ಕುರುಗೋಡು: ಇತಿಹಾಸ ಪ್ರಸಿದ್ಧ ದೊಡ್ಡಬಸವೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಮಾರ್ಚ್ 14ರಂದು (ಶುಕ್ರವಾರ) ಜರುಗಲಿದೆ.
ಪ್ರತಿ ವರ್ಷ ಹೋಳಿ ಹುಣ್ಣಿಮೆ ದಿನ ರಥೋತ್ಸವ ನಡೆದರೂ ಈ ಭಾಗದ ಸುತ್ತಮುತ್ತಲಿನ 33 ಹಳ್ಳಿ ಜನರು ಹಬ್ಬ ಆಚರಿಸದೆ ರಥೋತ್ಸವದಲ್ಲಿ ಭಾಗವಹಿಸುವುದು ವಿಶೇಷ.
ದೇವಸ್ಥಾನದ ಅಲಂಕಾರ, ರಥ ನಿರ್ಮಾಣ ಸೇರಿದಂತೆ ದೇವಸ್ಥಾನದಲ್ಲಿ ರಥೋತ್ಸವಕ್ಕೆ ಸಂಬಂಧಿಸಿದ ಕಾರ್ಯಗಳು ಪೂರ್ಣಗೊಂಡಿದ್ದು, ಪಟ್ಟಣ ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಪಟ್ಟಣದ ನಾಲ್ಕು ದಿಕ್ಕುಗಳ ಮುಖ್ಯರಸ್ತೆಗಳಲ್ಲಿ ವಿದ್ಯುತ್ ದೀಪಗಳ ಅಲಂಕಾರ ಆಕರ್ಷಿಸುತ್ತಿದೆ.
ಹಿನ್ನೆಲೆ: ದೇವಸ್ಥಾನ ಐತಿಹಾಸಿಕ ಮತ್ತು ಧಾರ್ಮಿಕ ಮಹತ್ವ ಹೊಂದಿದೆ. ಕರ್ನಾಟಕದಲ್ಲಿ ಅತ್ಯಂತ ಎತ್ತರವಾದ ಮತ್ತು ದಕ್ಷಿಣ ಭಾರತದಲ್ಲಿ ಎರಡನೇ ಎತ್ತರದ (14 ಅಡಿ) ನಂದಿ ವಿಗ್ರಹ ಹೊಂದಿರುವ ಭವ್ಯ ಮತ್ತು ಸುಂದರ ದೇವಾಲಯ ಇದು.
ದೇವಸ್ಥಾನದ ಪಶ್ಚಿಮಕ್ಕೆ ಮಹಾದ್ವಾರವಿದ್ದು, ಅದರ ಮೇಲೆ ಐದು ಅಂತಸ್ತಿನ 60 ಅಡಿ ಎತ್ತರದ ಶ್ರೀಕೃಷ್ಣದೇವರಾಯರ ಪಟ್ಟಾಭಿಷೇಕದ ಸವಿನೆನಪಿಗಾಗಿ ನಿರ್ಮಿಸಿದ ರಾಜಗೋಪುರ ಇದೆ. ದೇವಸ್ಥಾನದ ಉತ್ತರದಲ್ಲಿ ಸೋಮವಾರ ಬಾಗಿಲು ಇದ್ದು, ಅದರ ಮೇಲೆ 30 ಅಡಿ ಎತ್ತರದ ಗೋಪುರವಿದೆ. 14 ಅಡಿ ಎತ್ತರದ ಬೃಹದಾಕಾರದ ನಂದಿ ವಿಗ್ರಹದಲ್ಲಿ ಕೋಡುಗಳು ಕಿರಿದಾಗಿರುವುದರಿಂದ ‘ಕಿರುಗೋಡು’ ನಂತರ ‘ಕುರುಗೋಡು’ ಎನ್ನುವ ಹೆಸರು ಬಂತು ಎಂಬುದು ಇತಿಹಾಸಕಾರರ ಅಭಿಪ್ರಾಯ.
ಕಲ್ಯಾಣ ಚಾಲುಕ್ಯರ ಅಂತ್ಯಕಾಲದಲ್ಲಿ ನಿರ್ಮಾಣ ಆರಂಭಗೊಂಡಿದ್ದ ಈ ದೇವಾಲಯ ಪೂರ್ಣಗೊಂಡಿದ್ದು ವಿಜಯನಗರದ ಅರಸರ ಕಾಲದಲ್ಲಿ. ಈ ದೇವಾಲಯದಿಂದಲೇ ನಾಡಿನಲ್ಲಿ ಕುರುಗೋಡು ಪ್ರಸಿದ್ದಿ ಪಡೆದಿದೆ.
ರಥೋತ್ಸವದಲ್ಲಿ ಸ್ವತ್ತಿನ ಅಪರಾಧ ನಡೆಯದಂತೆ ನುರಿತ ಸಿಬ್ಬಂದಿ ತಂಡ ರಚಿಸಲಾಗಿದೆ. ಜಾತ್ರೆಗಳಲ್ಲಿ ಸರಕಳ್ಳತನ ಮಾಡಿ ಸಿಕ್ಕಿಬಿದ್ದವರ ಭಾವಚಿತ್ರ ಪ್ರಕಟಿಸಿದೆ. ಹೆಚ್ಚು ಜನರು ಸೇರುವ ಆಯಕಟ್ಟಿನ 25 ಸ್ಥಳಗಳಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿದೆವಿಶ್ವನಾಥ ಕೆ. ಹಿರೇಗೌಡರ್ ಸಿಪಿಐ ಕುರುಗೋಡು
ಜಿಲ್ಲೆಯ ಅತಿ ದೊಡ್ಡ ರಥೋತ್ಸವ ಕುರುಗೋಡಿನಲ್ಲಿ ಜರುಗಲಿದೆ. ಸುಗಮ ಸಂಚಾರಕ್ಕೆ ಪಟ್ಟಣದ ನಾಲ್ಕು ದಿಕ್ಕುಗಳಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಬಂದೋಬಸ್ತ್‌ಗಾಗಿ ಹೆಚ್ಚುವರಿ ಸಿಬ್ಬಂದಿ ಬಳಸಿಕೊಳ್ಳಲಾಗುವುದುಸುಪ್ರಿತ್ ವಿರೂಪಾಕ್ಷಪ್ಪ ಪಿಎಸ್‌ಐ ಕುರುಗೋಡು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.