ADVERTISEMENT

ನೀರಾವರಿ ಯೋಜನೆಗೆ ಗ್ರಹಣ: 11 ವರ್ಷಗಳಿಂದ ಕುಂಟುತ್ತಿರುವ ಕುಡುಗೋಲುಮಟ್ಟಿ ಯೋಜನೆ

11 ವರ್ಷಗಳಿಂದ ಕುಂಟುತ್ತಿರುವ ಕುಡುಗೋಲುಮಟ್ಟಿ ಯೋಜನೆ

ಕೆ.ಸೋಮಶೇಖರ
Published 26 ಮಾರ್ಚ್ 2021, 19:30 IST
Last Updated 26 ಮಾರ್ಚ್ 2021, 19:30 IST
ಹೂವಿನಹಡಗಲಿ ತಾಲ್ಲೂಕು ಅಂಗೂರು ಬಳಿ ಪಾಳು ಬಿದ್ದಿರುವ ಕುಡುಗೋಲಮಟ್ಟಿ ಏತ ನೀರಾವರಿ ಯೋಜನೆಯ ಪಂಪ್ ಹೌಸ್
ಹೂವಿನಹಡಗಲಿ ತಾಲ್ಲೂಕು ಅಂಗೂರು ಬಳಿ ಪಾಳು ಬಿದ್ದಿರುವ ಕುಡುಗೋಲಮಟ್ಟಿ ಏತ ನೀರಾವರಿ ಯೋಜನೆಯ ಪಂಪ್ ಹೌಸ್   

ಹೂವಿನಹಡಗಲಿ: ತಾಲ್ಲೂಕಿನ ಅಂಗೂರು ಬಳಿ ನಿರ್ಮಾಣಗೊಂಡಿರುವ ಕುಡುಗೋಲುಮಟ್ಟಿ ಏತ ನೀರಾವರಿ ಯೋಜನೆ ಉದ್ಘಾಟನೆಯಾಗಿ ದಶಕ ಕಳೆದರೂ ರೈತರ ಭೂಮಿಗೆ ಇನ್ನೂ ನೀರು ಹರಿಯುತ್ತಿಲ್ಲ.

ಯೋಜನೆಗೆ ಅಳವಡಿಸಿರುವ ಮೋಟಾರ್, ಯಂತ್ರೋಪಕರಣಗಳು ಚಾಲನೆಗೊಳ್ಳದೇ ತುಕ್ಕು ಹಿಡಿಯಲಾರಂಭಿಸಿವೆ. 2007-08ರಲ್ಲಿ ₹12.03 ಕೋಟಿಯಲ್ಲಿ ಆರಂಭವಾದ ಈ ಯೋಜನೆ 2012ರಲ್ಲಿ ಪೂರ್ಣಗೊಳ್ಳುವ ಹೊತ್ತಿಗೆ ₹16.80 ಕೋಟಿ ಖರ್ಚಾಗಿದೆ. ಕೆಲ ಕಾಮಗಾರಿಗಳು ಬಾಕಿ ಇರುವಾಗಲೇ ಅಂದಿನ ಸಿ.ಎಂ ಜಗದೀಶ ಶೆಟ್ಟರ್ ಈ ಯೋಜನೆ ಉದ್ಘಾಟಿಸಿದ್ದರು.

