಾಹಿತಿಯೊಂದಿಗೆ ಜಿಲ್ಲಾಧಿಕಾರಿಗೆ ಮತ್ತೆ ಪ್ರಸ್ತಾವನೆ ಕಳಿಸಲಾಗಿದೆ. ಇದೀಗ ಪೌರಾಡಳಿತ ಇಲಾಖೆಯ ಪರಿಶೀಲನೆಯಲ್ಲಿದ್ದು ಜನಸಾಂದ್ರತೆ ನೆಪದಿಂದ ನನೆಗುದಿಗೆ ಬಿದ್ದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.