ADVERTISEMENT

ಕುರುಗೋಡು | ಸ್ಥಳಾಂತರಗೊಂಡರೂ ದೊರೆಯದ ಮೂಲಸೌಕರ್ಯ: ಅಲೆಮಾರಿಗಳ ಬದುಕು ದುಸ್ತರ

ವಾಗೀಶ ಕುರುಗೋಡು
Published 19 ಜನವರಿ 2026, 2:27 IST
Last Updated 19 ಜನವರಿ 2026, 2:27 IST
ಕುರುಗೋಡಿನ ಹಂಡಿಜೋಗಿ ಅಲೆಮಾರಿಗಳಿರುವ ಕಾಲೊನಿಯಲ್ಲಿನ ತಾತ್ಕಾಲಿಕ ಗುಡಿಸಲುಗಳು
ಕುರುಗೋಡಿನ ಹಂಡಿಜೋಗಿ ಅಲೆಮಾರಿಗಳಿರುವ ಕಾಲೊನಿಯಲ್ಲಿನ ತಾತ್ಕಾಲಿಕ ಗುಡಿಸಲುಗಳು   

ಕುರುಗೋಡು: ಪಟ್ಟಣದ ಕಂಪ್ಲಿ ರಸ್ತೆಯ ಖಾಸಗಿ ಜಮೀನಿನಲ್ಲಿ ದಶಕಗಳವರೆಗೆ ತಾತ್ಕಾಲಿಕ ಬಿಡಾರಗಳಲ್ಲಿ ಬದುಕು ನಡೆಸುತ್ತಾ ಬಂದಿದ್ದ ಅಲೆಮಾರಿ ಹಂಡಿಜೋಗಿ ಸಮುದಾಯದ 140 ಕುಟುಂಬಗಳನ್ನು ಕಂಪ್ಲಿ ರಸ್ತೆಯಲ್ಲಿನ ಕಾಲೊನಿಗೆ 7 ವರ್ಷಗಳ ಹಿಂದೆ ಸ್ಥಳಾಂತರಿಸಿದ್ದರೂ, ಮೂಲಸೌಕರ್ಯ ಮಾತ್ರ ಒದಗಿಸಿಲ್ಲ.

ಕಾಲೊನಿಯಲ್ಲಿ ನೆಲೆಸಿರುವ ಕುಟುಂಬಗಳು, ಯಾವುದೇ ಸವಲುತ್ತುಗಳು ಇಲ್ಲದೇ ಬದುಕು ಸಾಗಿಸುವಂತಾಗಿದೆ. ಬಹುತೇಕರು ಗುಡಿಸಲುಗಳಲ್ಲಿ ವಾಸವಾಗಿದ್ದಾರೆ. ರಸ್ತೆ, ಚರಂಡಿ ನಿರ್ಮಾಣವಾಗದ ಕಾರಣ ಮಳೆಗಾಲದಲ್ಲಿ ಇಡೀ ಪ್ರದೇಶ ಕೊಳಕು ನೀರಿನಿಂದ ಆವೃತವಾಗುತ್ತದೆ. ಮಳೆಯ ನೀರಿನಲ್ಲಿ ಹರಿದುಬರುವ ವಿಷಜಂತುಗಳ ಭಯದಲ್ಲೇ ಇಲ್ಲಿನ ನಿವಾಸಿಗಳು ಕಾಲ ಕಳೆಯಬೇಕಾದ ಪರಿಸ್ಥಿತಿ ಇದೆ.

ಕುಡಿಯುವ ನೀರಿಗಾಗಿ ಕಿರುಘಟಕವಿದ್ದರೂ, ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ. ಕುಡಿಯುವ ನೀರಿಗಾಗಿ ಕುರುಗೋಡು ಅಥವಾ ಯಲ್ಲಾಪುರದ ಶುದ್ಧ ಕುಡಿಯುವ ನೀರಿನ ಘಟಕ ಅವಲಂಬಿಸಬೇಕಾಗಿದೆ. ಸಾರ್ವಜನಿಕ ಶೌಚಾಲಯಗಳಿಲ್ಲದೆ, ಸುತ್ತಲಿನ ತೋಟ ಅಥವಾ ಜಮೀನುಗಳಲ್ಲಿ ಬಹಿರ್ದೆಸೆಗೆ ಹೋಗಬೇಕಾಗಿದೆ. ವಿದ್ಯುತ್ ಸಂಪರ್ಕ ಇಲ್ಲದೆ ತೀವ್ರ ತೊಂದರೆ ಉಂಟಾಗಿದೆ.