ಕೆಲವೇ ದಿನಗಳಲ್ಲಿ ಸರ್ಕಾರ, ಶಾಸಕ ಬದಲಾಗಿದ್ದರಿಂದ ಯೋಜನೆಯಲ್ಲಿ ಹಣ ದುರುಪಯೋಗದ ಆರೋಪದಿಂದ ಬಾಕಿ ಕಾಮಗಾರಿಗಳಿಗೆ ನಾಲ್ಕು ವರ್ಷ ಪೂರಕ ಅನುದಾನ ನೀಡಿರಲಿಲ್ಲ. ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ 2017ರಲ್ಲಿ ₹1 ಕೋಟಿ ಬಿಡುಗಡೆಗೊಳಿಸಿದ್ದು, ಕಾಮಗಾರಿ ಆರಂಭಿಸುತ್ತಿದ್ದಂತೆ ರೈತರು ಭೂ ಪರಿಹಾರ ತಗಾದೆ ತೆಗೆದು ಕೆಲಸಕ್ಕೆ ಅಡ್ಡಿಪಡಿಸಿದ್ದರು. ಇದರಿಂದಾಗಿ ಮಹತ್ವಾಕಾಂಕ್ಷಿ ನೀರಾವರಿ ಯೋಜನೆಗೆ ಗ್ರಹಣ ಹಿಡಿಯಿತು.

ADVERTISEMENT

ಈ ಭಾಗದ ಬರಡು ಭೂಮಿಗೆ ನೀರುಣಿಸುವ ಮಹತ್ವದ ಯೋಜನೆ ಅನುಷ್ಠಾನಗೊಳಿಸುವ ಚಿಂತನೆ ನಡೆಸಿದವರು ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ. ಅವರ ಅಧಿಕಾರಾವಧಿಯಲ್ಲೇ ಸಮೀಕ್ಷೆ ಕಾರ್ಯ ನಡೆದಿತ್ತು. ನಂತರ ಬಿ.ಚಂದ್ರನಾಯ್ಕ ಶಾಸಕರಾಗಿದ್ದ ಅವಧಿಯಲ್ಲಿ ಯೋಜನೆಗೆ ಹಣ ಬಿಡುಗಡೆಗೊಳಿಸಿ, ಕಾಮಗಾರಿ ಪೂರ್ಣಗೊಳಿಸಿದ್ದರು.

ತುಂಗಭದ್ರಾ ನದಿಯಿಂದ ಮೋಟಾರ್ ಗಳ ಮೂಲಕ ನೀರನ್ನು ಎತ್ತಿ ಕಾಲುವೆ ಹಾಗೂ ಪೈಪ್ ಲೈನ್ ಮೂಲಕ ರೈತರ ಜಮೀನುಗಳಿಗೆ ನೀರು ಹರಿಸುವುದು ಈ ಯೋಜನೆಯ ಉದ್ದೇಶ. ಬೀರಬ್ಬಿ, ಅಂಗೂರು, ಕೋಟಿಹಾಳ, ಕತ್ತೆಬೆನ್ನೂರು ಗ್ರಾಮಗಳ 2,500 ಎಕರೆ ಕೃಷಿ ಭೂಮಿಗೆ ಯೋಜನೆಯಿಂದ ನೀರಾವರಿ ಸೌಲಭ್ಯ ಸಿಗಲಿದೆ.

ಅಂಗೂರು ಬಳಿ ನದಿ ತೀರದಲ್ಲಿ ಪಂಪ್ ಹೌಸ್ ನಿರ್ಮಿಸಲಾಗಿದೆ. 400 ಅಶ್ವಶಕ್ತಿಯ ಮೂರು, 240 ಅಶ್ವಶಕ್ತಿಯ ಮೂರು ಮೋಟಾರ್ ಗಳನ್ನು ಅಳವಡಿಸಲಾಗಿದೆ. ಕಾಲುವೆ, ಸಿಸ್ಟರ್ನ್ ಗಳ ನಿರ್ಮಾಣ, ಯಂತ್ರೋಪಕರಣ ಹಾಗೂ ಪೈಪ್ ಲೈನ್ ಅಳವಡಿಕೆ, ವಿದ್ಯುದ್ದೀಕರಣ ಕಾಮಗಾರಿ ಮುಗಿದಿದೆ. ಪೈಪ್ ಲೈನ್ ನಲ್ಲಿ ಏರ್ ವಾಲ್ವ್ ಅಳವಡಿಕೆ, ಸರ್ಜ್ ಟ್ಯಾಂಕ್ ನಿರ್ಮಾಣ ಮಾತ್ರ ಬಾಕಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.