ಕೂಡ್ಲಿಗಿ: ‘ಒನಕೆ ಓಬವ್ವ ಉತ್ಸವದ ಜತೆಗೆ ಇನ್ನು ಮುಂದೆ ಪ್ರತಿ ವರ್ಷವೂ ಕ್ಷೇತ್ರದ ಬೇರೆ ಬೇರೆ ಭಾಗದಲ್ಲಿ ‘ಹುಣಸೆ ನಾಡು ಉತ್ಸವ’ ಹಮ್ಮಿಕೊಳ್ಳಲಾಗುವುದು’ ಎಂದು ಶಾಸಕ ಡಾ. ಶ್ರೀನಿವಾಸ್ ಎನ್.ಟಿ. ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ನಡೆದ ಒನಕೆ ಓಬವ್ವ ಉತ್ಸವದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
‘ಫೆಬ್ರುವರಿ 24 ಮತ್ತು 25ರಂದು ಗುಡೇಕೋಟೆಯಲ್ಲಿ ಒನಕೆ ಓಬವ್ವ ಉತ್ಸವ ನಡೆಸಲು ತೀರ್ಮಾನಿಸಲಾಗಿದೆ. ಈ ಬಾರಿ ಯಾವುದೇ ಲೋಪ ಆಗದಂತೆ ನೋಡಿಕೊಳ್ಳಲಾಗುವುದು. 24ರಂದು ಮಧ್ಯಾಹ್ನ 3 ಗಂಟೆಗೆ ಮೆರವಣಿಗೆ, ನಂತರ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಸ್ಥಳೀಯ ಹಾಗೂ ರಾಜ್ಯಮಟ್ಟದ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದರು.
‘ರಾಜ್ಯಮಟ್ಟದ ಪ್ರಶಸ್ತಿ ಪಡೆದ ಕಲಾವಿದರು, ಸೈನಿಕರು ಹಾಗೂ ರೈತರನ್ನು ಸನ್ಮಾನಿಸಲಾಗುವುದು. ಗ್ರಾಮದ ಮೂರು ಕಡೆ ದ್ವಾರ ನಿರ್ಮಿಸಿ, ಬೀದಿಗಳು ಹಾಗೂ ಕೋಟೆಗೆ ದೀಪಾಲಂಕಾರ ಮಾಡಲಾಗುವುದು. ಗುಡೇಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷರ ಜತೆಗೆ ಅಕ್ಕಪಕ್ಕದ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರ ಹೆಸರನ್ನೂ ಆಹ್ವಾನ ಪತ್ರಿಕೆಯಲ್ಲಿ ಸೇರ್ಪಡೆ ಮಾಡಲು ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಲಾಗುವುದು’ ಎಂದು ತಿಳಿಸಿದರು.
ಉಮೇಶ್, ಟಿ. ಓಂಕಾಪ್ಪ, ತಿಪ್ಪೇಸ್ವಾಮಿ, ಶಿವಕುಮಾರ್, ದೇವರಮನೆ ಮಹೇಶ್, ಬಂಗಾಳಿ ನಾಗರಾಜ, ಕಲಾವಿದ ಕೋಗಳಿ ಕೊಟ್ರೇಶ್ ಸೇರಿದಂತೆ ಅನೇಕರು ಸಲಹೆ ನೀಡಿದರು.
ತಹಶೀಲ್ದಾರ್ ಎಂ. ರೇಣುಕಾ, ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್. ಕೃಷ್ಣ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಕಾವಲ್ಲಿ ಶಿವಪ್ಪ ನಾಯಕ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನಸರಪ್ಪ, ಸಿಪಿಐ ತಳವಾರ ಸುರೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಭ ಕರಣಂ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಸ್. ವೆಂಕಟೇಶ್, ಉಪನ್ಯಾಸಕ ನಾಗರಾಜ ಕೊಟ್ರಪ್ಪಗಳ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.