ADVERTISEMENT

ಇಲ್ಲಿ ನೆಲೆಸಿರುವ ಹಂಡಿಜೋಗಿ ಸಮುದಾಯದ 112 ಕುಟುಂಬಗಳಿಗೆ ನಿವೇಶನ ಹಕ್ಕುಪತ್ರ ದೊರೆತಿದೆ. ಇನ್ನೂ 38 ಕುಟುಂಬಗಳ ಪರಿಸ್ಥಿತಿ ಅತಂತ್ರವಾಗಿದೆ. ಎಲ್ಲ ಕುಟುಂಬದವರೂ ಬಡತನ ರೇಖೆಗಿಂತ ಕೆಳಗಿದ್ದಾರೆ. ಭಿಕ್ಷಾಟನೆ, ಹಸು, ಕುರಿ ಸಾಕಣೆ ಮತ್ತು ಕೂಲಿ ಕೆಲಸದಿಂದ ಬದುಕು ಸಾಗಿಸುತ್ತಿದ್ದಾರೆ.

ಸೌಲಭ್ಯಗಳಿಲ್ಲದ ಚಿಕ್ಕ ಗುಡಿಸಲೊಂದರಲ್ಲಿ ಅಂಗನವಾಡಿ ಕೇಂದ್ರ ನಡೆಯುತ್ತಿದೆ. ಪ್ರಾಥಮಿಕ ಮತ್ತು ಪ್ರೌಢಶಾಲೆಗೆ ಎರಡು ಕಿ.ಮೀ. ದೂರದ ಕುರುಗೋಡು ಪಟ್ಟಣಕ್ಕೆ ನಡೆದುಕೊಂಡೇ ಹೋಗಬೇಕು.

ಕಿರು ನೀರಿನ ಘಟಕದ ಸುತ್ತ ಕೊಳಚೆ ತುಂಬಿದೆ
ನಿವಾಸಿಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಅಧಿಕಾರಿಗಳು ಮತ್ತು ಶಾಸಕರ ಗಮನಕ್ಕೆ ತರಲಾಗಿದೆ. ಸಮಸ್ಯೆಗೆ ಸ್ಪಂದಿಸುವ ಭರವಸೆ ನೀಡಿದ್ದಾರೆ
ಜೋಗಿ ಸುಂಕಪ್ಪ ಪುರಸಭೆ ಮಾಜಿ ಸದಸ್ಯ
ಕಾಲೊನಿಗೆ ವಿದ್ಯುತ್ ಸಂಪರ್ಕವಿಲ್ಲ. ಕತ್ತಲೆಯಲ್ಲಿ ಕಾಲಕಳೆಯಬೇಕಾದ ಪರಿಸ್ಥಿತಿ ಇದೆ. ವಿದ್ಯುತ್ ಸಂಪರ್ಕ ಕಲ್ಪಿಸಿದರೆ ಅನುಕೂಲವಾಗುತ್ತದೆ
ಬಸವರಾಜ ಕಾಲೊನಿ ನಿವಾಸಿ
ಪುರಸಭೆ ಆಡಳಿತ ಮಂಡಳಿ ಜತೆ ಚರ್ಚಿಸಿ ಅಲೆಮಾರಿಗಳು ವಾಸವಿರುವ ಕಾಲೊನಿಗೆ ಮೂಲಸೌಕರ್ಯ ಕಲ್ಪಿಸಲು ಕ್ರಮಕೈಗೊಳ್ಳಲಾಗುವುದು
ದತ್ತಾತ್ರೇಯ ಹೆಗಡೆ ಪುರಸಭೆ ಮುಖ್ಯಾಧಿಕಾರಿ
ಶೌಚಾಲಯವಿಲ್ಲದ ಕಾರಣ ಮಹಿಳೆಯರು ಬೆಳಿಗ್ಗೆ ಅಥವಾ ರಾತ್ರಿ ಬಯಲು ಬಹಿರ್ದೆಸೆಗೆ ಹೋಗಬೇಕು. ಘನತೆಯಿಂದ ಬದುಕಲು ಅವಕಾಶ ಕಲ್ಪಿಸಿಕೊಡಿ
ಚಿನ್ನದಾಸರ ಮಲ್ಲಮ್ಮ ಕಾಲೊನಿ ನಿವಾಸಿ
ಕ್ರಮ ವಹಿಸದ ಆಡಳಿತ
ಕುರುಗೋಡು ಪುರಸಭೆ 17ನೇ ವಾರ್ಡ್ ವ್ಯಾಪ್ತಿಗೆ ಒಳಪಡುವ ಈ ಪ್ರದೇಶಕ್ಕೆ ಅಧಿಕಾರಿಗಳ ಸುಳಿಯುವುದೇ ಇಲ್ಲ. ಜನಪ್ರತಿನಿಧಿಗಳು ಚುನಾವಣೆ ಸಂದರ್ಭದಲ್ಲಿ ಮಾತ್ರ ಭೇಟಿ ನೀಡುತ್ತಾರೆ. ಸೌಲಭ್ಯ ಕಲ್ಪಿಸುವಂತೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಲ್ಲಿ ಅಲವತ್ತುಕೊಂಡರೂ ಕ್ರಮ ವಹಿಸುತ್ತಿಲ್ಲ  ಎಂದು ನಿವಾಸಿಗಳು ಅಳಲು ತೋಡಿಕೊಂಡರು.
ಇವರು ಏನಂತಾರೆ? 

ಪ್ರಗತಿಯಲ್ಲಿದೆ ಕಾಮಗಾರಿ 

ಕಾಲೊನಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅನುದಾನದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಕಟ್ಟಡ ಮತ್ತು ಅಂಗನವಾಡಿ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ.
ಹಂಡಿಜೋಗಿ ಸಂಗೀತಾ ಪುರಸಭೆ ಸದಸ್ಯೆ

ಮನೆ ನಿರ್ಮಿಸಿ  

ಪುರಸಭೆ ನಿವೇಶನ ನೀಡಿದೆ. ಇಲ್ಲಿ ವಾಸಿಸುವ ಬಹುತೇಕರು ಕೂಲಿ ಕೆಲಸ ಮತ್ತು ಭಿಕ್ಷಾಟನೆಯಿಂದ ಜೀವನ ನಡೆಸುತ್ತಾರೆ. ತಾತ್ಕಾಲಿಕ ಗುಡಿಸಲುಗಳಲ್ಲಿ ವಾಸವಿದ್ದೇವೆ. ಮನೆ ನಿರ್ಮಿಸಿಕೊಳ್ಳಲು ಹಣವಿಲ್ಲ. ಸರ್ಕಾರದಿಂದ ಮನೆ ನಿರ್ಮಿಸಿಕೊಡಬೇಕು.
ಮಾರೆಕ್ಕ ಕಾಲೋನಿ ನಿವಾಸಿ

ಮಳೆ ನೀರಿನ ಸಮಸ್ಯೆ 

ಮಳೆಗಾಲದಲ್ಲಿ ಸುತ್ತಲಿನ ಬೆಟ್ಟಗಳಿಂದ ಮಳೆಯ ನೀರು ರಭಸವಾಗಿ ಗುಡಿಸಲುಗಳಿಗೆ ನುಗ್ಗುತ್ತದೆ. ಆ ಸಂದರ್ಭದಲ್ಲಿ ಇಲ್ಲಿ ಜೀವಿಸುವುದು ಕಷ್ಟವಾಗುತ್ತದೆ. ಚರಂಡಿ ರಸ್ತೆಗಳಿಲ್ಲ. ಇಡೀ ಪ್ರದೇಶ ಜಲಾವೃತವಾಗುತ್ತದೆ. ಕಳೆದ ಬಾರಿ ಸುರಿದ ಭಾರಿ ಮಳೆಗೆ ಸಾಕಿದ ಜವಾರಿ ಕೋಳಿ ಮೃತಪಟ್ಟು ನಷ್ಟ ಉಂಟಾಗಿತ್ತು
ಚಿನ್ನದಾಸರ ಬಸವರಾಜ ಕಾಲೊನಿ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.